ಉಳಿದುಕೊಳ್ಳಲೇಬೇಕೆಂದು ಉಸಿರಾಡುತ್ತಿದೆ ಇತಿಹಾಸ; ಗುಡಿಬಂಡೆ, ಬಾಗೇಪಲ್ಲಿಗೆ ನೇರ ಸಂಬಂಧವುಳ್ಳ ವಿಜಯನಗರದ ಅರಸರ ಸಾಮಂತಿಕೆಯಲ್ಲಿದ್ದ ಆಂಧ್ರದ ಪಾಳೇಯಪಟ್ಟಿನ ರೋಚಕ ಕಥನ
by DG Pavan Kalyan Bagepalli
ಬಾಗೇಪಲ್ಲಿ ತಾಲೂಕಿನ ಹಲವಾರು ಐತಿಹಾಸಿಕ ಕೋಟೆಗಳು ಸರಿಯಾಗಿ ಸಂರಕ್ಷಣೆ ಇಲ್ಲದೇ ಪಾಳು ಬಿದ್ದಿವೆ. ಗುಮ್ಮನಾಯಕನ ಪಾಳ್ಯದ ಕೋಟೆ, ದೇವಿಕುಂಟೆಯ ಇಟ್ಟಿಗೆರಾಯನ ದುರ್ಗ ಕೋಟೆ ಸೇರಿದಂತೆ ಹತ್ತಾರು ಐತಿಹಾಸಿಕ ಸ್ಮಾರಕಗಳು ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ ವಿನಾಶದ ಅಂಚಿನಲ್ಲಿವೆ ಹಾಗೂ ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಗ್ರಾಮ ಕೊಡಿಕೊಂಡ ಕೋಟೆಯದ್ದೂ ಇದೇ ಸ್ಥಿತಿ.
ಕರ್ನಾಟಕದ ಬಹುದೊಡ್ಡ ಸಾಮ್ರಾಜ್ಯ ವಿಜಯನಗರವನ್ನು ಆಳಿದ ಶ್ರೀ ಕೃಷ್ಣದೇವರಾಯ ಇಲ್ಲಿ ಸೋತ ಮೇಲೆ ಆಂಧ್ರ ಪ್ರದೇಶದ ಪೇನುಗೊಂಡವನ್ನು ತನ್ನ ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದಾನೆ. ಕೃಷ್ಣದೇವರಾಯರ ಸಾಮಂತರಾಗಿ ಕೆಲ ಪಾಳೇಯಗಾರರು ಈ ಭಾಗದಲ್ಲಿ ಆಡಳಿತ ಮಾಡಿದ್ದಾರೆ. ಇವುಗಳಲ್ಲಿ ಈ ಕೊಂಡಿಕೊಂಡ ಪಾಳೇಯಗಾರರೂ ಸೇರಿದ್ದಾರೆ.
ಇಲ್ಲಿ ಕೋಟೆಯನ್ನು ಕಟ್ಟಲು ಕಾರಣ ಈ ಬೆಟ್ಟ ಎತ್ತರವಾಗಿರುವುದು. ದೊಡ್ಡ ದೊಡ್ಡ ಕಲ್ಲುಗಳಿಂದ ಕೂಡಿದೆ. ವಿಶೇಷವಾಗಿ ಬೆಟ್ಟದ ಬಂಡೆಗಳ ಮೇಲೆ ನೀರಿನ ಸಂಗ್ರಹಣೆಗೆ ದೊಣೆಗಳೆವೆ. ಈ ಬೆಟ್ಟದ ಮೇಲಿನಿಂದ ಸುತ್ತಮುತ್ತ ಬಹಳಷ್ಟು ದೂರ ಪರಿವೀಕ್ಷಣೆ ಮಾಡಲು ಸಾಧ್ಯವಿತ್ತು. ಬಾಳಪ್ಪ ನಾಯಕ ಎಂಬ ಪಾಳೇಯಗಾರ ಇಲ್ಲಿ ಶಿವಾಲಯ ಕಟ್ಟಿಸಿದ್ದಾನೆ.
