ಸರಕಾರಿ ಆಸ್ಪತ್ರೆಯಲ್ಲಿ ಅಪರೂಪಕ್ಕೊಂದು ಉದಾಹರಣೆ
by G S Bharath Gudibande
ಗುಡಿಬಂಡೆ: ಕೋವಿಡ್ 2ನೇ ಅಲೆ ಇಳಿಮುಖವಾಗುತ್ತಾ ಮೂರನೇ ಅಲೆ ಕಾಣತೊಡಗಿದೆ. ಇಂಥ ಸಂಕಷ್ಟ ಸಮಯದಲ್ಲಿ ಸೋಂಕಿತರಿಗೆ ನಿಜಕ್ಕೂ ಅಗತ್ಯವಾದದ್ದು ಆರೈಕೆಯ ಜತೆಗೆ ಆತ್ಮಸ್ಥೈರ್ಯ ತುಂಬುವ ಮಾತು ಹಾಗೂ ಭವಿಷ್ಯದ ಮೇಲೆ ಭರವಸೆ ಮೂಡಿಸುವ ಪ್ರೇರೇಪಣೆ.
ಇಂಥದೊಂದು ದೃಶ್ಯವನ್ನು ಅಪರೂಪಕ್ಕೆ ಅಪರೂಪವೆಂಬಂತೆ ಗುಡಿಬಂಡೆ ಸರಕಾರಿ ಆಸ್ಪತ್ರೆಯಲ್ಲಿ ಕಾಣಬಹುದು.
ಕೊರೋನಾ 2ನೇ ಅಲೆಯಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿತ್ತು. ಇಂತಹ ಭಯದ ಸನ್ನಿವೇಶದಲ್ಲಿ ಗಡಿ ತಾಲೂಕು ಗುಡಿಬಂಡೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಸೋಂಕಿತರಿಗೆ ಒಳ್ಳೆಯ ಚಿಕಿತ್ಸೆ ನೀಡುವುದರ ಜತೆಗೆ ಆತ್ಮಸ್ಥೈರ್ಯ ತುಂಬುವ ಮೂಲಕ ವೈರಸ್ ವಿರುದ್ಧ ಗೆಲ್ಲಬಹುದು ಎಂದು ಜನರಿಗೆ ತೋರಿಸಿಕೊಟ್ಟಿದ್ದಾರೆ.
ಸೋಂಕಿತರಿಗೆ ಒಂದೆಡೆ ಚಿಕಿತ್ಸೆ, ಇನ್ನೊಂದೆಡೆ ಔಷಧೋಪಚಾರ ಮಾಡುತ್ತಲೇ ಸೋಂಕಿನ ಬಗ್ಗೆ ಹೋರಾಡಲು ಸ್ಥೈರ್ಯ ತುಂಬುವ ಈ ಈ ಡಾಕ್ಟರ್, ಇಡೀ ರಾಜ್ಯದಲ್ಲೇ ಹಿಂದುಳಿದ ತಾಲೂಕಿನಲ್ಲಿ ಸದ್ದಿಲ್ಲದೆ ಆರೋಗ್ಯ ಸೇವೆ ಮಾಡುತ್ತಿದ್ದಾರೆ.
ಮುಖ್ಯವಾಗಿ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಾಗ ಎದುರಿಸುವ ವಿಧಾನಗಳ ಬಗ್ಗೆ ಅವರು ಬಹಳಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. ಆಮ್ ಆದ್ಮಿಗಳ ಪಾಲಿಗೆ ಅವರು ಅಚ್ಚುಮೆಚ್ಚಿನ ಡಾಕ್ಟರ್ ಆಗಿ ಜನಪ್ರಿಯರಾಗಿದ್ದಾರೆ. ತಾಲೂಕಿನಲ್ಲಿ ಸದ್ಯಕ್ಕೆ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಅದರಲ್ಲಿ ಡಾ.ವಿಜಯಲಕ್ಷ್ಮೀ ಅವರ ಪಾತ್ರವೂ ಮಹತ್ತ್ವದ್ದು.
ಆರೈಕೆ ಮತ್ತು ಆತ್ಮಸ್ಥೈರ್ಯ
ಪ್ರತಿಯೊಬ್ಬ ರೋಗಿ ಅಥವಾ ಕೋವಿಡ್ ಸೋಂಕಿತ ಬಂದಾಗ ಅವರಿಗೆ ವೈದ್ಯಕೀಯ ಆರೈಕೆ ಜತೆಗೆ ಆತ್ಮಸ್ಥೈರ್ಯ ತುಂಬುವುದು ಬಹಳ ಮುಖ್ಯ. ನಾನು ಅದನ್ನೇ ಮಾಡುತ್ತಿದ್ದೇನೆ. ಆತ್ಮಸ್ಥೈರ್ಯವೂ ಮೆಡಿಸಿನ್‌ನಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಡಾ.ವಿಜಯಲಕ್ಷ್ಮೀ.
ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆ ಮಾಡುತ್ತಿದ್ದೇನೆ, ಒಬ್ಬ ವೈದ್ಯೆನಾಗಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು, ನಿರ್ಲಕ್ಷ್ಯ, ನಿಧಾನಮಾಡುವುದು ಸೂಕ್ತವಲ್ಲ, ನಿರ್ಲಕ್ಷ್ಯದಿಂದ ಸೋಂಕು ಹರಡುತ್ತಿದೆ, ಇದರಿಂದ ಸೋಂಕು ಉಲ್ಬಣಗೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ಎಲ್ಲರೂ ಎಚ್ಚುತ್ತುಕೊಂಡು ಜಾಗರೂಕರಾಗಿ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸರ್ಕಾರ ಕೇವಲ ಸಾರ್ವಜನಿಕರಿಗೆ ಅಷ್ಟೇ ಸಡಲಿಕೆ ನೀಡಿದೆ. ಆದರೆ ಕೊರೋನಾ ವೈರಸ್ ಅನ್ನು ಸಂಪೂರ್ಣವಾಗಿ ತಡೆಯ ಬೇಕಾದರೆ ಎಲ್ಲರೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು.
-ಡಾ.ವಿಜಯಲಕ್ಷ್ಮೀ
ವೈದ್ಯರ ಕರ್ತವ್ಯನಿಷ್ಠೆ, ಪರಿಶ್ರಮ ಮತ್ತು ಸೇವೆಗಳನ್ನು ಸಮಾಜ ಸದಾ ಆದರಿಸಬೇಕು. ಈ ಕೋವಿಡ್ ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲಾ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು, ಪ್ರಸಕ್ತ ಸನ್ನಿವೇಶದಲ್ಲಿ ವೈದ್ಯರ ಸೇವೆ ಅತ್ಯಂತ ಮಹತ್ವಪೂರ್ಣ ಮತ್ತು ಅವಶ್ಯಕ. ತಾಲ್ಲೂಕಿನ ಜನತೆಯ ಆರೋಗ್ಯ ರಕ್ಷಣೆಗೆ ವೈದ್ಯರು ಹಗಲಿರುಳು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾತ್ರವೇ ಅಲ್ಲದೇ ವರ್ಷಪೂರ್ತಿ ಜನರ ಸ್ವಾಸ್ಥ್ಯಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿರುವ ವೈದ್ಯ ಸಮುದಾಯವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
-ನಂದೀಶ್ ಬಾಬು, ಗರುಡಾಚಾರ್ಲಹಳ್ಳಿ ಗುಡಿಬಂಡೆ ತಾಲೂಕು