ಯಾಕೆ ಹೀಗೆ ಮಾಡಿಬಿಟ್ಟಿರಿ? ಎಲ್ಲರೂ ಹೋಗುವವರೇ? ಇಂದಲ್ಲ, ನಾಳೆ ಅಥವಾ ನಾಡಿದ್ದು. ಆದರೆ ನೀವು ಹೋಗುವ ಸಮಯ ಖಂಡಿತಾ ಇದಾಗಿರಲಿಲ್ಲ. ಬಹಳಷ್ಟು ಆತುರ ನಿಮ್ಮದು. ನಿಮ್ಮ ನಗು, ನಿಮ್ಮ ಮುಗ್ಧತೆ ಅದೆಷ್ಟು ಸಹಜ.. ಅದೆಷ್ಟು ತಿಳಿ. ಅಷ್ಟೇ ಸಹಜತೆಯಿಂದ ಪುಟ್ಟ ಜೀವನವನ್ನು ಮುಗಿಸಿ ನಮ್ಮ ಪಾಲಿಗೆ ಬೆಟ್ಟದಷ್ಟು ಕನಸುಗಳನ್ನು ಬಿಟ್ಟು ಹೊರಟುಬಿಟ್ಟಿದ್ದೀರಿ.
‘ವಾಯುಪುತ್ರ’ದಿಂದ ಮೊದಲುಗೊಂಡು ‘ಆದ್ಯಾ’ ವರೆಗಿನ ನಿಮ್ಮ ಚಿತ್ರಗಳಲ್ಲಿ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದು ’ಅಮ್ಮ ಐ ಲವ್ ಯು’. ಈ ಸಿನಿಮಾದಲ್ಲಿ ನಿಮ್ಮ ನಟನೆ ಮನೋಜ್ಞ. ಪ್ರತಿ ದೃಶ್ಯದಲ್ಲೂ ಕಣ್ಣಾಲಿಗಳಿಗೆ ಕಂಬನಿ ಸ್ಪರ್ಶಿಸುವಂತೆ ಮಾಡಿದ ನಿಮ್ಮ ಅಭಿನಯಕ್ಕೆ ಅದೆಷ್ಟು ದೊಡ್ಡ ’ಅಕ್ಷರಮಾಲೆ’ ಕಟ್ಟಿದರೂ ಸಾಲದು. ಪ್ರತಿ ತಾಯಿಗೂ ನಿಮ್ಮಂಥ ಮಗನೇ ಇರಲಿ ಎನ್ನುವಂತೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ನೀವು, ಆ ಚಿತ್ರದ ಮೂಲಕ ಎಲ್ಲ ಅಮ್ಮಂದಿರ ಕನಸಿನ ಮಗನಾಗಿಬಿಟ್ಟಿದ್ದಿರಿ. ಈಗ ಅಂತಹ ತಾಯಂದಿರಿಂದ ಕಣ್ಣೀರು ಹಾಕಿಸುತ್ತಿದ್ದೀರಿ. ಯಾಕೆ ಹೀಗೆ ಮಾಡಿದಿರಿ ಚಿರಂಜೀವಿ?
ಭಾನುವಾರ ಸಂಜೆ ವೇಳೆಗೆ ನಿಮ್ಮ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಎದೆ ಒಡೆದ ಹಾಗಾಯಿತು. ಕ್ಷಣಮಾತ್ರದಲ್ಲಿ ನಿಮ್ಮ ಕಲ್ಮಶವಿಲ್ಲದ ನಗುವು ಮತ್ತು ’ಅಮ್ಮ ಐ ಲವ್ ಯು’ ಚಿತ್ರದಲ್ಲಿನ ನಿಮ್ಮ ಸಹಜಾಭಿನಯ ಕಣ್ಣಲ್ಲಿ ತುಂಬಿಹೋಯಿತು. ಆಗರ್ಭ ಸಿರಿವಂತರ ಮನೆಮಗನೊಬ್ಬ ಅನಾರೋಗ್ಯಕ್ಕೆ ಗುರಿಯಾದ ತಾಯಿಯನ್ನು ಉಳಿಸಿಕೊಳ್ಳಲು ಒಂದು ಮಂಡಲಕಾಲ ಭಿಕ್ಷಾಟನೆ ಮಾಡುವ ಕಥೆ.. ಹಾಗೆ ಅಮ್ಮನನ್ನು ಉಳಿಸಿಕೊಳ್ಳಲು ಭಿಕ್ಷೆ ಬೇಡಿದ್ದ ನೀವು ಆ ಜವರಾಯನನ್ನು ಹೇಗಾದರೂ ಹಿಮ್ಮಟ್ಟಿಸಿ ಬಹಳಷ್ಟು ದಿನ ನಮ್ಮ ಜತೆಯಲ್ಲೇ ಇರಬಹುದಿತ್ತಲ್ಲವೇ ಚಿರಂಜೀವಿ?