ಕೊಡಿಕೊಂಡ ಬೆಟ್ಟದ ಮೇಲೆ ಸುಮಾರು 20 ಬುರುಜುಗಳನ್ನು ವೃತ್ತಕಾರ ಹಾಗೂ ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆಯೇ 4 ನೀರಿನ ಮೂಲಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಬೆಟ್ಟದ ತುದಿಯಲ್ಲಿ ದೇವರ ಪಾದಗಳ ಕೆತ್ತನೆ ನೋಡಬಹುದು.
ಪೆನುಗೊಂಡ ಪಾಳೇಯಗಾರರ ಸಾಮಂತ ರಾಜರಾಗಿ ಕೊಡಿಕೊಂಡ ಕೋಟೆ, ಗುಡಿಬಂಡೆ ಕೋಟೆ, ದೇವಿಕುಂಟೆ ಕೋಟೆ, ಗುಮ್ಮನಾಯಕನ ಪಾಳ್ಯ ಕೋಟೆ, ತುಮ್ಮಲ ಹೊಸಕೋಟೆಗಳು ಇದ್ದವು. ಇವರೆಲ್ಲರೂ ಕೃಷ್ಣದೇವರಾಯರ ಸಾಮಂತರಾಗಿದ್ದರು. ಗುಮ್ಮನಾಯಕನ ಪಾಳ್ಯದ ಪಾಳೇಯಗಾರರು ಶ್ರೀ ನಿಡುಮಾಮಿಡಿ ಜಗದ್ಗುರು ಮಹಾಸಂಸ್ಥಾನದ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತಿದ್ದರು.
ಕೊಡಿಕೊಂಡ ಕೋಟೆ ಬಹಳ ವಿಶೇಷವಾಗಿದೆ. ಒಳಗೆ ಅಕ್ಕಮ್ಮ ದೇವರ ಮುಂದೆ ಕೋಟೆಯ ಗೋಡೆಯ ಮೇಲೆ ಚಾರ್‌ಮಿನಾರ್ ಆಕಾರದ ಬುರುಜನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಾವತಿ ನದಿ ಆ ಕೋಟೆಯ ಪಕ್ಕದಲ್ಲೇ ಹರಿಯುತ್ತದೆ. ಕೋಟೆ, ದ್ವಾರ, ಬುರುಜು, ದೇಗುಲ, ಮನೆಗಳನ್ನು ಕಟ್ಟಲು ಕೊಡಿಕೊಂಡ ಬಳಿ ದೊಡ್ಡ ಕಲ್ಯಾಣಿ ಹಾಗೂ ಸಂಜೀವಮ್ಮ ಕೆರೆಯ ಜತೆಗೆ ಹಲವು ಕೆರೆ-ಕುಂಟೆ, ಬಾವಿಗಳನ್ನು ನಿರ್ಮಿಸಲಾಗಿದೆ.
ಕೊಡಿಕೊಂಡ ಕೋಟೆ ಮತ್ತು ಅಕ್ಕಮ್ಮ ದೇವರನ್ನು ದರ್ಶನ ಮಾಡಿಕೊಳ್ಳಲು ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಥಳವು ಸಾಮಾನ್ಯವಾಗಿ ಅಕ್ಕಮ್ಮ ತಾಯಿ ಎಂದು ಕರೆಯಲ್ಪಡುವ ದೇವತೆಯಿಂದ ಬಹಳ ಪ್ರಸಿದ್ಧವಾಗಿದೆ. ಅಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಬಂದು ಅಮ್ಮನವರನ್ನು ಪೂಜಿಸುತ್ತಾರೆ. ಈ ದೇವಾಲಯವು ಬೆಟ್ಟದ ಮೇಲೆ ರಾಜರು ಮೊದಲು ವಾಸಿಸುತ್ತಿದ್ದ ಸ್ಥಳದಲ್ಲಿದೆ.
