ಮಂಡ್ಯಕ್ಕೆ ಹೋಗಲಾಗದಕ್ಕೆ ಕಾರಣ ಕೊಟ್ಟ ಕೆಪಿಸಿಸಿ ಅಧ್ಯಕ್ಷರು
ಬೆಂಗಳೂರು: ಮಾಜಿ ಸಚಿವರು ಹಾಗೂ ಸಂಸದರಾದ ಜಿ. ಮಾದೇಗೌಡರು ರಾಜ್ಯ ಕಂಡ ಮುತ್ಸದ್ದಿ ನಾಯಕರು ಹಾಗೂ ರೈತಪರ ಹೋರಾಟಗಾರರು. ನನಗೆ ಬಹಳ ಆಪ್ತರು. ವಿದ್ಯಾರ್ಥಿ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಅವರೊಟ್ಟಿಗೆ 45 ವರ್ಷಗಳ ಕಾಲ ರಾಜಕೀಯ ಮಾಡಿದ್ದೇನೆ. ಆದರೆ ಅವರು ಇಂದು ನಮ್ಮೊಟ್ಟಿಗಿಲ್ಲ.
ಕಾವೇರಿ ಹೋರಾಟ ಅವರ ಉಸಿರಾಗಿತ್ತು. ಅವರು ನಮ್ಮನ್ನು ಅಗಲಿರುವುದು ಬಹಳ ದುಃಖ ಹಾಗೂ ನೋವಿನ ಸಂಗತಿ. ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಬಂಜಾರ ಸಮುದಾಯದ ಸಮಸ್ಯೆ ಆಲಿಸುವ ಪೂರ್ವನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರದ ಜಮಖಂಡಿಯಲ್ಲಿದ್ದೇನೆ.
ಎಲ್ಲವನ್ನು ರದ್ದು ಮಾಡಿ ಹೆಲಿಕಾಪ್ಟರ್ ಮೂಲಕ ತೆರಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಯತ್ನಿಸಿದೆ. ಆದರೆ ಹವಾಮಾನ ಹೆಲಿಕಾಪ್ಟರ್ ಹಾರಾಟಕ್ಕೆ ಪೂರಕವಾಗಿಲ್ಲ ಎಂದು ಪೈಲಟ್ ಹೇಳಿದ್ದಾರೆ. ರಸ್ತೆ ಮಾರ್ಗವಾಗಿ ಹೊರಟರೂ ಸಕಾಲಕ್ಕೆ ತಲುಪಲು ಆಗುವುದಿಲ್ಲ. ಆದ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದು ನೋವಿನ ಸಂಗತಿ. ಆದರೆ ಹನ್ನೊಂದನೇ ದಿನದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ.
ನಾನು ಮಾದೇಗೌಡರ ಪುತ್ರ ಮಧು ಮಾದೇಗೌಡ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ ರಾಹುಲ್ ಗಾಂಧಿ ಅವರು ಮಾದೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವು ಧೀಮಂತ ನಾಯಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಬಾಗಲಕೋಟೆಯಲ್ಲಿ ಪೂರ್ವ ನಿಗದಿಯಾಗಿರುವ ಕಾರ್ಯಕ್ರಮ ಇಂದು ಮುಂದುವರಿಯಲಿದೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.