ಹೊಸ ಪರೀಕ್ಷಾ ಪದ್ಧತಿಯಿಂದ ಕಂಗಾಲಾಗಿದ್ದ ವಿದ್ಯಾರ್ಥಿ-ಪೋಷಕರು ಈಗ ನಿರಾಳ
by GS Bharath Gudibande
ಗುಡಿಬಂಡೆ: ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಅವರ ಸಂದೇಹಗಳನ್ನು ಫೋನ್ ಇನ್ ಮೂಲಕ ನಿವಾರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾಹಿತಿ ನೀಡಿದರು.
ತಾಲೂಕಿನ 732 ವಿದ್ಯಾರ್ಥಿಗಳ ಪೈಕಿ 109 ವಿದ್ಯಾರ್ಥಿಗಳಿಗೆ ಫೋನ್ ಕರೆಯ ಮೂಲಕ ಸೂಕ್ತ ಸಲಹೆ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಂಪನ್ಮೂಲ ಶಿಕ್ಷಕರಿಂದ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿ ಅವರು ಮಾತನಾಡಿದರು.
109 ವಿದ್ಯಾರ್ಥಿಗಳು ಫೋನ್ ಕರೆಗಳ ಮೂಲಕ ವಿಷಯದ ಕ್ಲಷ್ಟರ್, ಓಎಂಆರ್ʼನಲ್ಲಿ ಉತ್ತರಿಸುವ ವಿಧಾನ, ಬಸ್‌ಗಳ ವ್ಯವಸ್ಥೆ, ನೀರು, ಆಹಾರ, ಸುರಕ್ಷತೆ, ವಾಹನ ವ್ಯವಸ್ಥೆ, ಪ್ರವೇಶ ಪತ್ರಗಳು, ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿಗಳು ಸೇರಿದಂತೆ ಮುಂತಾದ ಸಮಸ್ಯೆಗಳ ಬಗ್ಗೆ ಫೋನ್ ಕರೆಗಳ ಮೂಲಕ ಸಂಬಂಧ ಪಟ್ಟ ವಿಷಯದ ಶಿಕ್ಷಕರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು ಎಂದು ಅವರು ತಿಳಿಸಿದರು.
ಸಂಪನ್ಮೂಲ ಶಿಕ್ಷಕರು ಭಾಗಿ
ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಪರೀಕ್ಷೆಯ ಬಗ್ಗೆ ತಿಳಿಸಲು ಕಷ್ಟಸಾಧ್ಯ. ಹಾಗಾಗಿ ಕನ್ನಡ, ಇಂಗ್ಲೀಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಹಿಂದಿ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶಿಕ್ಷಕರಿಂದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಇಸಿಒ ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಮಾಹಿತಿ ನೀಡಲು ಫೋನ್ ಇನ್ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಂದ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಸಂಪನ್ಮೂಲ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಲಾಯಿತು ಎಂದು ಹೇಳಿದರು.
ಈ ವೇಳೆ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕ ಕೆ.ಸಿ ಮಂಜುನಾಥ್, ಕನ್ನಡದ ನಾರಾಯಣಸ್ವಾಮಿ, ಇಂಗ್ಲಿಷ್ʼನ ನಂದಾದೇವಿ, ಹಿಂದಿಯ ಗಿರಿಜಾಂಬಾ, ಗಣಿತದ ಹಿದಾಯತುಲ್ಲಾ, ಸಮಾಜ ವಿಜ್ಞಾನದ ಉಮಾಶಂಕರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.