ಗುಡಿಬಂಡೆಯಲ್ಲಿ ಟ್ಯಾಬ್‌ಗಳ ವಿತರಣೆ
by G S Bharath Gudibande
ಗುಡಿಬಂಡೆ: ಆನ್‌ಲೈನ್ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ‘ಟ್ಯಾಬ್’ನ್ನು ಸರ್ಕಾರ ವಿತರಿಸುತ್ತಿದೆ ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಥಮ ಬಿ.ಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಮತ್ತು ಸ್ಮಾರ್ಟ್ ತರಗತಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದರು, ಕೊರೋನಾ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಳ್ಳಿಯ ಸರ್ಕಾರಿ ಬಡಮಕ್ಕಳಿಗೆ ಆನ್ ಲೈನ್ ತರಗತಿಗಳು ಕೈಗೆಟುಕಲಿಲ್ಲ. ಮೊಬೈಲ್, ಟಿವಿ ಇಲ್ಲದ ಸಾಕಷ್ಟು ಕುಟುಂಬಗಳು ನಮ್ಮ ತಾಲ್ಲೂಕಿನಲ್ಲಿದೆ, ಇಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸರ್ಕಾರ ಟ್ಯಾಬ್ ವಿತರಿಸಿದ್ದು ಸಾರ್ಥಕವಾದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೂ.ವಿ.ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಸಕರ ಮೂಲಕ ಟ್ಯಾಬ್ ವಿತರಿಸಿದ್ದು ಸಂತಸವಾಗಿದೆ, ಹಲವು ವರ್ಷಗಳಿಂದ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿ ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ, ಹಾಗೂ ಕಾಲೇಜಿಗೆ ಶೀಘ್ರದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ, ಪಟ್ಟಣ ಪಂಚಾಯತಿ ಸದಸ್ಯ ವಿಕಾಸ್, ರಾಜೇಶ್, ಬಾಗೇಪಲ್ಲಿ ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್, ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ವೆಂಕಟರಾಮು, ರಘು, ಉಪನ್ಯಾಸಕರಾದ ಅಶ್ವಥ್, ಜಯಚಂದ್ರ, ಜಿ.ಎಸ್.ಭರತ್, ಕಾಂಗ್ರೆಸ್ ಮುಖಂಡರಾದ ಅಂಬರೀಶ್ ಸೇರಿದಂತೆ ಮುಂತಾದವರು ಬಾಗವಹಿಸಿದ್ದರು.