ಕೋವಿಡ್ ಸಂಕಷ್ಟ ಕಾಲದಲ್ಲಿ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಎಲ್ಲ ವೈದ್ಯರಿಗೂ ಪ್ರಣಾಮಗಳು
ಕೊರೋನಾ ಕಾರಣದಿಂದ ಇಡೀ ಜಗತ್ತೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೂ ದೇವತಾ ಸ್ವರೂಪಿಗಳಾದವರು ವೈದ್ಯರು.
ವೈರಸ್ ವಿರುದ್ಧ ಸಮರ ಸಾರಲು, ಅನೇಕ ತಿಂಗಳಿನಿಂದ ಇಲ್ಲಿಯವರೆಗೂ ವೈದ್ಯರು, ಆರೋಗ್ಯ ಸಹಾಯಕರು, ಟೆಕ್ನಿಶಿಯನ್ಸ್, ಆಶಾ ಕಾರ್ಯಕರ್ತರು ಒಂದೇ ಒಂದು ದಿನವೂ ರಜೆ ಮಾಡದೇ ಸಾರ್ವಜನಿಕರ ಅಮೂಲ್ಯ ಜೀವನ ಉಳಿಸಲು ತಮ್ಮ ಜೀವನ ಮುಡಿಪಿಟ್ಟು ಶ್ರಮಿಸುತ್ತಿದ್ದಾರೆ.
ವೈದ್ಯ ಸಮೂಹವು ತಮ್ಮ ಹಿಂದಿರುವ ಕುಟುಂಬದ ಹಿತಾಸಕ್ತಿ ಕಡೆಗಣಿಸಿ, ಜೀವದ ಹಂಗು ತೊರೆದು ಸೋಂಕಿತರನ್ನು ಉಪಚರಿಸುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸ. ಈ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾವಿರಾರು ವೈದ್ಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು ನಮ್ಮ ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು.
ರಾಷ್ಟ್ರೀಯ ವೈದ್ಯರ ದಿನವಾದ ಇಂದು ವೈದ್ಯರಿಗೆ ಹಾಗೂ ವೈದ್ಯ ಸಮುದಾಯಕ್ಕೆ ಧನ್ಯವಾದ ಹೇಳುವ ಸುಸಂದರ್ಭದ ದಿನವಿಂದು ಎನ್ನಬಹದು.
ಏನಿದು ರಾಷ್ಟ್ರೀಯ ವೈದ್ಯರ ದಿನ?
ಹಿರಿಯ ವೈದ್ಯರೂ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ.ಬಿಧಾನ್‌ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನ ಬರುತ್ತದೆ. ಅಂದರೆ ಜುಲೈ 1, 1882 ರಂದು ಅವರು ಜನಿಸಿ, ಅದೇ ದಿನ ಅಂದರೆ; 1962ರ ಜುಲೈ ೧ರಂದು ಅವರು ನಿಧನರಾಗುತ್ತಾರೆ. ಈ ದಿನ ನಮ್ಮ ಜೀವನದಲ್ಲಿ ವೈದ್ಯರ ಮೌಲ್ಯವನ್ನು ಎತ್ತಿ ತೋರಿಸಲು ಮತ್ತು ಡಾ.ಬಿಧಾನ್ ಚಂದ್ರ ರಾಯ್ ಅವರಿಗೆ ಗೌರವ ಸಲ್ಲಿಸಲು 1991ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಕೇಂದ್ರ ಸರ್ಕಾರವು ಮಾನ್ಯತೆ ನೀಡಿ ಪ್ರತಿವರ್ಷ ಜುಲೈ 1ರಂದು ಆಚರಿಸಲು ನಿರ್ಧರಿಸಿತು.
ಡಾ.ಬಿಧಾನ್‌ಚಂದ್ರ ರಾಯ್
ಡಾ.ಬಿಧಾನ್‌ಚಂದ್ರ ರಾಯ್ ಅವರು ಅತ್ಯಂತ ಗೌರವಾನ್ವಿತ ವೈದ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಕೂಡ ಆಗಿದ್ದರು. 1948ರಿಂದ 1962ರ ತನಕ ಸುಮಾರು 14 ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಪಶ್ಚಿಮ ಬಂಗಾಳದ ಶ್ರೇಷ್ಠ ವಾಸ್ತುಶಿಲ್ಪಿ ಎಂದೂ ಪರಿಗಣಿಸಲಾಗುತ್ತದೆ. ಆ ರಾಜ್ಯದ ಐದು ನಗರಗಳನ್ನೂ ಅವರು ಸ್ಥಾಪಿಸಿದರು. ಅವುಗಳೆಂದರೆ ದುರ್ಗಾಪುರ, ಬಿಧನ್ನನಗರ, ಅಶೋಕ ನಗರ, ಕಲ್ಯಾಣಿ ಮತ್ತು ಹಬ್ರಾ. ಅವರು ಬ್ರಹ್ಮಸಮಾಜದ ಸದಸ್ಯರೂ ಆಗಿದ್ದರು. ಕೊಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರ ನೆನಪಿಗಾಗಿ ಕೇಂದ್ರ ಸರ್ಕಾರವೂ ಒಂದು ಪ್ರಶಸ್ತಿ ಸ್ಥಾಪಿಸಿತ್ತು. 1928ರಲ್ಲಿ ಅವರು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸ್ಥಾಪನೆಯಲ್ಲಿ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫೆಬ್ರವರಿ 4, 1961 ರಂದು ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಭಾರತರತ್ನʼ ನೀಡಿ ಗೌರವಿಸಲಾಯಿತು.