ಸಾವಿನ ಕ್ಷಣಗಳನ್ನು ಎಣಿಸುತ್ತ ಮಲಗಿದ್ದ ತಾಯಿಯನ್ನು ಉಳಿಸಿಕೊಳ್ಳಲು ನೀವೆಷ್ಟು ಕಷ್ಟಪಟ್ಟೀರಿ. ನಿಮಗೆ ಬಿದ್ದ ಪೆಟ್ಟುಗಳೆಷ್ಟೋ, ಆದ ಅಪಮಾನಗಳೆಷ್ಟೋ, ಅಮ್ಮನಿಗಾಗಿ ಹಳಸಿದ ಅನ್ನವನ್ನೂ ತಿನ್ನಬೇಕಾದ ಸ್ಥಿತಿಯಲ್ಲೂ ಅದೇ ಸ್ಥಿಪ್ರಜ್ಞೆ ಮತ್ತು ಮಾತೃಪ್ರೇಮದಿಂದ ಅದು ನಟನೆಯೋ ಅಥವಾ ಚಿರಂಜೀವಿಯೋ ಹೆತ್ತ ಅಮ್ಮನಿಗಾಗಿ ಹೀಗೆ ಮಾಡುತ್ತಿದ್ದಾರೋ ಎನ್ನವಷ್ಟು ಆರ್ದ್ರವಾಗಿ, ಸಹಜವಾಗಿ ನಟಿಸಿದ ನೀವು, ’ನಾನಿನ್ನೂ ಇರಬೇಕು, ಮದುವೆಯಾಗಿ ಎರಡು ವರ್ಷ ದಾಟಿಲ್ಲ. ಅಪ್ಪನಾಗಬೇಕು, ನನ್ನ ಹೆತ್ತಪ್ಪನನ್ನು ತಾತನನ್ನಾಗಿಸಬೇಕು, ನೆಚ್ಚಿನ ಮಡದಿಯ ಮೊಗದಲ್ಲಿ ಆನಂದ ಕಾಣಬೇಕು, ಪ್ರೀತಿಸಿ ಹಾರೈಸುವ ಅಭಿಮಾನಿಗಳನ್ನು ಚಿರಕಾಲ ಮನರಂಜಿಸಬೇಕು’ ಎಂದು ಆ ದೇವರನ್ನು ಕೇಳಿಕೊಳ್ಳಬಾರದಾಗಿತ್ತೆ ಚಿರಂಜೀವಿ? ಯಾಕಿಷ್ಟು ಆತುರ? ನಿಮ್ಮನ್ನು ಕರೆದೊಯ್ದ ಜವರಾಯನಿಗೆ ಧಿಕ್ಕಾರ.
ಅಮ್ಮ.. ಚಿತ್ರದಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ತೊಯ್ದು ನಡುಗುತ್ತಿದ್ದ ನಿಮ್ಮನ್ನು ಹುಡುಕಿಕೊಂಡು ಬಂದ ನಿಮ್ಮ ಪ್ರೇಯಸಿ, ಕೈಗೊಂದು ರೇನ್‌ಕೋಟು, ಒಂದಿಷ್ಟು ಕಾಸು ಕೊಡಲು ಬಂದಾಗ ನಿರಾಕರಿಸುವ ನೀವು, ಮೌನವಾಗಿ ನಿಂತುಬಿಟ್ಟಾಗ ಆ ಹುಡುಗಿ ಕೇಳುತ್ತಾಳೆ. ‘ಭಿಕ್ಷೆಯಾಗಿ ಇದನ್ನು ಹಾಕಿದರೆ ತೆಗೆದುಕೊಳ್ಳುತ್ತೀಯಾ?’.. ಮರುಕ್ಷಣವೇ ನಡುರಸ್ತೆಯಲ್ಲಿ ಮೊಣಕಾಲೂರಿ ಭಿಕ್ಷೆಗೆ ಕೈಚಾಚುವ ನೀವು ನನ್ನ ಕಣ್ಣುಗಳನ್ನು ತುಂಬಿಸಿದ್ದು ಸುಳ್ಳಲ್ಲ. ಆ ಕ್ಷಣ ನನ್ನ ಕಂಗಳಿಂದ ಜಾರಿಬಿದ್ದ ಹನಿಯಲ್ಲಿ ನೀವಿದ್ದಿರಿ. ಅಷ್ಟು ಸಹಜ ಅಭಿನಯದ ನೀವು ಆ ಸಾವಿನ ರಾಜನನ್ನು ನಿಜವಾಗಿ ಹಿಮ್ಮೆಟ್ಟಿಸಲಾಗಲಿಲ್ಲವಲ್ಲ. ಅಟ್‌ಲೀಸ್ಟ್, ಮಡದಿಗಾಗಿ, ಮನೆಯವರಿಗಾಗಿಯಾದರೂ ಇನ್ನಷ್ಟು ದಿನ ಟೈಂ ಕೊಡು ಎಂದು ಅವನನ್ನು ಕೇಳಬಹುದಿತ್ತಲ್ಲವೇ? ಯಾಕೆ ಹೀಗೆ ಮಾಡಿಬಿಟ್ಟಿರಿ ಚಿರಂಜೀವಿ?
