3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಕೆ; ಗುರುಪೂರ್ಣಿಮೆ ನಿಮಿತ್ತ ಬೆಂಗಳೂರಿನ ಜೆ.ಪಿ.ನಗರದ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ
ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಶನಿವಾರ ಜೆ.ಪಿ.ನಗರದ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಬಾಬಾ ಅವರಿಗೆ ಮಾಡಲಾಗಿದ್ದ ಕೋವಿಡ್ ಪರಿಹಾರ ವಸ್ತುಗಳ ಅಲಂಕಾರ ಕಂಡು ಭಕ್ತರು ಪುಳಕಿತರಾದರಲ್ಲದೆ, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಕೊರೋನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವಿಶೇಷ ಅಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿಕ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮಮೋಹನ ರಾಜ್ ತಿಳಿಸಿದ್ದಾರೆ.
3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ʼನಲ್ಲಿ ಇರುವಂಥ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯ ಇರುವ ಜನರಿಗೆ ನೀಡಲಿದ್ದೇವೆ. ಸುಮಾರು ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ ಅವರು.
ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಸೇರಿ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಅಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ಇದು ವಿಭಿನ್ನ ಆಲೋಚನೆ ಎಂದು ಸಂಸದರು ಹೇಳಿದ್ದಾರೆ.
ದೇವಸ್ಥಾನಕ್ಕೆ ಆಗಮಿಸಿದ್ದ ಬಾಬಾ ದರ್ಶನ ಪಡೆದ ನಂತರ ಕವಿತಾ ಎಂಬ ಭಕ್ತೆ ಹೇಳಿದ್ದಿಷ್ಟು; “ಲಾಕ್ಡೌನ್ʼನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರವಾಗಿತ್ತು. ಲಾಕ್ಡೌನ್ ಸಡಲಿಕೆ ನಂತರ ಇಂತಹ ವಿಭಿನ್ನ ಆಲೋಚನೆಯ ಅಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು. ಬಾಬಾ ದರ್ಶನದಿಂದ ಪುನೀತನಾದೆ” ಎಂದು ಹೇಳಿದರು.
ಇನ್ನು, ದೇಗುಲಕ್ಕೆ ಬಹಳಷ್ಟು ಬರುತ್ತಿದ್ದು ಕೋವಿಡ್ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದೈಹಿಕ ಅಂತರ, ಮಾಸ್ಕ್ ಕಡ್ಡಾಯ ಸೇರಿದಂತೆ ಭಕ್ತಾದಿಗಳಿಗೆ ವಿಶೇಷ ಸುರಕ್ಷೆ ನೀಡಲು ಕೊರೋನಾ ಕಿಲ್ಲರ್ ಯಂತ್ರ ಅಳವಡಿಕೆ ಮಾಡಲಾಗಿದೆ ಎಂದು ರಾಮಮೋಹನ ರಾಜ್ ಹೇಳಿದ್ದಾರೆ.