ಗುಡಿಬಂಡೆ ಅರಣ್ಯಾಧಿಕಾರಿಗಳ ದಿಟ್ಟ ಕ್ರಮ; ತೆರವುಗೊಳಿಸಿದ ಪ್ರದೇಶದಲ್ಲಿ 3,000 ಗಿಡ
by GS Bharath Gudibande
ಗುಡಿಬಂಡೆ: ಸರಕಾರಿ ಭೂಮಿ ಅವ್ಯಾಹತವಾಗಿ ಒತ್ತುವರಿಯಾಗುತ್ತಿರುವ ಈ ಸಂದರ್ಭದಲ್ಲಿ ತಾಲೂಕು ಅರಣ್ಯ ಇಲಾಖೆ 15 ಎಕರೆಯಷ್ಟು ಭೂ ಒತ್ತುವರಿಯನ್ನು ತೆರವುಗೊಳಿಸಿದೆ.
ತಾಲ್ಲೂಕಿನ ಎನ್.ಡಿ.ಬಿ. 5ನೇ ಬ್ಲಾಕ್ 3ನೇ ಕಾರ್ಯವ್ಯಾಪ್ತಿ ಗಸ್ತುಗೆ ಸಂಬಂಧಿಸಿದ ರಾಜ್ಯ ಮೀಸಲು ಅರಣ್ಯ ಪ್ರದೇಶದ ಸರ್ವೆ ನಂಬರ್ 37ರ ಉದಗಿರಿ ನಲ್ಲಪ್ಪನಹಳ್ಳಿಯ 15 ಎಕರೆ ಅರಣ್ಯ ಪ್ರದೇಶವನ್ನು ಸಿದ್ದಗಾನಹಳ್ಳಿಯ 7 ರೈತ ಕುಟುಂಬದವರು ಒತ್ತುವರಿ ಮಾಡಿಕೊಂಡಿದ್ದರು, ಅದನ್ನು ತಾಲ್ಲೂಕು ಅರಣ್ಯ ಇಲಾಖೆ ಒತ್ತುವರಿ ಜಮೀನು ಬಿಡಿಸಿ ಅರಣ್ಯ ಪ್ರದೇಶವನ್ನು ರಕ್ಷಸುವಲ್ಲಿ ಯಶಸ್ವಿಯಾಗಿದ್ದಾರೆ.
15 ಎಕರೆಯಲ್ಲಿ 3 ಸಾವಿರ ಗಿಡ
ತಾಲೂಕಿನ ಉಲ್ಲೋಡು ವ್ಯಾಪ್ತಿಯ ಉದಗಿರಿನಲ್ಲಪ್ಪನಹಳ್ಳಿಯ ಸಮೀಪವಿರುವ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದರು. ಅಲ್ಲಿ ಒತ್ತುವರಿಯನ್ನು ತೆರವುಗೊಳಿಸಿ 3 ಸಾವಿರ ಗಿಡಗಳನ್ನು ನೆಟ್ಟು ಅದನ್ನು ಪೋಷಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಒತ್ತುವರಿ ಜಮೀನಿಗೆ ಬೌಂಡರಿ
ಒತ್ತುವರಿ ಮಾಡಿರುವ ಜಮೀನು ಬಿಡಿಸಿ ಅದಕ್ಕೆ ಬೌಂಡರಿ ಹಾಕಲಾಗಿದೆ. 15 ಎಕರೆಯಲ್ಲಿ 3 ಸಾವಿರ ಗಿಡಗಳನ್ನು ನೆಡಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವಲಯದ ಗಸ್ತು ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವನ್ನು ರಕ್ಷಿಸಿ ಪೋಷಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಪ್ರದೇಶವನ್ನು ಒತ್ತುವರಿ ಮಾಡಿದರೆ ಅದು ಕಾನೂನು ರೀತ್ಯಾ ಅಪರಾಧ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30 ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ರೈತರಿಗೆ ಬೇರೆ ಕಡೆ ಜಮೀನು ಮಂಜೂರಾಗಿದ್ದರೂ ಅನಧಿಕೃತವಾಗಿ ಅರಣ್ಯ ಪ್ರದೇಶದಲ್ಲಿದ್ದ ಕಾರಣ ನಮ್ಮ ಮೇಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಒತ್ತುವರಿ ತೆರವುಗೊಳಿಸಿ ಆ ಸ್ಥಳದಲ್ಲಿ ಗಿಡಗಳನ್ನು ನೆಡಲಾಗಿದೆ. ತಾಲೂಕಿನ ಅರಣ್ಯ ಪ್ರದೇಶದಲ್ಲಿ ಯಾರೇ ಒತ್ತುವರಿ ಮಾಡಿದರೂ ಜಿಪಿಆರ್‌ಎಸ್ ಸ್ಯಾಟಲೈಟ್ ಮೂಲಕ ನಮಗೆ ಮಾಹಿತಿ ಬರುತ್ತದೆ. ಅದರ ಆಧಾರದ ಮೆರೆಗೆ ಒತ್ತುವರಿ ತೆರವುಗೊಳಿಸಿ ಅರಣ್ಯ ಪ್ರದೇಶವನ್ನು ರಕ್ಷಿಸಲಾಗುವುದು.
ಚಂದ್ರಶೇಖರ್ ತಾಲೂಕು ವಲಯ ಅರಣ್ಯಾಧಿಕಾರಿ ಗುಡಿಬಂಡೆ
ನನ್ನ ಗಸ್ತು ವ್ಯಾಪ್ತಿಯಲ್ಲಿ ಅತಿಕ್ರಮಣವಾಗಿ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿತ್ತು. ನಂತರ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮೀಕ್ಷೆ ಮಾಡಿಸಿ ಒತ್ತುವರಿಯನ್ನು ಮೇಲಿನ ಅಧಿಕಾರಿಗಳ ಆದೇಶದಂತೆ ತೆರವುಗೊಳಿಸಿ 15 ಎಕರೆಯಲ್ಲಿ 3 ಸಾವಿರ ಗಿಡಗಳನ್ನು ಬೆಳಸಲಾಗುತ್ತಿದೆ.
ಹುಲುಗಪ್ಪ ತಾಲೂಕು ವಲಯ ಅರಣ್ಯ ರಕ್ಷಕ, ಗುಡಿಬಂಡೆ