ಭಿಕ್ಷಾಟನೆ ವ್ರತವನ್ನು ಪೂರೈಸಿ ಮನೆಗೋಡಿ ಬರುವ ನೀವು ಸಾವಿನ ಹಾಸಿಗೆಯಲ್ಲಿ ಇನ್ನು ನಿಶ್ಚಲವಾಗಿ ಮಲಗಿದ್ದ ಅಮ್ಮನನ್ನು ನೋಡಿ ಚಲಿಸಿಹೋಗುತ್ತೀರಿ. ಅತ್ತ ಒಳಗಿದ್ದ ದುಃಖ ಕಟ್ಟೆಯೊಡೆಯದ, ಉಕ್ಕಿಬರುತ್ತಿದ್ದ ನೋವನ್ನು ಅದುಮಿಟ್ಟುಕೊಳ್ಳಲಾಗದ ಅಸಹಾಯಕ ಮಗನಾಗಿ ಅದ್ಹೇಗೆ ನಟಿಸಿದಿರಿ ಚಿರಂಜೀವಿ? ಆ ಪಾತ್ರಕ್ಕೆ ಅಷ್ಟು ನಿರಾಯಾಸವಾಗಿ ಹೇಗೆ ಜೀವ ತುಂಬಿದಿರಿ? ‘ಅಮ್ಮ, ಮೊದಲಿನ ಥರಾ ಮಾತಾಡೋದು ಬೇಡ. ಓಡಾಡೋದು ಬೇಡ, ನನ್ನ ಜತೆಯಲ್ಲಿ ಇದ್ದರೆ ಸಾಕು. ನನ್ನೆಲ್ಲ ನಂಬಿಕೆ ಬಿಟ್ಟುಹೋದ್ರೂನು ನಿನ್ನ ಮೇಲಿನ ನಂಬಿಕೆಯನ್ನು ಮಾತ್ರ ನಾನು ಬಿಟ್ಟಿಲ್ಲಮ್ಮ. ನನ್ನನ್ನು ಬಿಟ್ಟುಹೋಗಿ ಮೋಸ ಮಾಡಬೇಡಮ್ಮ.’
ಏನಿದು ಚಿರಂಜೀವಿ? ಮಾತಿನಲ್ಲೇ ಮನಸ್ಸಿಗೆ ನಾಟಿಬಿಟ್ಟ ನಿಮ್ಮ ಅಭಿನಯವನ್ನು ಆರಾಧಿಸದಿರಲು ಹೇಗೆ ಸಾಧ್ಯ?
’ನೋಡಮ್ಮ, ನಿನ್ನ ಮುಂದೆ ಒಬ್ಬ ಭಿಕ್ಷುಕನಾಗಿ ನಿಂತಿದ್ದೀನಮ್ಮ.. ನಿನ್ನ ಮಗ ನಿನ್ನ ಕೈಜೋಡಿಸಿ ಬೇಡ್ತಾ ಇದಾನೆ. ಸ್ವಲ್ಪ ದಿನವಾದ್ರೂನು ನಿನ್ನ ಉಸಿರನ್ನ ಭಿಕ್ಷೆಯಾಗಿ ನೀಡಮ್ಮ.. ಅಮ್ಮ ಈ ಭಿಕ್ಷುಕನಿಗೆ ಭಿಕ್ಷೆ ಹಾಕಮ್ಮ..’ ಎಂದು ತೆರೆಯ ಮೇಲೆ ಬಿಕ್ಕಳಿಸಿದ ನೀವು ನಮ್ಮನ್ನು ಆವರಿಸಿಕೊಂಡುಬಿಟ್ಟಿದ್ದು ಹುರುಳಲ್ಲ. ಆಗ ಅತ್ತಿದ್ದು ನೀವಲ್ಲ, ನಾವು…
ಕೊನೆಪಕ್ಷ ನೀವು ಆ ದೇವರಲ್ಲಿ ಪ್ರಾಣಭಿಕ್ಷೆ ಕೇಳಬೇಕಿತ್ತು. ನಾನು ಇನ್ನೊಂದಿಷ್ಟು ಕಾಲ ಇರಲೇಬೇಕು ಎಂದು ರಚ್ಚೆ ಹಿಡಿಯಬೇಕಿತ್ತು. ನಮ್ಮೆಲ್ಲರ ಜತೆ ನೂರುಕಾಲ ಇರಬೇಕಿತ್ತು. ಬಟ್, ಹೊರಟುಹೋದಿರಿ ಚಿರಂಜೀವಿ..
ಚಿರು ಮಿಸ್ ಯು, ಚಿರು ಲವ್ ಯು…