ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಮನ್ವಯ ಅಧಿಕಾರಿ ಆಗಿದ್ದ ಕೆ.ಸಿ.ಸದಾನಂದ ನಿಧನರಾಗಿದ್ದಾರೆ.
ಸೋಮವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ತಡರಾತ್ರಿ 12 ಗಂಟೆ ಹೊತ್ತಿಗೆ ನಿಧನರಾಗಿದ್ದು, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ರಾತ್ರಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣವೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲವಾಗಿದ್ದ ಚನ್ನಪಟ್ಟಣದ ಸದಾನಂದ, ಕರ್ನಾಟಕ ಮಲ್ಲ, ಸಂಜೆವಾಣಿ, ಈ ಸಂಜೆ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಸದಾನಂದ, ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಮನ್ವಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರು ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಅವರು ನಿಧನ ಹೊಂದಿದ ದಿನವೂ ಕೆಆರ್‌ಎಸ್ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ಸದಾನಂದ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ.ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು” ಎಂದು ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.
ಜತೆಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ ಕೆ.ಎಸ್.ಈಶ್ವರಪ್ಪ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. “ನೇರ ನಿಷ್ಠುರ ಮನೋಭಾವದ ಸದಾನಂದ ಅವರು, ʼಸಂಜೆವಾಣಿʼ, ʼಈ ಸಂಜೆʼ ಹಾಗೂ ʼಕನ್ನಡಪ್ರಭʼ ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿದ್ದರು. ಬರವಣಿಗೆಯಲ್ಲಿ ತೀಕ್ಷ್ಣತೆ, ಬರೆಯಬೇಕಾದ್ದನ್ನು ನೇರವಾಗಿ ಮುಲಾಜಿಲ್ಲದೆ ಬರೆಯುತ್ತಿದ್ದವರು” ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.