ಬೆಂಗಳೂರು: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರು ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಸುಧೀಂದ್ರ ಹಾಲ್ದೊಡ್ಡೇರಿ ಅವರು ಪತ್ರಕರ್ತರೊಬ್ಬರ ಪುತ್ರ.
ಬದುಕಿನುದ್ದಕ್ಕೂ ಬರೆಯುತ್ತಲೇ ಇದ್ದ ಅವರು ನಮಗೆ ಬಿಟ್ಟುಹೋಗಿರುವುದು ಅಗಾಧ ಬರವಣಿಗೆ ಮತ್ತು ವಿಜ್ಞಾನವನ್ನೇ.
ಸುಧೀಂದ್ರ ಹಾಲ್ದೊಡ್ಡೇರಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಾಲ್ದೊಡ್ಡೇರಿ ಗ್ರಾಮಕ್ಕೆ ಸೇರಿದವರು, (ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನ ಜಯನಗರ). ಅವರ ತಂದೆ ಎಚ್.ಆರ್.ನಾಗೇಶರಾವ್ ಅವರು ʼಸಂಯುಕ್ತ ಕರ್ನಾಟಕʼ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕ ಸೇರಿ ಹಲವು ಮಹತ್ವದ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತರು. ತಂದೆಯಿಂದ ಬಂದ ಬಳುವಳಿಯಂತೆ ಸುಧೀಂದ್ರ ಹಾಲ್ದೊಡ್ಡೇರಿ ತಮ್ಮ ಕೊನೆಗಾಲದವರೆಗೂ ಬರೆಯುತ್ತಲೇ ಇದ್ದರು.
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಲ್ಲಿ ವಿಜ್ಞಾನಿಯಾಗಿ, ಎನ್ಎಎಲ್ ಹಿರಿಯ ಎಂಜಿನಿಯರ್ ಆಗಿ, ಅಂಕಣಕಾರರಾಗಿಯೂ ರಾಜ್ಯದ ಮನೆಮಾತಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಇವತ್ತು (2021 ಜುಲೈ 2) ಮಧ್ಯಾಹ್ನ ವಿಧಿವಶರಾಗಿದ್ದಾರೆ.
61 ವರ್ಷ ವಯಸ್ಸಿನ ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ವಾರದ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬದುಕಿ ಉಳಿಯುವ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ಮಿದುಳಿಗೆ ಆಮ್ಲಜನಕ ಪೂರೈಕೆಯಾಗುವುದು ಕಷ್ಟವಾಗಿತ್ತು, ಕ್ರಮೇಣ ಅವರ ಮಿದುಳು ಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು.
ಅವರ ನಿಧನದಿಂದ ಕರ್ನಾಟಕ ವಿಜ್ಞಾನ ವಲಯದಲ್ಲಿ ಶೂನ್ಯತೆ ಆವರಿಸಿದೆ. ಅವರ ಅಕಾಲಿಕ ಅಗಲಿಕೆಯಿಂದ ವಿಜ್ಞಾನ ಕ್ಷೇತ್ರವಲ್ಲದೆ ಮಾಧ್ಯಮ ಕ್ಷೇತ್ರವೂ ಮೌನವಾಗಿದೆ.
ಕನ್ನಡಪ್ರಭ, ವಿಜಯ ಕರ್ನಾಟಕ ಸೇರಿದಂತೆ ಬಹುತೇಕ ಪತ್ರಿಕೆಗಳಿಗೆ ಅವಿಶ್ರಾಂತವಾಗಿ ವಿಜ್ಞಾನ ಅಂಕಣ ಬರೆಯುತ್ತಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರು, ಅಪಾರ ಓದುಗರನ್ನು ಹೊಂದಿದ್ದರು. ಮಾತ್ರವಲ್ಲದೆ, ಪತ್ರಿಕೆಗಳಿಗೆ ಹೊಸ, ಯುವ ಓದುಗರನ್ನು ಸೃಷ್ಟಿ ಮಾಡಿಕೊಟ್ಟಿದ್ದರು. ಸರಳವಾಗಿ ವಿಜ್ಞಾನ, ತಂತ್ರಜ್ಞಾನ & ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸಂಕೀರ್ಣ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ತಿಳಿಗನ್ನಡದಲ್ಲೇ ಸೊಗಸಾಗಿ ಬರೆಯುತ್ತಿದ್ದ ಅವರ ಲೇಖನಗಳು ಓದುಗರ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದವು. ಹೊಸ ತಲೆಮಾರಿನ ವಿಜ್ಞಾನಿಗಳಿಗೆ ಅವರ ಅಂಕಣಗಳು ಆಕರ ಸಾಮಗ್ರಿಯಾಗುತ್ತಿದ್ದವು.
1998ರಲ್ಲಿ ಪ್ರಕಟವಾದ ಮೊದಲ ಲೇಖನ
ಸುಧೀಂದ್ರ ಹಾಲ್ದೊಡ್ಡೇರಿ ಅವರನ್ನು 1998ರಿಂದಲೂ ನಿಕಟವಾಗಿ ಬಲ್ಲ ಹಿರಿಯ ಪತ್ರಕರ್ತ ಬಿ.ಎಸ್.ಜಯಪ್ರಕಾಶ ನಾರಾಯಣ (ಜೇಪಿ), ಅವರ ಕುರಿತ ಕೆಲ ಸ್ವಾರಸ್ಯಕರ ಸಂಗತಿಗಳನ್ನು ಸಿಕೆನ್ಯೂಸ್ ನೌ ಜತೆ ಹಂಚಿಕೊಂಡಿದ್ದಾರೆ.
“1998ರಲ್ಲಿ ನಾನು ಕನ್ನಡಪ್ರಭದಲ್ಲಿ ಮ್ಯಾಗಝಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಸುಧೀಂದ್ರ ಹಾಲ್ದೊಡ್ಡೇರಿ ಬಂದರು. ಆವತ್ತೇ ನನಗೆ ಅವರ ಪರಿಚಯವಾಗಿದ್ದು. ಒಂದು ಲೇಖನ ತಂದು ಕೊಟ್ಟುಹೋದರು. ವೈಎನ್‌ಕೆ ಅವರು ಆಗ ಕನ್ನಡಪ್ರಭದ ಸಂಪಾದಕರು. ಅವರ ಲೇಖನ ಸಂಪಾದಕರಿಗೆ ಇಷ್ಟವಾಗಿ ಆ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಯಿತು. ಅದರ ಹೆಡ್‌ಲೈನ್ ನನಗೆ ಈಗಲೂ ನೆನಪಿದೆ. “ತಂತ್ರಜ್ಞಾನದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಅಂತ ಆ ಹೆಡ್‌ಲೈನ್. ಸುಧೀಂದ್ರ ಹಾಲ್ದೊಡ್ಡೇರಿ ಪತ್ರಿಕೆಯೊಂದರಲ್ಲಿ ಬರೆದ ಮೊತ್ತ ಮೊದಲ ಲೇಖನ ಅದು. ಅದಾದ ಮೇಲೆ ಅವರು ನಿರಂತರವಾಗಿ ಬರೆಯುತ್ತಲೇ ಇದ್ದರು.
ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಕನ್ನಡವೆಂದರೆ ಪಂಚಪ್ರಾಣ. ಕನ್ನಡದ ಕೆಲಸವೆಂದರಂತೂ ಇತರೆ ಎಲ್ಲ ಕೆಲಸವನ್ನೂ ಬಿಟ್ಟು ಮಾಡುತ್ತಿದ್ದರು. ಕನ್ನಡಕ್ಕಾಗಿ ಯಾರೇ ಕರೆದರೂ ಹೋಗುತ್ತಿದ್ದರು. ಕನ್ನಡ ಗೆಳೆಯರ ಬಳಗದ ಜತೆ ಅವರ ಬಾಂಧವ್ಯ ನಿಕಟವಾಗಿತ್ತು. ಕನ್ನಡ ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡಿದ್ದರು. ವಿಜ್ಞಾನವನ್ನು ಎಳೆಮಕ್ಕಳಿಗೂ ಅರ್ಥವಾಗುವಂತೆ ಕಥೆಯಂತೆ ಸೊಗಸಾಗಿ ಬರೆಯುತ್ತಿದ್ದರು. ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರವಂತೂ ಅವಿಶ್ರಾಂತವಾಗಿ ಬರೆಯಲಾರಂಭಿಸಿದರು. ಒಂದೆಡೆ ಓದು, ಇನ್ನೊಂದೆಡೆ ಬರವಣಿಗೆ ಅವರನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿದವು ಎನ್ನುತ್ತಾರೆ ಜೇಪಿ.
