ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಬಾಕಿ ಉಳಿದ ತುಟ್ಟಿ ಭತ್ಯೆಯ ಕಂತುಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಹಣಕಾಸು ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಈ ಸಂಬಂಧದ ಕಡತ ಮಂಗಳವಾರ ಸಂಜೆ ರವಾನೆಯಾಗಿದೆ. ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಕಂತುಗಳನ್ನು ಬಿಡುಗಡೆ ಮಾಡಲು ಸಿಎಂ ನಿರ್ಧರಿಸಿರುವುದು ಅವರ ನಿರ್ಗಮನದ ಮುನ್ಸೂಚನೆ ಎನ್ನಲಾಗುತ್ತಿದೆ.
ಕೆಲ ಕಾಲದ ಹಿಂದೆ ಸರಕಾರಿ ನೌಕರರ ತುಟ್ಟಿ ಭತ್ಯೆ ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಿದರೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದರು. ದೇಶದ ಹಲ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನದಲ್ಲೇ ಕಡಿತ ಮಾಡಲಾಗಿದೆ.ಆದರೆ ನಾವು ಕಡಿತ ಮಾಡಿಲ್ಲ ಎಂದು ಸಿಎಂ ಮಾರ್ಮಿಕ ಸಂದೇಶ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಆದರೆ, ಇಂದು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ತುಟ್ಟಿಭತ್ಯೆ ಸಂಬಂಧದ ಕಡತವನ್ನು ತರಿಸಿಕೊಂಡು ಅದಕ್ಕೆ ಸಹಿ ಹಾಕಿದರು. ಸರಕಾರಿ ನೌಕರರಿಗೆ ನೀಡಬೇಕಿರುವ ಬಾಕಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವಂತೆ ಷರಾ ಬರೆದರು.
ಈ ಮಧ್ಯೆ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಲ ಹಿರಿಯ ಸಚಿವರು ಮಂಗಳವಾರ ವಿಧಾನಸೌಧಕ್ಕೆ ಆಗಮಿಸಿ ಕೆಲ ಕಡತಗಳ ತುರ್ತು ವಿಲೇವಾರಿ ಕಾರ್ಯ ಕೈಗೊಂಡರು.