ಚಿಕ್ಕಬಳ್ಳಾಪುರದಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಎರಡೂ ಜಿಲ್ಲೆಗಳ ಜನರಿಗೆ ಆಘಾತ; ಕೆರೆಗಳಿಗೆ ಇನ್ನೂ ನಿಲ್ಲುವುದಿಲ್ಲ ವಿಷಪ್ರಾಷನ
by M Krishnappa Chikkaballapura
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಹೆಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಗಳ ಮೂಲಕ ಹರಿಸಲಾಗುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಎರಡೂ ಜಿಲ್ಲೆಗಳ ಜನರಿಗೆ ದೊಡ್ಡ ಆಘಾತ ನೀಡಿದ್ದಾರೆ.
ರಾಜಧಾನಿಯ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಬೇಕು ಎಂದು ಎರಡೂ ಜಿಲ್ಲೆಗಳ ಜನರು ನಡೆಸುತ್ತಿರುವ ಹೋರಾಟ ಮತ್ತು ಬಹುದಿನಗಳ ಬೇಡಿಕೆಗೆ ಸರಕಾರ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬುದು ಈಗ ಅಧಿಕೃತವಾಗಿದೆ. ಸ್ವತಃ ಸಂಬಂಧಿತ ಸಚಿವರೇ ಆ ಹೇಳಿಕೆ ನೀಡುವ ಮೂಲಕ ಸರಕಾರವೇ ಈ ಅಂಶವನ್ನು ಒಪ್ಪಿಕೊಂಡಂತೆ ಆಗಿದೆ.
ಕೆಲ ದಿನಗಳ ಹಿಂದೆ ವಿಷಕಾರಿ ತ್ಯಾಜ್ಯ ನೀರಿನಿಂದ ಮೀನುಗಳ ಮಾರಣಹೋಮಕ್ಕೆ ಕಾರಣವಾಗಿದ್ದ ಕಂದವಾರ ಕೆರೆಗೆ ಕಾಟಾಚಾರಕ್ಕೆ ಭೇಟಿ ನೀಡಿದ ಮಾಧುಸ್ವಾಮಿ, ಜಸ್ಟ್ ಉದ್ದಗಲಕ್ಕೂ ತುಂಬಿದ್ದ ಅಸಂಸ್ಕರಿತ ನೀರನ್ನು ಕಣ್ತುಂಬಿಕೊಂಡರಲ್ಲದೆ, ಮೀನುಗಳ ಸಾವು ಹಾಗೂ ನೀರಿನ ಕೆಟ್ಟ ವಾಸನೆ, ಬಣ್ಣ ಬದಲಾಗುವಿಕೆ ಬಗ್ಗೆ ಚಕಾರ ಎತ್ತಲಿಲ್ಲ.
ಈ ಸಂದರ್ಭದಲ್ಲಿ ಮಾನಾಡಿದ ಸಚಿವರು ಹೇಳಿದ್ದಿಷ್ಟು;
- ಸದ್ಯಕ್ಕೆ ಬೆಂಗಳೂರಿನಿಂದ ಹೆಚ್.ಎನ್.ವ್ಯಾಲಿ-ಕೆ.ಸಿ.ವ್ಯಾಲಿ ಮೂಲಕ ಹರಿಸಲಾಗುತ್ತಿರುವ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡುವುದಿಲ್ಲ. ಈಗ ಹರಿದು ಬರುತ್ತಿರುವ ನೀರೇ ಶುದ್ಧವಾಗಿದೆ, ಈ ಬಗ್ಗೆ ತಜ್ಞರು ಕೂಡ ವರದಿ ಮತ್ತು ಅಭಿಪ್ರಾಯ ನೀಡಿದ್ದಾರೆ. ಈ ನೀರಿನಿಂದ ಜನರು, ಜಾನುವಾರು ಹಾಗೂ ಪರಿಸರಕ್ಕೆ ಯಾವುದೇ ಅಪಾಯವಿಲ್ಲ.
- ಒಂದು ವೇಳೆ ಮೂರನೇ ಹಂತದ ಶುದ್ಧೀಕರಣ ಮಾಡಿದರೂ ಪ್ರಯೋಜನ ಇಲ್ಲ. ಎರಡನೇ ಹಂತ ಮತ್ತು ಮೂರನೇ ಹಂತದಲ್ಲಿ ಶುದ್ಧೀಕರಣವಾಗುವ ನೀರಿಗೆ ಅಂಥ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಮೂರನೇ ಹಂತದ ಶುದ್ಧೀಕರಣ ದಂಡ.
ಮಾಧುಸ್ವಾಮಿ ಅವರ ಮಾತುಗಳು ಜಿಲ್ಲೆಯ ಜನರಿಗೆ ತೀವ್ರ ಆಘಾತ ಉಂಟು ಮಾಡಿವೆ. ಸ್ವತಃ ಸಿಕೆನ್ಯೂಸ್ ನೌ ಚಿಕ್ಕಬಳ್ಳಾಪುರದ ಕಂದವಾರ ಮತ್ತು ರಂಗಧಾಮ ಕೆರೆಗಳಲ್ಲಿ ಅಸಂಸ್ಕರಿತ ವಿಷಕಾರಿ ನೀರಿನಿಂದ ಮೀನುಗಳ ಮಾರಣಹೋಮ ನಡೆದಿದ್ದನ್ನು ಸಾಕ್ಷಿ ಸಮೇತ ವರದಿ ಮಾಡಿತ್ತು. ಆದರೆ, ಸಚಿವ ಮಹಾಶಯರು ನೋಡಿದರೆ, ನೀರು ಶುದ್ಧವಾಗಿದೆ. ಕುಡಿಯಲೂ ಅಡ್ಡಿ ಇಲ್ಲ ಫರ್ಮಾನು ಹೊರಡಿಸಿ ಹೋಗಿದ್ದಾರೆ.
- ರಂಗಧಾಮ ಕೆರೆಯಲ್ಲಿ ಕಲುಶಿತ ನೀರಿನಿಂದ ಮೀಸನುಗಳ ಮಾರಣಹೋಮ ಆಗಿದ್ದ ವರಿದಯನ್ನು 2021 ಮೇ 19ರಂದು ಸಿಕೆನ್ಯೂಸ್ ನೌ ವರದಿ ಮಾಡಿತ್ತು. ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಹೆಚ್.ಎನ್.ವ್ಯಾಲಿ ನೀರು ಅನಧಿಕೃತವಾಗಿ ತಿರುಗಿಸಿದವರ ವಿರುದ್ಧ ಕಠಿಣ ಕ್ರಮ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲು ಸರಕಾರ ಜಾರಿ ಮಾಡಿರುವ ಹೆಬ್ಬಾಳ-ನಾಗವಾರ ಕೆರೆಗಳ ತ್ಯಾಜ್ಯ ಸಂಸ್ಕರಿತ ನೀರಿನಿಂದ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆಗಳು ತುಂಬುವ ಅಗತ್ಯವಿದ್ದು, ಮಾರ್ಗಮಧ್ಯೆ ಎಲ್ಲಿಯೂ ನೀರು ಅನಧಿಕೃತವಾಗಿ ತಿರುವು ಪಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದದರು.
- ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಹೆಚ್.ಎನ್.ವ್ಯಾಲಿ ನೀರು ತುಂಬಿಸಲ ಕೋರಿ ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಮಾಜಿ ಸಚಿವ ವಿ.ಮುನಿಯಪ್ಪ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಮತ್ತಿತರೆ ರೈತರು ಮನವಿ ಸಲ್ಲಿಸಿದರು.
