ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಪರಿಸರ ಪ್ರೇಮ; ಠಾಣೆಯ ಸುತ್ತ ಹಸಿರುಮಯ
by GS Bharath Gudibande
ಗುಡಿಬಂಡೆ: ಪೊಲೀಸ್ ಠಾಣೆ ಎಂದರೆ ಜನರಿಗೆ ಭಯದ ಭಾವನೆ ಸಹಜ. ಆದರೆ, ಖಾಕಿಗಳಲ್ಲೂ ಸರಳತೆ ಇರುತ್ತದೆ ಎನ್ನುವುದು ಕೊಂಚ ವಿರಳ. ಅದರ ಜತೆಗೆ; ಪರಿಸರ ಪ್ರೇಮ, ಜನಸ್ನೇಹಿ ವರ್ತನೆ ಇದ್ದರಂತೂ ಅದಕ್ಕಿಂತ ಮಿಗಿಲಾದ ಸುದ್ದಿ ಬೇರೆ ಇಲ್ಲ ಎನ್ನಬಹುದು.
ಇಂಥ ಹೆಚ್ಚುಗಾರಿಕೆಯ ಸುದ್ದಿಗೆ ಪಾತ್ರರಾಗಿದ್ದಾರೆ ಗುಡಿಬಂಡೆ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಅವರು.
ಅವರು ಮಾಡಿರುವುದು ಇಷ್ಟೇ. ಅಪರಾಧಿಗಳಿಗೆ ಬೆವರಿಳಿಸುವ ನಿತ್ಯದ ಕರ್ತವ್ಯದ ಜತೆಯಲ್ಲೇ ಜನ ಸಾಮಾನ್ಯರಿಗೆ ನಿಶ್ಚಿಂತೆಯಿಂದ ಉಸಿರಾಡುವ ನಿರ್ಮಲ ಪರಿಸರವನ್ನೂ ಠಾಣೆಯ ಸುತ್ತಲೂ ನಿರ್ಮಿಸಿದ್ದಾರೆ.
ಪೊಲೀಸ್ ಠಾಣೆಯ ಆವರಣದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮರ ಗಿಡ, ಅದರ ನಡುವೆ ನೆಲದಗಲಕ್ಕೂ ಹಾಸಿದಂತಿರುವ ಹಸಿರ ಹುಲ್ಲು, ಜನ ದೂರು ನೀಡಲು ಬಂದರೆ ಹೊರಗೆ ಅವರಿಗೆ ಮರಗಳ ತಂಪಾದ ನೆರಳು, ಶುದ್ಧ ಕುಡಿಯುವ ನೀರು, ನೀಟಾದ ಶೌಚಾಲಯ.. ಪೊಲೀಸ್ ಠಾಣೆಯಲ್ಲಿ ಜನರಿಗೆ ಇಷ್ಟೆಲ್ಲ ಸೌಕರ್ಯ ಇರುತ್ತಾ? ಎಂಬ ಪ್ರಶ್ನೆ ಇದ್ದರೆ ಅಂಥವರು ಒಮ್ಮೆ ಗುಡಿಬಂಡೆ ಪೊಲೀಸ್ ಠಾಣೆಗೆ ಭೇಟಿ ನೀಡಿ…
ಹಲವು ಕಡೆ ಆರಕ್ಷಕ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಲಿಂಗರಾಜು, ವರ್ಗವಾದ ಕಡೆಯೆಲ್ಲ ಇದನ್ನೇ ಮಾಡಿದ್ದಾರೆ. ಗುಡಿಬಂಡೆಯಲ್ಲೂ ಅದನ್ನೇ ಮಾಡಿದ್ದು, ಠಾಣೆಯ ಸುತ್ತಲು ಹಸಿರ ವಾತಾವರಣದ ಜತೆಗೆ ಶುಚಿತ್ವವನ್ನೂ ಕಾಪಾಡುವಲ್ಲೂ ಕಾಳಜಿ ತೋರಿದ್ದಾರೆ.