ಇಲ್ಲಿ ಪ್ರತಿವರ್ಷ ಅಕ್ಕಮ್ಮ ದೇವತೆಯ ಹೆಸರಿನಲ್ಲಿ ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ. ಎರಡು ದಿನ ಜಾತ್ರೆ ನಡೆಯುತ್ತದೆ.
ಕೋತಿ ಕಲ್ಲು ಉಲ್ಲೇಖಗಳು
ಕೊಡಿಕೊಂಡ ಕೋಟೆಯ ಬೆಟ್ಟದ ಮೇಲೆ ಕೋತಿ ಕಲ್ಲು ಎಂಬುದು ಎತ್ತರಕ್ಕೆ ಇದೆ. ಇದಕ್ಕೆ ಅದರದ್ದೇ ಆದ ಇತಿಹಾಸವೂ ಇದೆ.
ಈ ಕಲ್ಲಿನ ಮೇಲೆ ಹತ್ತಿದ ಮಂಗವೊಂದು ಕೆಳಕ್ಕೆ ಇಳಿದು ಬರಲಾಗದೇ ಅಲ್ಲಿಯೇ ಸತ್ತು ಹೋಗಿತ್ತಂತೆ ಎಂದು ಗ್ರಾಮದ ಹಿರಿಯರೊಬ್ಬರು ಹೇಳುತ್ತಾರೆ. ಕೋತಿ ಕಲ್ಲಿನ ನೆರಳು ಎಲ್ಲಿ ಬೀಳುತ್ತದೆಯೋ ಅಲ್ಲಿ ಏಳು ಕೊಪ್ಪರಿಗೆಯಷ್ಟು ಬಂಗಾರವನ್ನು ಭೂಮಿಯಲ್ಲಿ ಭದ್ರವಾಗಿ ಹೂತಿಟ್ಟಿದ್ದಾರೆ ಎಂಬ ಮಾತುಗಳು ಸಹ ಹಿರಿಯರಿಂದ ಕೇಳಿ ಬರುತ್ತಿವೆ. ಇದು ನಿಜವಾದ ಮಾಹಿತಿಯೋ ಅಲ್ಲವೋ ಗೊತ್ತಿಲ್ಲ. ಆದರೆ, ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಈ ಕೊಡಕೊಂಡದ ಮೇಲೆಯೂ ದಾಳಿ ನಡೆಸಿ ಖಜಾನೆ ದೋಚಿದ್ದಾನೆ ಎಂಬ ಉಲ್ಲೇಖಗಳು ಇವೆ.
ಅನ್ನಾ ರಾಮಕೃಷ್ಣಯ್ಯ ಎಂಬ ಆಪದ್ಬಾಂಧವ
ಪಾಳೇಯಗಾರರು ಕೋಟೆಯ ಮೇಲೆ ನಿರ್ಮಾಣ ಮಾಡಿರುವ ಅಕ್ಕಮ್ಮ ಗುಡಿಯನ್ನು ದೇವಸ್ಥಾನವಾಗಿ ನಿರ್ಮಿಸುವುದರ ಜತೆಗೆ ಕೊಡಿಕೊಂಡ ಪಟ್ಟಣದ ಅಭಿವೃದ್ಧಿಗೆ ಮುಖ್ಯ ಕಾರಣವಾದ ಇನ್ನೊಬ್ಬ ವ್ಯಕ್ತಿ ದಿವಂಗತ ಅನ್ನಾ ರಾಮಕೃಷ್ಣಯ್ಯ. ಊರಿಗೆ ದೂರವಾಣಿ ಸಂಪರ್ಕ ತಂದ ಮುವ್ಯಕ್ತಿ ಅವರು. ರೈತರ ಸಹಾಯಕ್ಕಾಗಿ ನೆಲಗಡಲೆ ಕಾರ್ಖಾನೆ ನಿರ್ಮಿಸಿದವರು ಇವರು. ಜತೆಗೆ ಶಾಲೆ, ಮತ್ತಿತರೆ ಸಮಾಜಮುಖಿ ಕೆಲಸಗಳನ್ನೂ ಇವರು ಮಾಡಿದ್ದಾರೆ. ಇವತ್ತಿಗೂ ಕೊಡಿಕೊಂಡ ಜನರು ರಾಮಕೃಷ್ಣಯ್ಯ ಅವರ ಬಗ್ಗೆ ಕಥೆ ಕಥೆಗಳಾಗಿ ಮಾತನಾಡಿಕೊಳ್ಳುತ್ತಾರೆ. ಸ್ಥಳೀಯ ಪಂಚಾಯತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅವರು, ಸುಮಾರು 35 ವರ್ಷ ಆಡಳಿತ ನಡೆಸಿದ್ದಾರೆಂದು ಜನ ಹೇಳುತ್ತಾರೆ.
