ಸಂಕಷ್ಟಕ್ಕೆ ಸಿಲುಕಿದ ರೈತ ಕುಟುಂಬಗಳನ್ನು ಕೈಬಿಡುವುದಿಲ್ಲ ಎಂದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು: ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ಪಡೆದವರ ಕುಟುಂಬದವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅಂಥವರ ಸಾಲ ಮನ್ನಾ ಮಾಡುವ ಚಿಂತನೆ ಮುಖ್ಯಮಂತ್ರಿಗಳಿಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ʼಗಳಿಂದ ಸಾಲ ಪಡೆದಿರುವವರು ಕೋವಿಡ್ʼನಿಂದ ಮೃತಪಟ್ಟಿದ್ದರೆ ಅಂಥವರ ಪಟ್ಟಿ ಹಾಗೂ ಸಾಲ ವಿವರವನ್ನು ಕೊಡುವಂತೆ ಈಗಾಗಲೇ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಎಂಡಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿಯೇ ವಿವರಗಳನ್ನು ಪಡೆದು ಕಾರ್ಯಕ್ರಮವನ್ನು ಆಯೋಜಿಸಿ ಸಾಲ ಮನ್ನಾ ಘೋಷಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ ನೀಡುವಂತೆ ಮುಖ್ಯಮಂತ್ರಿಗಳು ಗುರಿಯನ್ನು ನಿಗದಿಪಡಿಸಿದ್ದು, ಕಳೆದ ವರ್ಷದಂತೆ ಶೇ.100 ಗುರಿಯನ್ನು ಮೀರಿ ಸಾಲ ವಿತರಣೆ ಮಾಡಬೇಕೆಂದು ಸೂಚನೆ ನೀಡಿದ್ದಾಗಿ ಅವರು ತಿಳಿಸಿದರು.
ಕಳೆದ ವರ್ಷ ಸಾಲ ನೀಡಿಕೆ ಗುರಿಯನ್ನು ಮೀರಿ ಹೇಗೆ ಶೇ.114ರಷ್ಟು ಬೆಳೆ ಸಾಲವನ್ನು ನೀಡಲಾಗಿದೆಯೋ ಹಾಗೆಯೇ ಈ ಬಾರಿಯೂ ಸಹಕಾರ ಇಲಾಖೆ ಸಾಧನೆ ಮಾಡಲಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದರಂತೆ ಈಚೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ವಿಭಾಗದ ಡಿಸಿಸಿ ಬ್ಯಾಂಕ್ ವತಿಯಿಂದ ಕಾರ್ಯಕ್ರಮ ನಡೆಸಿ, ಪ್ರಸಕ್ತ ಸಾಲಿನ ಸಾಲ ನೀಡಿಕೆ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆಯನ್ನು ನೀಡಿದ್ದಾರೆ. ಮೈಸೂರಿನಲ್ಲಿ ಈಗ 2ನೇ ಹಂತದ ಕಾರ್ಯಕ್ರಮಕ್ಕೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಕಳೆದ ವರ್ಷ ಶೇ.114 ಸಾಧನೆ
ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ. 114 ಸಾಧನೆ ಮಾಡಿದೆ ಎಂದು ಸಚಿವರು ತಿಳಿಸಿದರು.