ವಿಜ್ಞಾನಿಯಾಗಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಲಘು ಯುದ್ಧ ವಿಮಾನ (LCA) ಯೋಜನೆಯಲ್ಲಿ ಅವರ ಸಕ್ರಿಯ ಪಾತ್ರವಿದೆ. ಅದೇ ಸಂದರ್ಭದಲ್ಲಿ ರಕ್ಷಣಾ ಮಂತ್ರಿಯಗಿದ್ದ ಜಾರ್ಜ್ ಫೆರ್ನಾಂಡೀಸ್ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು ಅವರು. ಸುಧೀಂದ್ರ ಹಾಲ್ದೊಡ್ಡೇರಿ ಅವರು ಬರೆದ ಲೇಖನಗಳಲ್ಲಿ ಭಾರತದ ವೈಜ್ಞಾನಿಕ ಬೆಳವಣಿಗೆ ಮತ್ತೂ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ ಕಥನವೂ ಇದೆ.
ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಜ್ಞಾನಿಯಾಗಿ ಜ್ಯೋತಿಷ್ಯವನ್ನು ಒಪ್ಪುತ್ತಿರಲಿಲ್ಲ. ಬೆಳಬೆಳಗ್ಗೆ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸುದ್ದಿ ಚಾನೆಲ್‌ಗಳೆಂದರೆ ಅವರಿಗೆ ಸರಿ ಕಾಣುತ್ತಿರಲಿಲ್ಲ. ವಿಜ್ಞಾನಿ ಮತ್ತು ಜ್ಯೋತಿಷಿಯನ್ನು ಅಕ್ಕಪಕ್ಕ ಕೂರಿಸಿ ಪ್ರಶ್ನಿಸುವುದನ್ನು ಅವರು ವಿರೋಧಿಸುತ್ತಿದ್ದರು. ಗ್ರಹಣ ಮತ್ತಿತರೆ ಯಾವುದೇ ವಿಷಯ ಇಟ್ಟುಕೊಂಡು ಚಾನೆಲ್‌ಗಳು ಜ್ಯೋತಿಷಿಯನ್ನು ಪಕ್ಷ ಕೂರಿಸಿ ಚರ್ಚೆಗೆ ಕರೆದರೆ ಸುಧೀಂದ್ರ ಹಾಲ್ದೊಡ್ಡೇರಿ ಅವರು ಅಂಥ ಚಾನೆಲ್ ಕಡೆ ಹೋಗುತ್ತಿರಲಿಲ್ಲ, ಕೊನೆಪಕ್ಷ ಪ್ರತಿಕ್ರಿಯೆಯನ್ನೂ ಕೊಡುತ್ತಿರಲಿಲ್ಲ ಎಂದು ಹೇಳುತ್ತಾರೆ ಜೇಪಿ.
ವಿಜ್ಞಾನವೆಂದರೆ ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ವೃತ್ತಿಯಷ್ಟೇ ಆಗಿರಲಿಲ್ಲ; ಬದಲಿಗೆ ಬದುಕು, ಬದ್ಧತೆ ಎಲ್ಲವೂ ಆಗಿತ್ತು.
ದುಃಖದ ಸಂಗತಿ ಎಂದರೆ, ಅವರಿಗೆ ಇಂದು (ಶುಕ್ರವಾರ) ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಘೋಷಿಸಿದ ದಿನವೇ ಅವರು ನಿಧನರಾಗಿದ್ದಾರೆ.
Lead photo courtesy: DD Chandana News@DDChandanaNews
Comments 1