ಜುಲೈ 26ಕ್ಕೆ ರಾಜೀನಾಮೆ ನೀಡುವ ಸುಳಿವು ಕೊಟ್ಟ ಸಿಎಂ
ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಮೀನಾಮೇಷ ಎಣಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಪದತ್ಯಾಗದ ಸುಳಿವು ನೀಡಿದ್ದು ಏಕೆ?
ಗುರುವಾರ ಬೆಳಗ್ಗೆ ಈ ತಿಂಗಳ 26ಕ್ಕೆ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ ಎಂದು ಹೇಳಿದ ಸಿಎಂ ಅವರು, ಆ ದಿನವೇ ರಾಜಿನಾಮೆ ಕೊಡುವ ಸುಳಿವೂ ಕೊಟ್ಟರು. ಹಾಗಾದರೆ, ಇದಕ್ಕೆ ಕಾರಣವಾದ ಅಂಶಗಳು ಯಾವುವು?
ಕಾರಣ 1: ವರಿಷ್ಠರ ಜತೆ ಘರ್ಷಣೆ ಮಾಡಿಕೊಳ್ಳುವ ಉದ್ದೇಶ ಸ್ವತಃ ಮುಖ್ಯಮಂತ್ರಿ ಅವರಿಗಿಲ್ಲ. ಅದೇ ರೀತಿ ಯಡಿಯೂರಪ್ಪ ಅವರಿಗೆ ನೋವುಂಟು ಮಾಡುವುದು ಬಿಜೆಪಿ ಹೈಕಮಾಂಡ್‌ಗೂ ಇಲ್ಲ.
ಕಾರಣ 2: ವೀರಶೈವ ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಳ್ಳುವುದು ಪಕ್ಷಕ್ಕೆ ಇಷ್ಟವಿಲ್ಲ. ಅದೇ ರೀತಿ, ಸಮುದಾಯದ ಹಿತವನ್ನು ಕಾಪಾಡುವುದಾಗಿ ಹೈಕಮಾಂಡ್ ಭರವಸೆ.
ಕಾರಣ 3: ನಾಯಕತ್ವ ಬದಲಾವಣೆ ನಂತರ ವೀರಶೈವ ಲಿಂಗಾಯತ ಸಮುದಾಯದಿಂದ ಎದುರಾಗುವ ಒತ್ತಡವನ್ನು ನಿಭಾಯಿಸುವ ಜವಾಬ್ದಾರಿಯನ್ನು ಸ್ವತಃ ಯಡಿಯೂರಪ್ಪ ಅವರಿಗೇ ಹೈಕಮಾಂಡ್ ಒಪ್ಪಿಸಿದೆ.
ಕಾರಣ 4: ಯಡಿಯೂರಪ್ಪ ಅವರ ಗೌರವಕ್ಕೆ ಯಾವ ಚ್ಯುತಿಯೂ ಇಲ್ಲ. ಅವರ ಬಗ್ಗೆ ಪಕ್ಷ ಹೊಂದಿರುವ ಗೌರವದಲ್ಲಿ ಯಾವ ಬದಲಾವಣೆಯೂ ಇಲ್ಲ ಹಾಗೂ ರಾಘವೇಂದ್ರ, ವಿಜಯೇಂದ್ರ ರಾಜಕೀಯ ಭವಿಷ್ಯಕ್ಕೆ ವರಿಷ್ಠರಿಂದ ಸ್ಪಷ್ಟ ಅಭಯ.
ಕಾರಣ 5: ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಯಡಿಯೂರಪ್ಪ ಅವರ ಇಚ್ಛೆಗೆ ವರಿಷ್ಠರ ಒಪ್ಪಿಗೆ.
ಕಾರಣ 6: ಹೊಸ ನಾಯಕತ್ವದ ಬಗ್ಗೆ ಯಡಿಯೂರಪ್ಪ ಅವರಿಗೆ ವರಿಷ್ಠರ ಮನವರಿಕೆ, ಅದಕ್ಕೆ ಬಿಎಸ್‌ವೈ ಒಪ್ಪಿಗೆ. ಅವರು ಒಡ್ಡಿದ ಕೆಲ ಷರತ್ತುಗಳಿಗೆ ಹೈಕಮಾಂಡ್ ಸಮ್ಮತಿ.
