ಕೆಂಪೇಗೌಡರ 512ನೇ ಜಯಂತಿ: ನಾಡಪ್ರಭುಗಳ ಸಾಧನೆಯೇ ನನಗೆ ಆದರ್ಶ ಎಂದ ಡಾ.ಕೆ.ಸುಧಾಕರ್ / 28 ಕೋಟಿ ವೆಚ್ಚದಲ್ಲಿ ಮೂರು ಆರೋಗ್ಯ ಕೇಂದ್ರ / ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ 9 ಮಕ್ಕಳನ್ನು ದತ್ತು ಪಡೆದ ಸಚಿವರು
by M Krishnappa Chikkaballapura
ಚಿಕ್ಕಬಳ್ಳಾಪುರ: ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ನಗರವನ್ನು ಅಭಿವೃದ್ಧಿಪಡಿಸಲಾಗುವುದು. ದೇವನಹಳ್ಳಿವರೆಗೂ ಬರಲಿರುವ ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರ ನಗರಕ್ಕೂ ವಿಸ್ತರಣೆ ಮಾಡಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.
ಅವರು ಭಾನುವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು; ಬೆಂಗಳೂರಿಗೆ ಹತ್ತಿರದಲ್ಲಿರುವ ಚಿಕ್ಕಬಳ್ಳಾಪುರವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಉತ್ತಮಪಡಿಸಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರು ಯಾವುದೇ ಜಾತಿ, ಜನಾಂಗ, ಸಮಾಜ, ಮತಭೇದ ಮಾಡಲಿಲ್ಲ. ಅವರು ಲೋಕ ಕಲ್ಯಾಣಕ್ಕಾಗಿ ಒಬ್ಬ ರಾಜನಾಗಿ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ಚಿಂತನೆಯನ್ನು ಹೊಂದಿ ಕೆಲಸ ಮಾಡಿದವರು. ಎಲ್ಲರಿಗೂ ಉಪಯೋಗವಾಗುವಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕೆರೆ ಕಟ್ಟೆಗಳನ್ನು ನಿರ್ಮಿಸಿದರು. ಚಿಕ್ಕ ಹಳ್ಳಿಯಾಗಿದ್ದ ʼಬೆಂದಕಾಳೂರʼನ್ನು ಒಂದು ಸುಂದರ ಮಹಾನಗರವನ್ನಾಗಿ ರೂಪಿಸಿದರು. ಬೆಂಗಳೂರನ್ನು ಸುಸಜ್ಜಿತ ವೈಜ್ಞಾನಿಕ ನಗರವನ್ನಾಗಿ ರೂಪಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಆ ಕಾರಣಕ್ಕಾಗಿಯೇ ನಾವು 21ನೇ ಶತಮಾನದಲ್ಲಿಯೂ ಅವರನ್ನು ಸ್ಮರಿಸಲೇಬೇಕು. ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ನಗರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಸಚಿವರು ಹೇಳಿದರು.
ವೈಜ್ಞಾನಿಕವಾಗಿ ತುಂಬಾ ಮುಂದುವರಿದಿರುವ ನಾವೆಲ್ಲರೂ 21ನೇ ಶತಮಾನದಲ್ಲಿ ಸಂಕುಚಿತ ಮನೋಭಾವನೆ ಬಿಡಬೇಕಾಗುತ್ತದೆ. ಕೆಂಪೇಗೌಡರ ಆದರ್ಶಗಳನ್ನು ಪಾಲಿಸಿ ಸರ್ವಜನಾಂಗದ, ಧರ್ಮದ ಜನರನ್ನು ಜಾತ್ಯತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಂಪೇಗೌಡರ ಜೀವನವನ್ನೇ ಆದರ್ಶವಾಗಿಟ್ಟುಕೊಂಡು ಅವರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಡಾ.ಸುಧಾಕರ್ ಹೇಳಿದರು.