ಹಳೆ ಕಟ್ಟಡಕ್ಕೆ ಹೊಸ ಮೆರಗು
ಪೊಲೀಸ್ ಠಾಣೆಯ ಹಳೆ ಕಟ್ಟಡದ ಚಿತ್ರಣವನ್ನು ಬದಲಿಸಿ, ಠಾಣೆಯೊಳಗೆ ಸಿಬ್ಬಂದಿ ಕೆಲಸ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ಹಳೆಯ ಕಟ್ಟಡ ಅನುಕೂಲಕರವಾಗಿದೆ ಎನ್ನುತ್ತಾರೆ ಠಾಣೆಯ ಸಿಬ್ಬಂದಿ. ಒಂದು ವೇಳೆ ಆ ಕಟ್ಟಡವನ್ನು ಹಾಗೆಯೇ ಬಿಟ್ಟಿದ್ದಿದ್ದರೆ ಧೂಳು ತುಂಬಿ ಹಾಳು ಕೊಂಪೆಯಾಗುತ್ತಿತ್ತು.
ಸುತ್ತ ಹಚ್ಚ ಹಸಿರಿನ ಒಂದು ಗಾರ್ಡನ್ ನಿರ್ಮಾಣ ಮಾಡಲಾಗಿದ್ದು, ದೂರುದಾರರು ಇಲ್ಲಿ ಕುಳಿತು ತಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಗರಿಸಿಕೊಳ್ಳಲು ಈ ಪರಿಸರ ಪೂರಕವಾಗಿದೆ. ಒಂದು ವೇಳೆ ಕೆಲವೊತ್ತು ಕಾಯಬೇಕಾದ ಸಂದರ್ಭ ಬಂದರೂ ಗಾರ್ಡನ್‌ನಲ್ಲಿ ನಿಶ್ಚಿಂತೆಯಿಂದ ಕೂರಬಹುದು.
ಇನ್ನು ದೂರುದಾರರು ಬಂದರೆ ಅವರಿಗೆ ಆತ್ಮೀಯ ಸ್ವಾಗತವಿದೆ. ಅವರ ಸಮಸ್ಯೆ ಹಾಗೂ ದೂರಿನ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಪಡೆದು ಕ್ಷಿಪ್ರಗತಿಯಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಲಿಂಗರಾಜು.
ಪೊಲೀಸ್ ಠಾಣೆಗೆ ದೂರು ನೀಡಲು ಬಂದವರು ಮಾನಸಿಕವಾಗಿ ನೊಂದಿರುತ್ತಾರೆ. ಹಾಗಾಗಿ ಉತ್ತಮ ಪರಿಸರ ಇರುವ ವಾತವರಣಕ್ಕೆ ಬಂದಾಗ ದೂರುದಾರರ ಒತ್ತಡ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ನಮ್ಮ ಠಾಣೆಯ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಲೂ ಇಲ್ಲಿ ಸದಾ ಹಸಿರು ಇರುವಂತೆ ಮಾಡಿದ್ದೇವೆ. ನಾವು ಕರ್ತವ್ಯ ನಿರ್ವಹಿಸುವ ಸ್ಥಳ ಸ್ವಚ್ಚವಾಗಿರಬೇಕು. ಬರುವ ನಾಗರೀಕರಿಗೂ ಬೇಸರ ಎನಿಸಬಾರದು. ಆಹ್ಲಾದಕರ ವಾತಾವರಣ ಸಮಸ್ಯೆಗಳನ್ನೂ ಪರಿಹರಿಸಲು ಪೂರಕವಾಗಿರುತ್ತದೆ.
ಲಿಂಗರಾಜು / ಆರಕ್ಷಕ ವೃತ್ತ ನಿರೀಕ್ಷಕ, ಗುಡಿಬಂಡೆ
ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ದಾಖಲು ಮಾಡುಲು ಬರುವ ಸಾರ್ವಜನಿಕರಿಗೆ ಒಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಪೊಲೀಸರು. ಕುಡಿಯುವ ನೀರು, ಸ್ಯಾನಿಟೈಸರ್, ಸ್ವಲ್ಪ ಸಮಯ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಿದ್ದಾರೆ. ದೂರುದಾರರಿಗೆ ಜರೂರಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತಿದ್ದಾರೆ.
ರಿಜ್ವಾನ್ ಪಾಷಾ / ಕಾಂಗ್ರಸ್ ಮುಖಂಡ, ಗುಡಿಬಂಡೆ
Comments 2