ಕಾರಣ 7: ವರಿಷ್ಠರ ಆದೇಶ ಪಾಲಿಸೋಣ. ಯಾವ ಕಾರಣಕ್ಕೂ ದಿಲ್ಲಿ ನಾಯಕರ ಆದೇಶ ಧಿಕ್ಕರಿಸುವುದು ಬೇಡ. ಒಂದು ವೇಳೆ ಹಾಗೆ ಮಾಡಿದರೆ, ನಿಮ್ಮ ಜತೆ ಗುರುತಿಸಿಕೊಂಡಿರುವ ಎಲ್ಲ ನಾಯಕರು, ನಿಮ್ಮ ಮಕ್ಕಳು ರಾಜಕೀಯವಾಗಿ ಮೂಲೆಗುಂಪಾಗುತ್ತಾರೆ ಎಂದು ಆಪ್ತರು ನೀಡಿದ ಸಲಹೆಗೆ ಸಿಎಂ ಸಮ್ಮತಿ.
ಕಾರಣ 8: ಗೌರವಯುತ ನಿರ್ಗಮನದ ಅವಕಾಶ ಕೈಚೆಲ್ಲುವುದು ಬೇಡ. ನಿಮ್ಮ ಸಮಕ್ಷಮದಲ್ಲೇ ಹೊಸ ನಾಯಕನ ಹೆಸರು ಘೋಷಣೆ ಆಗುವಂತೆ ನೋಡಿಕೊಳ್ಳಿ ಎನ್ನುವ ಆಪ್ತರ ಸಲಹೆಯನ್ನು ಯಡಿಯೂರಪ್ಪ ಸ್ವೀಕರಿಸಿದ್ದಾರೆನ್ನಲಾಗಿದೆ.
ಇವಿಷ್ಟೂ ಯಡಿಯೂರಪ್ಪ ಪದತ್ಯಾಗದ ಸುಳಿವು ನೀಡಿದ್ದಕ್ಕೆ ಕಾರಣಗಳು ಎಂದು ಬಿಜೆಪಿಯ ವಿಶ್ವಸನೀಯ ಮೂಲಗಳು ತಿಳಿಸಿವೆ.
ಹಾಗಾದರೆ, ಗುರುವಾರ ಬೆಳಗ್ಗೆ ಸಿಎಂ ಅವರು ಹೇಳಿದ್ದೇನು? ಮುಂದೆ ಓದಿ…
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನನ್ನ ಮೇಲೆ ವಿಶೇಷ ಪ್ರೀತಿ, ಅಭಿಮಾನ, ಕಾಳಜಿ ಇಟ್ಟುಕೊಂಡಿದ್ದಾರೆ.
75 ವರ್ಷ ಮೀರಿದರೂ ಇಡೀ ದೇಶದಲ್ಲಿ ಯಾರಿಗೂ ಪಕ್ಷದಲ್ಲಿ ಅಧಿಕಾರ ನೀಡಿಲ್ಲ. ವರಿಷ್ಠರು ನನ್ನ ಬಗ್ಗೆ ವಿಶೇಷ ಅಭಿಮಾನ ತೋರಿಸಿ ನನಗೆ ಅಧಿಕಾರ ನೀಡಿದ್ದಾರೆ. ಜುಲೈ 26ಕ್ಕೆ ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷ ಮುಗಿಯುತ್ತದೆ. ಈಗ ರಾಷ್ಟ್ರ ನಾಯಕರು ನೀಡಿದ ಸೂಚನೆ ಪಾಲಿಸುತ್ತೇನೆ. ಆ ಸಮಯ ಬಂದಿದೆ.
ಜುಲೈ 25ರಂದು ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ೨೬ರಂದು ಪಾಲಿಸುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ.
ಬಿಜೆಪಿಯ ಕಾರ್ಯಕರ್ತರು, ಮುಖಂಡರು ಗೊಂದಲಕ್ಕೂ ಒಳಗಾಗಬಾರದು. ಎಲ್ಲರೂ ನನಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತೇನೆ.
ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ನನ್ನ ಹೃದಯ ತುಂಬಿ ಬಂದಿದೆ. ಯಾರಿಗೂ ಲಭಿಸದ ಬೆಂಬಲ, ಆಶೀರ್ವಾದ ನನಗೆ ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಗುರಿ. ಪಕ್ಷದ ಹೈಕಮಾಂಡ್ ನನಗೆ ಯಾವ ಸೂಚನೆ ನೀಡಿದರೂ ಪಾಲಿಸುತ್ತೇನೆ. ನನ್ನ ಪರವಾಗಿ ಯಾರೂ ಸಹ ಹೇಳಿಕೆ ನೀಡುವುದು ಬೇಡ. ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸಬಾರದು.
ಇಲ್ಲಿ ನನ್ನ ನಿರ್ಧಾರ ಎನ್ನುವುದೇನೂ ಇಲ್ಲ. ವರಿಷ್ಠರು ನೀಡುವ ಆದೇಶವನ್ನಷ್ಟೇ ಪಾಲಿಸುತ್ತೇನೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯೇ ನನ್ನ ಆದ್ಯತೆ.
