- Lead photo by CkPhotography ಸಿಕೆಪಿ@ckphotographi
ಬೆಂಗಳೂರು: ವೀರಶೈವ ಲಿಂಗಾಯಿತರ ನಿಗಮ ಸ್ಥಾಪನೆಯಾದ ಮೇಲೆ ಇದೀಗ ಒಕ್ಕಲಿಗರ ಅಭಿವೃದ್ಧಿ ನಿಗಮವೂ ಸ್ಥಾಪನೆಯಾಗಿದ್ದು, ಈ ಬಗ್ಗೆ ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಶನಿವಾರ ಹೊರಡಿಸಿದೆ.
ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ನಾಮಧಾರಿ, ಗೌಡ, ರೆಡ್ಡಿ, ಹೆಗ್ಗಡೆ, ಗಂಗಟಕಾರ್, ದಾಸ, ಮರಸು ಒಕ್ಕಲಿಗ, ಹಳ್ಳಿಕಾರ್, ಕುಂಚಿಟಿಗ, ಉಪ್ಪಿನ ಕೊಳಗ, ಉತ್ತಮ ಕೊಳಗ ಸೇರಿದಂತೆ ಸಮುದಾಯ ಎಲ್ಲ ಉಪ ಜಾತಿಗಳ ಒಟ್ಟಾರೆ ಅಭಿವೃದ್ಧಿಗಾಗಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅಧಿಕೃತ ಆದೇಶವನ್ನು ಸರಕಾರ ಹೊರಡಿಸಿದೆ.
ಅಲ್ಲದೆ, ಈ ನಿಗಮದ ಮೂಲಕ ಒಕ್ಕಲಿಗರ ಅಭಿವೃದ್ಧಿಗೆ 500 ಕೋಟಿ ರೂ. ಹಣ ನೀಡಲಾಗಿದ್ದು, ಆ ಬಗ್ಗೆಯೂ ಆದೇಶ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗರು ರಾಜ್ಯದ ಎರಡನೇ ಅತಿದೊಡ್ಡ ಸಮುದಾಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ ನಂತರ ಒಕ್ಕಲಿಗರ ನಿಗಮ ಸ್ಥಾಪನೆಯಾಗಬೇಕೆಂಬ ಕೂಗು ಎದ್ದಿತ್ತು.
ಪರಿಣಾಮವಾಗಿ ಕಳೆದ ಮುಂಗಡ ಪತ್ರದಲ್ಲಿ ಯಡಿಯೂರಪ್ಪ ಅವರು ಒಕ್ಕಲಿಗರ ನಿಗಮ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದರು. ಬಳಿಕ 500 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದ್ದರು. ನಿಗಮಕ್ಕಾಗಿ ಒಕ್ಕಲಿಗ ಸಮುದಾಯವು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಹಾಗೂ ನಂಜಾವಧೂತ ಶ್ರೀಗಳ ನೇತೃತ್ವದಲ್ಲಿ ದನಿ ಎತ್ತಿತ್ತು.