ಇನ್ನು, ಜನರಿಗೆ ಅನ್ನಾ ರಾಮಕೃಷ್ಣಯ್ಯ ಅವರ ನ್ಯಾಯನಿಷ್ಠತೆ, ಹಿರಿತನದ ಮೇಲೆ ಅಪಾರ ಗೌರವ ಇತ್ತು. ಗ್ರಾಮಸ್ಥರು ಅವರ ಬಳಿ ನ್ಯಾಯ ಕೇಳುತ್ತಿದ್ದರು. ಪೊಲೀಸರು ಊರಿಗೆ ಬರಬಾರದು, ಎಲ್ಲಾ ಸಮಸ್ಯೆಗಳೂ ಜನರೇ ಇತ್ಯರ್ಥ ಮಾಡಿಕೊಳ್ಳಬೇಕೆಂಬ ಆಶಯವಿತ್ತು. ಅಂಥ ಸಮಯದಲ್ಲಿ ರಾಮಕೃಷ್ಣಯ್ಯ ಎಲ್ಲರೂ ಒಪ್ಪುವಂಥ ನ್ಯಾಯ ಹೇಳುತ್ತಿದ್ದರು. ಕೆಲ ಕೈ ಮೀರಿದ ಸಂದರ್ಭಗಳಲ್ಲಿ ಪೊಲೀಸರಿಗೆ ಬರುತ್ತಿದ್ದರು.
ಇನ್ನೂ ರಾಮಕೃಷ್ಣಯ್ಯ ಅವರ ವಂಶಜರು, ಮುಖ್ಯವಾಗಿ ತಮ್ಮ ತಂದೆಯ ಕೆಲಸವನ್ನು ಮುಂದುವರಿಸಿದ್ದಾರೆ. ಅವರ ಮಕ್ಕಳಾದ ಸುಂದರ ರಾಜು, ಒಮಿ ಕೊಡಿಕೊಂಡದ ಪ್ರಾಚೀನ ಐತಿಹಾಸಿಕ ಕೋಟೆಯ ಆಸ್ತಿ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ಈಗ ಕೊಡಿಕೊಂಡ ಬೆಟ್ಟಕ್ಕೆ ಸಂಪರ್ಕ ಬಂದಿದೆ. ಬೆಟ್ಟಕ್ಕೆ ಹೊಸ ಮೆಟ್ಟಿಲುಗಳು ಮತ್ತು ದ್ವಾರಗಳನ್ನು ಮಾಡಿಸಿದ್ದಾರೆ. ವಿಶೇಷವಾಗಿ ಕೋಟೆಯ ಮೇಲೆಗೆ ಅಕ್ಕಮ್ಮ ದೇವಿಯ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ಅನೇಕ ಕೆಲಸಗಳನ್ನು ಅವರು ಉತ್ಸಾಹದಿಂದ ಮಾಡುತ್ತಿದ್ದಾರೆ.