ಹೆಚ್.ಎನ್. ವ್ಯಾಲಿ ನೀರನ್ನು ಈ ಭಾಗದ ಕೆರೆಗಳಿಗೆ ತಂದು ತುಂಬಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ ಅವರು; ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ, ಕೈಗಾರಿಕೆ ಮತ್ತು ನೀರಾವರಿ ಕ್ಷೇತ್ರಗಳಿಗೆ ವಿಶೇಷ ಒತ್ತು ಕೊಟ್ಟು ಕೆಲಸ ಮಾಡಲಾಗುವುದು. ಕೈಗಾರಿಕೆಗಳನ್ನು ಜಿಲ್ಲೆಗೆ ತರಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಸದ್ಯದಲ್ಲೇ ಕೆಲ ಕೈಗಾರಿಕೆಗಳು ಜಿಲ್ಲೆಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನು ಜಿಲ್ಲೆಯ ದಿಬ್ಬೂರು, ಮಂಡಿಕಲ್ಲು ಮತ್ತು ಪೆರೇಸಂದ್ರದಲ್ಲಿ ಸುಮಾರು 28 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಸದ್ಯದಲ್ಲೇ ಶಂಕುಸ್ಥಾಪನೆ ಆಗಲಿದೆ ಎಂದು ಸುಧಾಕರ್ ಹೇಳಿದರು.
ಅಲ್ಲದೆ ನಂದಿ, ಬೊಮ್ಮನಹಳ್ಳಿ ಮತ್ತು ನಾಯನಹಳ್ಳಿಯಲ್ಲಿ ಒಳ್ಳೆಯ ಆರೋಗ್ಯಧಾಮಗಳನ್ನು ನಿರ್ಮಿಸಲು ವಿಚಾರ ಮಾಡಲಾಗಿದೆ ಹಾಗೂ ಮಂಚೇನಹಳ್ಳಿಯಲ್ಲಿ ಹೊಸ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ-ಮಗುವಿನ ಆಸ್ಪತ್ರೆಯನ್ನು ಸುಮಾರು 38 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಕನಿಷ್ಠ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈಗಾಗಲೇ 200 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು ಸಚಿವರು.
ಆದಿಚುಂಚನಗಿರಿ ಮಠದ ಮಂಗಳಾನಂದನಾಥ ಸ್ವಾಮೀಜಿ ಅವರು ಮಾತನಾಡಿ; ನಾಡಪ್ರಭು ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಲು ಒಂದು ನಿರ್ದಿಷ್ಟ ದಿನಾಂಕವನ್ನು ಸರಕಾರ ನಿಗದಿಪಡಿಸಿದ್ದು ಶ್ಲಾಘನೀಯ. ಕೆಂಪೇಗೌಡರು ಎಲ್ಲ ಮತ-ಪಂಥಗಳನ್ನು ಮೀರಿದವರು. 500 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಖ್ಯಾತಿ ಗಳಿಸುವಂತಾಗಲೂ ಪ್ರಭುಗಳ ಪಾತ್ರ ಮಹತ್ವವಾದದ್ದು, ಸರ್ವರಿಗೂ ಅನುಕೂಲವಾಗುವಂತಹ ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಗುಡಿ ಗೋಪುರಗಳನ್ನು ನಿರ್ಮಾಣ ಮಾಡಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
9 ಮಕ್ಕಳ ದತ್ತು
ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ಸಚಿವರು ದತ್ತು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ಮಕ್ಕಳಿಗೆ ತಲಾ 1 ಲಕ್ಷ ರೂ. ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ದತ್ತು ಪಡೆಯುವ ಅಗತ್ಯವಿದೆ. ಮುಖ್ಯಮಂತ್ರಿಗಳು ಇದಕ್ಕಾಗಿ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದಾರೆ ಎಂದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.
