ಗುಡಿಬಂಡೆ ಪಟ್ಟಣದ 11 ವಾರ್ಡ್‌ಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
by GS Bharath Gudibande
ಗುಡಿಬಂಡೆ: ಕೊರೋನಾ ಸೋಂಕಿನಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ ಕ್ಷೇತ್ರದ ಪ್ರತಿ ಮನೆಗೂ ಆಹಾರ್ ಕಿಟ್ ವಿತರಿಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನನಗೆ ಲೀಡರ್, ರಾಜಕೀಯ ನಾಯಕ ಅಥವಾ ರಾಜಕಾರಣಿ ಎಂದು ಕರೆಸಿಕೊಳ್ಳುವುದಕ್ಕಿಂತ ʼಜನಸೇವಕʼ ಎಂದು ಕರೆದರೆ ಹೆಚ್ಚು ಸಂತೋಷವಾಗುತ್ತದೆ. ನಾಯಕನಾಗಿ ನಿಮ್ಮಿಂದ ದೂರ ಉಳಿಯುವುದಕ್ಕಿಂತ ಸೇವಕ ಎನಿಸಿಕೊಂಡು ನಿಮ್ಮ ಜತೆಯಲ್ಲೇ ಇರುವುದು ಇಷ್ಟ ಎಂದರು ಸುಬ್ಬಾರೆಡ್ಡಿ.
ನಾನು ಶಾಸಕನಾಗಿ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಸದಲ್ಲಿ ತಾಲೂಕು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಹೀಗೆ ಗುಡಿಬಂಡೆ ತಾಲೂಕು ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಶಾಸಕರು ಹೇಳಿದರು.
ಈ ತಾಲೂಕು ಎಲ್ಲ ರಂಗಗಳಲ್ಲೂ ಸರ್ವತೋಮುಖ ಅಭಿವೃದ್ಧಿ ಆಗಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಪಿಂಚಣಿಗಳು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಉತ್ತಮವಾಗಿ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಸೇವೆ ಸಲ್ಲಿಸುವುದಾಗಿ ಸುಬ್ಬಾರೆಡ್ಡಿ ನುಡಿದರು.
ಲಾಕ್‍ಡೌನ್‍ನಿಂದ ಕಾರ್ಮಿಕರು, ದಿನಗೂಲಿ ನೌಕರರು ಕೆಲಸವಿಲ್ಲದೇ ಮನೆಯಲ್ಲಿ ಉಳಿಯುವಂತಾಗಿದೆ. ಕುಟುಂಬದ ನಿರ್ವಹಣೆ ಮಾಡಲು ಅಶಕ್ತರಾಗಿರುವ ಸ್ಥಿತಿಯಲ್ಲಿದ್ದಾರೆ. ಅಂತಹವರಿಗೆ ಅನುಕೂಲವಾಗಲೆಂದು ಆಹಾರದ ಕಿಟ್ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಪೋಲಿಸರ ಸೇವೆ ಶ್ಲಾಘನೀಯ
ಕೊರೋನಾ ಕಷ್ಟ ಕಾಲದಲ್ಲಿ ಪೊಲೀಸರು ತಮ್ಮ ಕುಟುಂಬಗಳನ್ನು ತೊರೆದು ಸಮಾಜ ಹಾಗೂ ದೇಶದ ರಕ್ಷಣೆಗಾಗಿ ಶ್ರಮಿಸಿದ್ದಾರೆ. ಸೋಂಕಿನ ನಡುವೆಯೂ ಜೀವವನ್ನೂ ಪಣಕ್ಕಿಟ್ಟು ಜನರಿಗಾಗಿ ಕೆಲಸ ಮಾಡಿದ್ದಾರೆ. ಇವತ್ತು ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಶೂನ್ಯಕ್ಕೆ ಬಂದಿದೆ ಎಂದು ಅವರ ಕೊಡುಗೆಯೂ ಇದೆ. ಇದಕ್ಕಾಗಿ ಗುಡಿಬಂಡೆ ತಾಲೂಕಿನ ಪೊಲೀಸರನ್ನು ಅಭಿನಂದಿಸುವೆ ಎಂದು ಶಾಸಕರು ಹೇಳಿದರು.
“ಕೊರೊನಾ ಕಡಿಮೆಯಾಯಿತು ಎಂದು ಯಾರೂ ಎಚ್ಚರ ತಪ್ಪಬಾರದು. ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಎಚ್ಚರಿಕೆಯಿಂದ ಇರಬೇಕು. ಹೊರಗೆ ಸಂಚರಿಸಬೇಕಾದರೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು ಹಾಗೂ ಸ್ಯಾನಟೈಸ್ ಮಾಡಿಕೊಳ್ಳುವುದನ್ನು ತಪ್ಪಿಸಬಾರದು.”
ಎಸ್.ಎನ್.ಸುಬ್ಬಾರೆಡ್ಡಿ ಶಾಸಕರು
ಮೊದಲ ದಿನವೇ ಪಟ್ಟಣದ ಸುಮಾರು 3 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಲಾಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ದ್ವಾರಕನಾಥ್ ನಾಯ್ಡು, ಪಟ್ಟಣ ಪಂಚಾಯತಿ ಸದಸ್ಯರಾದ ಬಷೀರ್ ರಿಜ್ವಾನ್, ವಿಕಾಸ್, ರಾಜೇಶ್, ನಾಗಿನ್ ತಾಜ್, ಗಂಗರಾಜು, ಮಂಜುಳಾ, ಮಾಜಿ ಸದಸ್ಯ ಚಂದ್ರಶೇಖರ್ ನಾಯ್ಡು, ಕಾಂಗ್ರಸ್ ಮುಖಂಡರಾದ ಕಾಂತಮ್ಮ, ಪಾವಜೇವನಹಳ್ಳಿ ನಾಗರಾಜ್, ಆದಿರೆಡ್ಡಿ, ರಘುನಾಥ್ ರೆಡ್ಡಿ, ಕೆ.ಟಿ.ಹರಿಪ್ರಸಾದ್, ಜಿ.ಎನ್.ನವೀನ್ ಗರುಡಾಚಾರ್ಲಹಳ್ಳಿ, ಅಂಬರೀಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಎನ್.ನವೀನ್ ಕುಮಾರ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.