ಕೊಡಿಕೊಂಡಕ್ಕೊಬ್ಬ ರಾಬಿನ್‌ವುಡ್
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸಿದ್ದ ʼಕೊಂಡವೀಟಿ ದೊಂಗʼ ಎಂಬ ಸಿನಿಮಾ ಇದೆ. ಅದರಲ್ಲಿ ಚಿರಂಜೀವಿ ಅವರದ್ದು ರಾಬಿನ್‌ವುಡ್ ಶೈಲಿಯ ಪಾತ್ರ. ಉಳ್ಳವರ ಬಳಿ ಕಿತ್ತು ಇಲ್ಲದವರಿಗೆ ಕೊಡುವ ಕೊಡುವ ಕಾರ್ಯ. ಅದೇ ಸಿನಿಮಾ ಸ್ಟೈಲ್‌ನಂತೆ ಕೊಡಿಕೊಂಡ ಗ್ರಾಮದ ಒಬ್ಬ ಯುವಕ ರಾಬಿನ್‌ವುಡ್ ರೀತಿಯಲ್ಲಿಯೇ ಹೆಸರಾಗಿದ್ದನಂತೆ.
ಇದು ಸ್ವಾತಂತ್ರ್ಯಪೂರ್ವದ ಕಥೆ. ಕೊಡಿಕೊಂಡ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಬಡತನದಿಂದ ಊಟಕ್ಕಿಲ್ಲದೆ ನರಳುತ್ತಿದ್ದರು. ಆ ಆ ಸಂದರ್ಭದಲ್ಲಿ ಊರಿನ ಯುವಕನೊಬ್ಬ ರಾಬಿನ್‌ವುಡ್‌ನಂತೆ ಕುದುರೆ ಮೇಲೆ ಒಂದು ನಾಯಿಯ ಜೊತೆಗೆ ಪಕ್ಕದ ಕರ್ನಾಟಕದಲ್ಲಿದ್ದ ಜಮೀನುದಾರರ ಮನೆಗಳ ಮೇಲೆ ದಾಳಿ ಮಾಡಿ ಹಣವನ್ನು ಲೂಟಿ ಮಾಡಿ ಜನರಿಗೆ ಹಂಚುತ್ತಿದ್ದ ಎಂದು ಜನ ಮಾತನಾಡಿಕೊಳ್ಳುತ್ತಾರೆ.
ಬಾಗೇಪಲ್ಲಿ ದಾಟಿ ಬರುತ್ತಿದ್ದ ಆ ಯುವ ಗುಡಿಬಂಡೆ, ಬೀಚಗಾನಹಳ್ಳಿ, ವರ್ಲಕೊಂಡೆ, ಪೇರೇಸಂದ್ರ, ಚಿಕ್ಕಬಳ್ಳಾಪುರದ ವರೆಗೂ ಹೋಗಿ ಹಣವಿದ್ದವರ ಮನೆಗಳನ್ನು ಕೊಳ್ಳೆ ಹೊಡೆದು ಕೊಡಿಕೊಂಡಕ್ಕೆ ವಾಪಸ್ ಆಗುತ್ತಿದ್ದ ಎಂದು ಜನ ಹೇಳುತ್ತಾರೆ.
- (*ಪೆದರಾಯುಡು: ಟಾಲಿವುಡ್ ನಟ ಮೋಹನ್ ಬಾಬು ಹಾಗೂ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ನಟಿಸಿದ ಸೂಪರ್ ಹಿಟ್ ಸಿನಿಮಾ.)
ಡಿ.ಜಿ ಪವನ್ ಕಲ್ಯಾಣ್
- ಓದಿದ್ದು ಇಂಗ್ಲೀಷ್ ಲಿಟರೇಚರ್. ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.
ತೂಕ ತುಂಬಿದ ಇತಿಹಾಸ,ಸೇವೆ,ಧಾನ ವಿಷಯಗಳ ಬಗ್ಗೆ ಸರಳವಾಗಿ ತಿಳಿಸುವ ಲೇಖನ. ಧನ್ಯವಾದಗಳು ಸರ್
Excellent information. Appreciate efforts to revive the ancient historic Places.