ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಮಂಡ್ಯದ ಮಾಜಿ ಸಂಸದ, ರೈತ ನಾಯಕ ಜಿ.ಮಾದೇಗೌಡರು ಇನ್ನಿಲ್ಲ.
ವಯೋಸಹಜ ಅನಾರೋಗ್ಯದಿಂದ ಕೆಲ ದಿನಗಳಿಂದ ಕೆ.ಎಂ.ದೊಡ್ಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾದೇಗೌಡರು ತಮ್ಮ 92ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಶನಿವಾರ ಸಂಜೆ ಏಳೂವರೆ ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಆರು ಸಲ ಶಾಸಕರಾಗಿ, 2 ಸಲ ಸಚಿವರಾಗಿದ್ದ ಮಾದೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು.
ಮಂಡ್ಯ ನೆಲದ ಅಪ್ಪಟ ಹೋರಾಟಗಾರರಾದ ಜಿ.ಮಾದೇಗೌಡರು, ತಮ್ಮ ಜನಪರ ಹೋರಾಟಗಳಿಂದ ಸಾಮಾಜಿಕ ಜೀವನದಲ್ಲಿ ಅಪಾರ ಗೌರವ ಗಳಿಸಿದವರು. ದಶಕಗಳ ನಿರಂತರ ಹೋರಾಟದ ಜತೆಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಗೌಡರ ಕೊಡುಗೆ ಅನನ್ಯ. ತಮ್ಮ ರಾಜಕೀಯ ಭವಿಷ್ಯವನ್ನೂ ಲೆಕ್ಕಿಸದೇ ಕಾವೇರಿ ಹೋರಾಟದಲ್ಲಿ ರೈತರ ಪರ ನಿಂತಿದ್ದ ಅವರು, ಅಪ್ಪಟ ಗಾಂಧೀವಾದಿಯಾಗಿದ್ದರು. ಬದುಕಿನುದ್ದಕ್ಕೂ ಮೌಲ್ಯಗಳಿಗೆ ಬದ್ಧರಾಗಿ ಆದರ್ಶ ಜೀವನ ನಡೆಸಿದ್ದರು. ಮಂಡ್ಯದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಮುಂತಾದವುಗಳ ಸ್ಥಾಪನೆಗೆ ಕಾರಣರಾಗಿದ್ದರು.
- ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಹಾಗೂ ಗುಂಡೂರಾವ್, ರಾಮಕೃಷ್ಣ ಹೆಗಡೆ ಮುಂತಾದವರ ಜತೆ ಜಿ.ಮಾದೇಗೌಡರು.
ಮುಖ್ಯಮಂತ್ರಿ ಕಂಬಿನಿ
ಗಾಂಧಿವಾದಿಯಾಗಿ, ಗಾಂಧಿ ಅವರ ತತ್ವ ಆದರ್ಶಗಳನ್ನು ಜೀವನುದ್ದಕ್ಕೂ ಪಾಲಿಸಿದ ಮಾದೇಗೌಡರು, ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ನಿಧನದಿಂದ ರೈತ ಹಾಗೂ ಜನಪರ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅನನ್ಯ ನಾಯಕ, ನಿಷ್ಠುರ ವ್ಯಕ್ತಿ, ರೈತರಿಗಾಗಿ ಬದುಕು ಮುಡಿಪಿಟ್ಟ ಹೋರಾಟಗಾರ: ಡಿಸಿಎಂ
ಕೆಲ ದಿನಗಳ ಹಿಂದೆಯಷ್ಟೇ ಕೆ.ಎಂ.ದೊಡ್ಡಿಯ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದೆ. ಆರೋಗ್ಯ ಸುಧಾರಣೆಯಾಗಿ ಕ್ಷೇಮವಾಗಿ ಅವರು ಮನೆಗೆ ವಾಪಸ್ ಬರುತ್ತಾರೆಂಬ ವಿಶ್ವಾಸವಿತ್ತು. ಆದರೆ ನನ್ನನ್ನೂ ಒಳಗೊಂಡಂತೆ ಅಸಂಖ್ಯಾತ ಅಭಿಮಾನಿಗಳನ್ನು ನಿರಾಶೆಗೊಳಿಸಿ ಅವರು ಅಗಲಿರುವುದು ತೀವ್ರ ದುಃಖ ಉಂಟು ಮಾಡಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ.
ಮಾದೇಗೌಡರು ಶಾಸಕರಾಗಿದ್ದರು, ಸಚಿವರಾಗಿದ್ದರು, ಸಂಸದರಾಗಿದ್ದರು. ಛಲಬಿಡದ ಹೋರಾಟಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡಿದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಕಾವೇರಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಅವರು, ರೈತರ ಹಿತಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಲೆಕ್ಕಿಸದ ನಿಷ್ಠುರ ನಾಯಕರಾಗಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನ ತೆರೆದ ಪುಸ್ತಕವಾಗಿತ್ತು.
ಜೀವನಪೂರ್ತಿ ಹೋರಾಟ, ಮೌಲ್ಯಗಳೊಂದಿಗೆಯೇ ಬದುಕಿದ ಮಾದೇಗೌಡರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯ ಮತ್ತು ದೇಶಕ್ಕೆ ಗೌರವ ತಂದುಕೊಟ್ಟ ಅಪರೂಪದ ನಾಯಕರಾಗಿದ್ದರು. ಸರಳತೆ, ಸಜ್ಜನಿಕೆ ಹಾಗೂ ನೇರ ನಡವಳಿಕೆಯಿಂದ ಮಾದರಿಯಾಗಿದ್ದರು ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
- ರಾಜ್ಯದ ಅಪರೂಪದ, ವಿರಳ ರಾಜಕಾರಣಿಗಳಲ್ಲಿ ಒಬ್ಬರಾದ ಜಿ.ಮಾದೇಗೌಡರು ಅನಾರೋಗ್ಯದಿಂದ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಜನ್ಮದಿನದ ನಿಮಿತ್ತ ಅವರ ಚಿರಕಾಲದ ಮಿತ್ರ, ಒಡನಾಡಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರು ಕೆಲ ದಿನಗಳ ಹಿಂದೆ ಆತ್ಮೀಯವಾಗಿ ಪತ್ರವೊಂದನ್ನು ಬರೆದಿದ್ದರು. ಆ ಪತ್ರದ ಪೂರ್ಣಪಾಠ ಇಲ್ಲಿದೆ.