ಜಗತ್ತಿನ ಇತರೆ ದೇಶಗಳಲ್ಲಿ
ವಿವಿಧ ದೇಶಗಳಲ್ಲಿ ವೈದ್ಯರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಮೊದಲ ಬಾರಿಗೆ ವೈದ್ಯರ ದಿನವನ್ನು 30 ಮಾರ್ಚ್ 1933ರಲ್ಲಿ ಯುಎಸ್ ರಾಜ್ಯ ಜಾರ್ಜಿಯಾದಲ್ಲಿ ಆಚರಿಸಲಾಯಿತು. ವೈದ್ಯರಿಗೆ ಕಾರ್ಡ್ ಕಳುಹಿಸುವ ಮೂಲಕ ಮತ್ತು ಅಗಲಿರುವ ವೈದ್ಯರ ಸಮಾಧಿಯ ಮೇಲೆ ಹೂವುಗಳನ್ನು ಇರಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಅದೇ ದಿನ ಆಸ್ಟ್ರೇಲಿಯಾದಲ್ಲಿ ಆಚರಣೆ ಮಾಡಲಾಗುತ್ತದೆ. ಕುವೈತ್‌ನಲ್ಲಿ ಮಾರ್ಚ್ 3ರಂದು, ಬ್ರೆಝಿಲ್‌ನಲ್ಲಿ ಅಕ್ಟೋಬರ್ 18, ಕೆನಡಾದಲ್ಲಿ ಮೇ 1ರಂದು, ಅದೇ ತಿಂಗಳು 4ರಂದು ನೇಪಾಳದಲ್ಲಿ, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ಮತ್ತು ಆಗಸ್ಟ್ 23ರಂದು ಇರಾನ್ ದೇಶದಲ್ಲಿ ಆಚರಿಸಲಾಗುತ್ತದೆ.
2021ರ ರಾಷ್ಟ್ರೀಯ ವೈದ್ಯರ ದಿನಾಚರಣೆ ಥೀಮ್
ಪ್ರತಿ ವರ್ಷವೂ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಹೊಸ ಹೊಸ ವಿಷಯಗಳ ಆಧಾರದ ಮೇಲೆ ಆಚರಿಸಲಾಗುತ್ತದೆ. 2021ರ ರಾಷ್ಟ್ರೀಯ ವೈದ್ಯರ ದಿನಾಚರಣೆಯ ವಿಷಯವೆಂದರೆ “”ವೈದ್ಯರು ಮತ್ತು ಕುಟುಂಬದೊಂದಿಗೆ ಭವಿಷ್ಯವನ್ನು ನಿರ್ಮಿಸುವುದು”. ಈ ಥೀಮ್ ಅನ್ನು ಪ್ರತಿ ವರ್ಷ ಭಾರತೀಯ ವೈದ್ಯಕೀಯ ಸಂಘವು ಘೋಷಿಸುತ್ತದೆ.
2021ರ ವೈದ್ಯರ ದಿನವನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಆರೈಕೆ ಸೌಲಭ್ಯಗಳಲ್ಲಿ ಕೆಲಸ ಮಾಡುವ ಅಸಂಖ್ಯಾತ ವೈದ್ಯರಿಗೆ ಹಾಗೂ ವಿಶೇಷ COVID ಚಿಕಿತ್ಸಾ ಕೇಂದ್ರಗಳಲ್ಲಿ ಸಮರ್ಪಿಸಲಾಗಿದೆ. ಈ ಬಾರಿ ಪ್ರತಿಯೊಂದು ಪ್ರಯತ್ನವೂ ಒಂದು, ಎಲ್ಲಿದ್ದರೂ ಎಣಿಕೆ ಮಾಡುತ್ತದೆ. ಸಕಾರಾತ್ಮಕ ಕ್ರಮದಿಂದ ಮರಣ ಪ್ರಮಾಣವನ್ನು ನಾಟಕೀಯವಾಗಿ ಕಡಿಮೆ ಮಾಡಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ.
ತಮ್ಮ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗೆ ಹೆಚ್ಚು ಕಾಲವನ್ನು ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ. ವೈದ್ಯರ ನಿಷ್ಠ, ಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಅವರು ತೋರುವ ಸೇವೆ ಹಾಗೂ ಚಿಕಿತ್ಸೆಯು ರೋಗಿಗೆ ಮರುಜನ್ಮವನ್ನು ನೀಡುತ್ತದೆ.
“ವೈದ್ಯೋ ನಾರಾಯಣೋ ಹರಿಃ” ಎಂಬ ಮಾತು ಕೊರೊನಾ ಕಾಲ ಘಟ್ಟದಲ್ಲಿ ಅಕ್ಷರಶಃ ಸಾಬೀತಾಗಿದೆ. ಕಿಲ್ಲರ್ ಕೊರೊನಾದಿಂದ ದೇಶವಾಸಿಗಳ ಅಮೂಲ್ಯ ಜೀವ ರಕ್ಷಿಸಲು ವೈದ್ಯ ಲೋಕ ಟೊಂಕ ಕಟ್ಟಿ ನಿಂತಿದೆ. ಕೋವಿಡ್-19 ಸೋಂಕಿನ ಹಾವಳಿಯ ಈ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ್‌ಗಳಾಗಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದದ್ದು. ಜನರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೂ ರಾಷ್ಟ್ರೀಯ ವೈದ್ಯ ದಿನಾಚರಣೆಯ ಶುಭಾಶಯಗಳು.
Bidhan Chandra Roy photo courtesy: Wikipedia & Life
ಡಾ.ಗುರುಪ್ರಸಾದ ಹವಲ್ದಾರ್