5-10ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲ; ಗುಡಿಬಂಡೆ ತಾಲೂಕಿನಲ್ಲಿ ವಿದ್ಯಾರ್ಥಿ ಸ್ನೇಹಿ ಉಪಕ್ರಮ
by GS Bharath Gudibande
ಗುಡಿಬಂಡೆ: ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿಗಳಿಲ್ಲ ಎಂದು ಶಾಲೆಯಲ್ಲಿ ಕುಳಿತುಕೊಳ್ಳದೆ ತಮ್ಮ ಶಾಲಾ ವ್ಯಾಪ್ತಿಯಲ್ಲಿ ಬರುವ ಹಳ್ಳಿ-ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಮನೆ ಮನೆಗೆ ಹೋಗಿ ʼವಿದ್ಯಾಗಮʼ ಸಂವೇದ ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 5-10ನೇ ತರಗತಿಗಳ ವೇಳಾಪಟ್ಟಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಕೊರೋನಾ ಸೋಂಕಿನ ಕಾರಣ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಈ ಕಾರಣಕ್ಕೆ ಮಕ್ಕಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗೆ ತೆರಳಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತರಗತಿಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ವಿದ್ಯಾರ್ಥಿಗಳ ಪೋಷಕರಿಗೆ ಸಂತೋಷ ಉಂಟು ಮಾಡಿದೆ.
ಚಂದನ ವಾಹಿನಿಯಲ್ಲಿ ನಡೆಯುವ ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ತರಗತಿಗಳನ್ನು 5-10ನೇ ತರಗತಿ ಮಕ್ಕಳು ವೀಕ್ಷಿಸುವಂತೆ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡುತ್ತಿದ್ದಾರೆ.
ಯಾವ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂಬುದು ಸರಕಾರದ ಉದ್ದೇಶ. ಹೀಗಾಗಿ ಅದನ್ನು ಕಾರ್ಯರೂಪಕ್ಕೆ ತರಲು ತಾಲೂಕಿನ ಶಿಕ್ಷಕರು ಪ್ರಯತ್ನ ಮಾಡುತ್ತಿದ್ದಾರೆ, ಶಾಲೆಯಿಂದ ವಂಚಿತಾಗಿ ಮಕ್ಕಳು ವಿದ್ಯಾಭ್ಯಾಸ ಹಾಳು ಮಾಡಿಕೊಳ್ಳದೆ ದೂರದರ್ಶನದಲ್ಲಿ ಬರುವ ತರಗತಿಗಳನ್ನು ಶ್ರದ್ಧೆಯಿಂದ ಕೇಳಿಸಿಕೊಂಡು, ಶೈಕ್ಷಣಿಕವಾಗಿ ಬೆಳೆಯಬೇಕು ಎಂಬುದೇ ಶಿಕ್ಷಕರ ಆಶಯವಾಗಿದೆ.
ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಮನೆಗಳತ್ತಲೇ ಹೊರಟಿದ್ದು, ಈ ಪ್ರಯೋಗಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದ್ದಾರೆ.
ಸರಕಾರಿ ಶಾಲೆಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾಡಲು ಮೊಬೈಲ್ ಸೇರಿದಂತೆ ಮುಂತಾದ ಸಮಸ್ಯೆಗಳಿವೆ. ಆದ್ದರಿಂದ ಸರಕಾರ ವಿದ್ಯಾಗಮ ಸಂವೇದ ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ತರಗತಿಗಳನ್ನು ಮಕ್ಕಳು ಆಲಿಸಿ ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಹಾಗಾಗಿ ನಾವು ಮತ್ತು ನಮ್ಮ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ತರಗತಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಜನಪದ ಆರ್. ರಾಜಪ್ಪ, ವಿಶೇಷ ಸಂಪನ್ಮೂಲ ಶಿಕ್ಷಕ ಗುಡಿಬಂಡೆ
ಕೊರೋನಾ ಸೋಂಕಿನ ಕಾರಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ವಿಭಿನ್ನ ಕಾರ್ಯಕ್ರಮ ಮಾಡುತ್ತಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ತರಗತಿಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ವಿದ್ಯಾಗಮ ಸಂವೇದನ ತರಗತಿಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯ.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗುಡಿಬಂಡೆ