ಗುಡಿಬಂಡೆ: ನನ್ನ ಮತ ಕ್ಷೇತ್ರ ಸೋಮೇನಹಳ್ಳಿ ಜಿ.ಪಂ. ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೆನೆ ಎಂದು ಜಿ.ಪಂ. ಸದಸ್ಯೆ ಗಾಯಿತ್ರಿ ನಂಜುಂಡಪ್ಪ ಹೇಳಿದರು.
ತಾಲೂಕಿನ ತಿರುಮಣಿ ಗ್ರಾಮದಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಇಲಾಖೆಯ ಆರೋಗ್ಯ ಉಪ ಕೇಂದ್ರದ ಮರು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು ಅವರು.
ಕ್ಷೇತ್ರದ ವ್ಯಾಪ್ತಿಯ ಹಳ್ಳಿಹಳ್ಳಿಗೂ ಅನುದಾನವನ್ನು ಸಮನಾಗಿ ಹಂಚಿದ್ದೆನೆ. ಅದರಂತೆ ಪ್ರತಿ ಗ್ರಾಮದಲ್ಲಿ ಸಿ.ಸಿ.ರಸ್ತೆ, ಚರಂಡಿ ದುರಸ್ತಿ, ಶಾಲಾ ಕಟ್ಟಡ ನಿರ್ಮಾಣ, ಶಾಲಾ ಕಾಂಪೌಂಡ್ ನಿರ್ಮಾಣ, ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ, ಪಶು ಚಿಕಿತ್ಸಾಲಯ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೆನೆ. ಅದರಂತೆ ಈ ಭಾಗದ ಮಹಿಳೆಯರ ಸ್ವಾವಲಂಭಿ ಜೀವನ ನಿರ್ವಹಣೆಗೆ ಟೈಲರಿಂಗ್ ಮೀಷನ್, ಗಿರಿರಾಜ ಕೋಳಿ, ಕರಕುಶಲ ವಸ್ತುಗಳನ್ನು ನೀಡಿದ್ದು, ಅವುಗಳನ್ನು ಮಹಿಳೆಯರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕೆಂದರು ಅವರು.
ಜಿ.ಪಂ ಚುನಾವಣೆಯ ಟಿಕೆಟ್ ಆಕಾಂಕ್ಷಿ
ನಾನು ನನ್ನ ಐದು ವರ್ಷಗಳ ಅವಧಿಯಲ್ಲಿ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇದನ್ನು ಮನಗಂಡ ಜನತೆ ಮತ್ತೊಮ್ಮೆ ಸಾಮಾನ್ಯ ಕ್ಷೇತ್ರವಾದ ಎಲ್ಲೋಡು ಕ್ಷೇತ್ರದ ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಅದರಂತೆ ನಾನು ಕಾಂಗ್ರೇಸ್ʼನ ಟಿಕೆಟ್ ಅಕಾಂಕ್ಷಿಯಾಗಿದ್ದು, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗಾಯಿತ್ರಿ ನಂಜುಂಡಪ್ಪ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಆರೋಗ್ಯವೇ ಭಾಗ್ಯ ಎಂದರಿತು ಸರಕಾರ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ಹಾಗೂ ಔಷಧಿ ದೊರಕಿಸಲು ಗ್ರಾಮ ಮಟ್ಟಕ್ಕೆ ಆರೋಗ್ಯ ಸೌಲಭ್ಯವನ್ನು ತಂದಿದೆ ಎಂದು ಅವರು ಮಾಹಿತಿ ನೀಡಿದರು.
ಸರಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಿಂದ ಗ್ರಾಮೀಣ ಪ್ರದೇಶ ಆರೋಗ್ಯ ಕ್ಷೇತದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ. ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಶುಚಿತ್ವ ಕಾಪಾಡಬೇಕು. ಕಡ್ಡಾಯವಾಗಿ ಶೌಚಾಲಯ ಬಳಕೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ವೇಳೆ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥರೆಡ್ಡಿ, ಮುಖಂಡರಾದ ನಂಜುಂಡಪ್ಪ, ಚಲಪತಿ, ಗಂಗಪ್ಪ ಜಿಲ್ಲಾ ಪಂಚಾಯತಿ ಎ.ಇ.ಇ.ರಘನಾಥ್ ಮೂರ್ತಿ ಸೇರಿ ಹಲವರು ಇದ್ದರು.