ಇದೇ ವೇಳೆ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು 47 ಲ್ಯಾಪ್ ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಂಜುಂಡಪ್ಪ, ಕೆ.ಆರ್.ಸುರೇಂದ್ರ ಗೌಡ, ಬಾಬು, ಸುಬ್ಬಾರೆಡ್ಡಿ, ದೇವರಾಜು, ಜಯಣ್ಣ, ರಾಜಣ್ಣ, ಮುನಿರೆಡ್ಡಿ, ಕೆ.ರಾಮಲಿಂಗ ರಾಜು, ಶ್ರೀನಿವಾಸ ರೆಡ್ಡಿ, ಸಹದೇವ ರೆಡ್ಡಿ, ಮುಕ್ತಂಬಾ, ಪ್ರಮೀಳಮ್ಮ, ಪಿ.ಎನ್.ವೇಣುಗೋಪಾಲ್, ಆರ್.ವಿ.ಮಂಜುನಾಥ್ ರೆಡ್ಡಿ ಮತ್ತು ನರಸಾ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಾದ ತನ್ಮಯಿ ರೆಡ್ಡಿ ಪಿ., ಪರಿಹಾಸ್ ಕೆ. ರೆಡ್ಡಿ, ಶ್ರವಂತಿ ಎನ್., ಧನುಷ್ ಡಿ.ಎಂ., ಚಿರಂತ್ ರೆಡ್ಡಿ, ನಿರೀಷಾ ಎಸ್, ವಿನುತಾ ಎನ್, ವರ್ಷ ವೈ.ಎನ್, ಮಹಾಲಕ್ಷ್ಮಿ ಪಿ.ಎಸ್, ವರ್ಷ ಆರ್., ಎಸ್. ಲಿಖಿತ್ ರೆಡ್ಡಿ, ನಂದಿನಿ ಎನ್, ಶ್ರೀರಕ್ಷಾ ಬಿ.ಎಸ್, ಐಶ್ವರ್ಯ ಡಿ, ಸುಪ್ರಿಯ ಎ.ಆರ್., ಅರ್ಚನಾ ಜಿ, ಜನನಿ ಟಿ.ಕೆ., ಅನುಷಾ ಆರ್, ಕವನಾ ಟಿ.ಎಸ್ ಮತ್ತು 2019-20ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಾದ ಯತೀಶ್ ಕುಮಾರ್ ಎಸ್, ರಾಹುಲ್ ಎಂ, ಮೋನಿಕಾ ಸಿ, ನಾಗಮಣಿ ಜಿ, ಮೌನಿಕಾ ಕೆ, ಪುನೀತ ಎನ್, ಪ್ರಿಯಾಂಕ ವಿ, ಗಗನ್ ಬಿ.ಸಿ, ಅನಿಲ್ ಕುಮಾರ್ ಎನ್, ಬಾಲಾಜಿ ಕೆ, ಸಾಗರ್ ಎನ್.ಎಸ್, ನಂದಿತಾ ಕೆ ಎಂ, ಪ್ರೇಮ, ಅಶ್ವಿನಿ ಬಿ, ಪ್ರಿಯಾಂಕಾ ಎಂ, ಚಂದು ಶ್ರೀ ಆರ್, ಸಾತ್ವಿಕ ಕೆ, ಕೀರ್ತಿ ಕೆ.ವಿ, ಶ್ರೇಯಸ್ ರೆಡ್ಡಿ ಎಸ್.ಇ ಮತ್ತು ಕಾರ್ತಿಕ್ ಸಿ. ಅವರಿಗೆ ಸನ್ಮಾನ ಮಾಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ನಾಡಪ್ರಭು ಕೆಂಪೇಗೌಡರ ಬಗ್ಗೆ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್ ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಒಕ್ಕಲಿಗ ಸಮುದಾಯದ ಮುಖಂಡ ಯಲವಳ್ಳಿ ರಮೇಶ್, ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಚನ್ನಪ್ಪರೆಡ್ಡಿ, ಖಜಾಂಚಿ ಮಂಜುನಾಥ್ ಬಿ.ಕೆ., ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.