26ಕ್ಕೆ ಹೊಸ ನಾಯಕನ ಎಂಟ್ರಿ
ಸ್ವತಃ ಮುಖ್ಯಮಂತ್ರಿಗಳ ಈ ಹೇಳಿಕೆಯೊಂದಿಗೆ ಬಿಜೆಪಿ ನಾಯಕತ್ವ ಬಿಕ್ಕಟ್ಟಿಗೆ ಕೊನೆಗೂ ತೆರೆ ಬೀಳುತ್ತಿದೆ. ಸೋಮವಾರ ಹೊಸ ನಾಯಕನ ಎಂಟ್ರಿ ಆಗುವ ಸಾಧ್ಯತೆ ನಿಶ್ಚಳವಾಗಿದೆ. ನಾಯಕತ್ವ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ಬಿಗಡಾಯಿಸಿ ವರಿಷ್ಠರೂ ಮಧ್ಯ ಪ್ರವೇಶ ಮಾಡಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದು ಮುಖಂಡರು ಮತ್ತು ಶಾಸಕರ ಅಭಿಪ್ರಾಯ ಆಲಿಸಿದ್ದರು. ಅದಾದ ಮೇಲೆ ಅವರು ವರಿಷ್ಠರಿಗೆ ವರದಿ ನೀಡಿದ್ದರು.
ಇದಾದ ಮೇಲೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಜುಲೈ 16ರಂದು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಬಳಿಕ ರಾಜ್ಯಕ್ಕೆ ಹಿಂತಿರುಗಿದ್ದ ಸಿಎಂ ಅವರು ತಮ್ಮ ಆಪ್ತರ ಜತೆ ವ್ಯಾಪಕ ಸಮಾಲೋಚನೆ ನಡೆಸಿದ್ದರು.
ಮಠಾಧೀಶರ ಭಾರೀ ಬೆಂಬಲ
ಬಿಜೆಪಿ ವರಿಷ್ಠರು ಯಡಿಯೂರಪ್ಪ ರಾಜೀನಾಮೆ ಪಡೆಯುತ್ತಾರೆಂಬ ಮಾಹಿತಿ ಸಿಕ್ಕಿದ ಕೂಡಲೇ ವೀರಶೈವ ಲಿಂಗಾಯತ ಸಮುದಾಯದ ನೂರಾರು ಮಠಗಳ ಸ್ವಾಮೀಜಿಗಳು ಬಹಿರಂಗವಾಗಿಯೇ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿದರು. ಸ್ವತಃ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೇ ಸಿಎಂ ನಿವಾಸಕ್ಕೆ ಬಂದು, ಯಡಿಯೂರಪ್ಪ ಮುಂದಿನ ಎರಡು ವರ್ಷದ ಅಧಿಕಾರಾವಧಿ ಪೂರೈಸಲು ಅವಕಾಶ ನೀಡಬೇಕು ಎಂದು ಹೇಳಿದ್ದರು. ಕಳೆದ ಮೂರು ದಿನಗಳಿಂದ ಅನೇಕ ಸ್ವಾಮೀಜಿಗಳು ಸಿಎಂ ನಿವಾಸಕ್ಕೆ ಬಂದು ಬೆಂಬಲ ನೀಡುತ್ತಲೇ ಇದ್ದಾರೆ. ವಿಶೇಷವೆಂದರೆ, ಕ್ರೈಸ್ತ ಸಮುದಾಯ ಕೆಲ ಮುಖಂಡರೂ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಿದ್ದಾರೆ.
ವಿರೋಧಿಗಳ ಬಣದಲ್ಲಿ ಹೈ ಜೋಶ್
ಯಡಿಯೂರಪ್ಪ ವಿರುದ್ಧ ಹೋರಾಟ ನಡೆಸಿದ್ದ ಸಚಿವ ಸಿ.ಪಿ.ಯೋಗೇಶ್ವರ, ಅರವಿಂದ ಬೆಲ್ಲದ, ಎಚ್.ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣದಲ್ಲಿ ಸಿಎಂ ಹೇಳಿಕೆ ಮಿಂಚಿನ ಸಂಚಾರ ಉಂಟು ಮಾಡಿದೆ. ಆದರೆ, ಎಲ್ಲರೂ ಮುಗುಮ್ಮಾಗಿದ್ದು, ಮಧ್ಯಾಹ್ನದ ವರೆಗೂ ಯಾರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೆಲ ನಾಯಕರು ದಿಲ್ಲಿಗೆ ತೆರಳಿದ್ದು, ಇನ್ನು ಕೆಲವರು ಬೆಂಗಳೂರಿನಲ್ಲೇ ಇದ್ದಾರೆ.