by GS Bharath Gudibande
ಗುಡಿಬಂಡೆ: ಇಲ್ಲಿನ ಠಾಣೆಗೆ ಕರ್ತವ್ಯಕ್ಕೆ ಹಾಜರಾದ ದಿನದಿಂದ ಬಾಕಿ ಉಳಿದಿದ್ದ ಅನೇಕ ಪ್ರಕರಣಗಳನ್ನು ಶೀಘ್ರವಾಗಿ ತನಿಖೆ ಮಾಡಿದ್ದೂ ಸೇರಿದಂತೆ ಪೊಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ರೂಪಿಸಿದ್ದೂ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳಿಂದಾಗಿ ಗುಡಿಬಂಡೆ ಸಿಪಿಐ ಲಿಂಗರಾಜು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಅವರು ಲಿಂಗರಾಜು ಅವರಿಗೆ ಅಭಿನಂದನಾ ಪತ್ರ ನೀಡಿ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡುವಂತೆ ಪ್ರೇರೇಪಣೆ ನೀಡಿದರು.
ಗುಡಿಬಂಡೆ ಪೊಲೀಸ್ ಠಾಣೆಯನ್ನು ನವೀಕರಿಸಿ ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಪಡೆಯಲು ಹಾಸನದ ವ್ಯವಸ್ಥೆ, ಕಡ್ಡದ ಸುತ್ತ ಹಚ್ಚಹಸಿರಿನ ಹುಲ್ಲಿನ ಹಾಸಿಗೆ ಹೀಗೆ ಇಡೀ ಪೊಲೀಸ್ ಠಾಣೆಯ ಚಿತ್ರಣವನ್ನು ಬದಲಿಸಿ ಜನಸ್ನೇಹಿ ಠಾಣೆಯಾಗಿ ನವೀಕರಿಸಿದಕ್ಕೆ ಎಸ್‌ಪಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಠಾಣೆಗೆ ಕರ್ತವ್ಯಕ್ಕೆ ಹಾಜರಾದ ದಿನದಿಂದ ಬಾಕಿ ಉಳಿದಿದ್ದ ಹಲವು ಘೋರ ಹಾಗೂ ಸಾಮಾನ್ಯ ಪ್ರಕರಣಗಳನ್ನು ಕ್ಷಿಪ್ರವಾಗಿ ತನಿಖೆ ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ಸಲ್ಲಿಸಿದ್ದರು. ಇವರ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಭಿನಂದನಾ ಪತ್ರ ನೀಡಿ ಸಿಪಿಐ ಲಿಂಗರಾಜು ಅವರನ್ನು ಗೌರವಿಸಿದ್ದಾರೆ.
ನಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ಅವರು ನನ್ನ ಕರ್ತವ್ಯ ನಿಷ್ಠೆಯನ್ನು ಗುರುತಿಸಿರುವುವುದಕ್ಕೆ ಸಂತಸ ಉಂಟಾಗಿದೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸಲಾಗುವುದು.
ಲಿಂಗರಾಜು ಗುಡಿಬಂಡೆ ಸಿಪಿಐ
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಜನಸ್ನೇಹಿಯಾಗಿ ರೂಪಾಂತರಗೊಂಡ ಗುಡಿಬಂಡೆ ಠಾಣೆಯ ಬಗ್ಗೆ ಸ್ವತಃ ಎಸ್‌ಪಿ ಮಿಥುನ್ ಕುಮಾರ್ ಅವರು ಟ್ವೀಟ್ ಮಾಡಿದ್ದರು ಕೂಡ.