ಹೆಚ್.ಎನ್.ವ್ಯಾಲಿ ನೀರು ಹರಿಯುತ್ತಿರುವ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯನ್ನು ಮಂಗಳವಾರ ವೀಕ್ಷಿಸಿದ ನಂತರ ನೀರನ್ನು ಕೆಲವೆಡೆ ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿರುವ ಬಗ್ಗೆ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ನೇತೃತ್ವದಲ್ಲಿ ರೈತರು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವಲ್ಲಿ ಹೆಚ್.ಎನ್.ವ್ಯಾಲಿ ಯೋಜನೆ ಸಹಕಾರಿಯಾಗಿದೆ. ಈ ಯೋಜನೆಯಿಂದ ಹರಿಯುವ ನೀರು ಯೋಜನೆ ವ್ಯಾಪ್ತಿಯ ತುದಿಯಲ್ಲಿರುವ ಕೆರೆಗೂ ಹರಿಯಬೇಕು. ಆ ಮೂಲಕ ಯೋಜನೆಯ ನಿಜವಾದ ಉದ್ದೇಶ ಈಡೇರಬೇಕು ಎಂಬುದು ಸರಕಾರದ ಉದ್ದೇಶ. ಆದರೆ ಬೆಂಗಳೂರಿನ ಹೆಬ್ಬಾಳ-ನಾಗವಾರ ಕೆರೆ ಪ್ರದೇಶದಿಂದ ಹರಿಯುವಾಗ ಮಾರ್ಗ ಮಧ್ಯೆ ಕೆಲ ಜಮೀನುಗಳ ರೈತರು ನೀರನ್ನು ಅನಧಿಕೃತವಾಗಿ ಉಪಯೋಗಿಸಿಕೊಳುತ್ತಿದ್ದಾರೆ ಎಂಬ ದೂರುಗಳಿವೆ. ಇದರಿಂದ ಯೋಜನೆಯ ನಿಜವಾದ ಉದ್ದೇಶಕ್ಕೆ ಧಕ್ಕೆಯಾಗಬಾರದು, ಈ ಕುರಿತು ನೀರು ಅನಧಿಕೃತ ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು. ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೂ ಶೀಘ್ರದಲ್ಲೆ ನೀರು ಹರಿಸಲಾಗುವುದು ಎಂದರು.
ನಾವು ಕೋಲಾರದಲ್ಲಿ ಅಟಲ್ ಭೂಜಲ ಯೋಜನೆಯ ಕಾರ್ಯಕ್ರಮ ಪೂರ್ಣಗೊಳಿಸಿ ಇಲ್ಲಿಗೆ ಬಂದಿದ್ದೇನೆ. ಜಿಲ್ಲೆಯಲ್ಲಿ ಯಾವ ಕೆರೆಗೆ ಎಷ್ಟರಮಟ್ಟಿಗೆ ನೀರು ಹರಿದಿದೆ ಎನ್ನುವುದನ್ನು ನೋಡಲು ಬಂದಿದ್ದೇನೆ. 1,400 ಕೋಟಿ ರೂ. ವೆಚ್ಚದ ವೃಷಭಾವತಿ ವ್ಯಾಲಿ ಯೋಜನೆಯ ಮೂಲಕ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ತುಮಕೂರಿನ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಯ ಡಿಪಿಆರ್ ಆಗುತ್ತಿದೆ ಎಂದು ಮಾಹಿತಿ ಅವರು ನೀಡಿದರು.
210 ಎಂಎಲ್‌ಡಿ ನೀರು ಲಭ್ಯವಿಲ್ಲ
ಎಚ್.ಎನ್.ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್‌ಡಿ ನೀರು ಕೊಡಬೇಕಾಗಿತ್ತು. ಅಷ್ಟು ಪ್ರಮಾಣದ ನೀರು ದೊರೆಯುತ್ತಿಲ್ಲ. ಆದ್ದರಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈಗ 100ರಿಂದ 110 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. ಎರಡು ತಿಂಗಳ ಒಳಗೆ ಬಾಕಿ ನೀರನ್ನು ಹರಿಸಲಾಗುವುದು ಎಂದು ಅವರು ಹೇಳಿದರು.
ಕಂದವಾರ ಕೆರೆ ತುಂಬಿದ ನಂತರ ಗೋಪಾಲಕೃಷ್ಣ ಕೆರೆಗೆ ನೀರು ತುಂಬಿಸಬೇಕು. ಈ ಕೆರೆಯ ಸಾಮರ್ಥ್ಯ 140 ಎಂಸಿಎಫ್‌ಟಿ ಇದೆ. ದೊಡ್ಡ ಕೆರೆಗಳು ತುಂಬುವವರೆಗೆ ಕಾಯಬಾರದು. 30ರಿಂದ 40 ಎಂಸಿಎಫ್‌ಟಿ ಸಾಮರ್ಥ್ಯದ ಕೆರೆಗಳನ್ನು ಮೊದಲು ತುಂಬಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು, ಡಿವೈಎಸ್‌ಪಿ ರವಿಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.