ಬೆಂಗಳೂರು: ಒಂದರಿಂದ ಎಂಟನೇ ತರಗತಿಗಳ ಶಾಲಾ ಶಿಕ್ಷಕರ ನೇಮಕಾತಿ ಅರ್ಹತೆ ಪಡೆಯಲು ಅಗತ್ಯವಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ಆಗಸ್ಟ್ 22ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಒಂದರಿಂದ ಐದನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿ.ಇಡಿ., ಉತ್ತೀರ್ಣರಾಗಿರಬೇಕು ಹಾಗೂ ಆರರಿಂದ ಎಂಟನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿ.ಇಡಿ., ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿ.ಎ.ಇಡಿ/ ಬಿ.ಎಸ್.ಸಿ.ಇಡಿ ಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆ ವರ್ಷಗಳ ಡಿಇಡಿ, ಬಿಇಡಿ, ಬಿಎಇಡಿ/ ಬಿಎಸ್ಸಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್-ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು ಜುಲೈ 20 ಕೊನೆಯ ದಿನವಾಗಿದೆ. ಆ. 22ರಂದು ಬೆಳಗ್ಗೆ 9.30ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತವೆ. ಪ್ರವೇಶ ಪತ್ರಗಳನ್ನು ದಿನಾಂಕ ಆ. 12ರಿಂದ ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ. ಹೆಚ್ಚಿನ ಸಂಖ್ಯೆಯ ಅರ್ಹ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಅದರ ಸಂಪೂರ್ಣ ವಿವರ ಈ ಕೆಳಗಿನ ಪಿಡಿಎಫ್ ಅಡಕದಲ್ಲಿದೆ. ಸ್ಕ್ರಾಲ್ ಮಾಡುವ ಮೂಲಕ ಮುಂದಿನ ಪುಟಗಳನ್ನು ನೋಡಬಹುದು.
/p>