ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನೆಮಕವಾಗುವ ಸಾಧ್ಯತೆ ಇದೆ.
ಸ್ವತಃ ಯಡಿಯೂರಪ್ಪ ಅವರ ಅತ್ಯಂತ ನಂಬಿಕಸ್ಥರೂ ಆಗಿರುವ ಬೊಮ್ಮಾಯಿ ಅವರ ಹೆಸರನ್ನು ವರಿಷ್ಠರು ಫೈನಲ್ ಮಾಡಿದ್ದು, ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ವೀಕ್ಷಕರು ಘೋಷಣೆ ಮಾಡುವ ನಿರೀಕ್ಷೆ ಇದೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ, ಕಳೆದ ಎರಡು ವರ್ಷಗಳಿಂದ ಗೃಹ ಸಚಿವರಾಗಿ ಕೆಲಸ ಮಾಡಿದ್ದರು. ಕೆಲ ದಿನಗಳ ಹಿಂದೆ ಸಂಪುಟ ವಿಸ್ತರಣೆ ಮಾಡಿದಾಗ ಖಾತೆಗಳ ಮರು ಹಂಚಿಕೆಯಾಗಿ ಕಾನೂನು ಮತ್ತು ಸಂದೀಯ ವ್ಯವಹಾರಗಳ ಖಾತೆಯನ್ನೂ ಬೊಮ್ಮಾಯಿ ಅವರಿಗೆ ವಹಿಸಲಾಗಿತ್ತು.
ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಸುಮಾರು ಒಂಭತ್ತು ಹೆಸರುಗಳು ಮುಖ್ಯಮಂತ್ರಿ ಗಾದಿಗೆ ಕೇಳಿ ಬಂದಿದ್ದವು. ಒಕ್ಕಲಿಗರ ಕೋಟಾದಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿಟಿ ರವಿ, ಆರ್.ಅಶೋಕ್ ಮತ್ತು ಬ್ರಾಹ್ಮಣರ ಲೆಕ್ಕದಲ್ಲಿ ಪ್ರಹ್ಲಾದ ಜೋಶಿ, ಬಿ.ಎಲ್. ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವೀರಶೈವ ಲಿಂಗಾಯತರ ಕೋಟಾದಲ್ಲಿ ಅರವಿಂದ್ ಬೆಲ್ಲದ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಹೆಸರುಗಳಿದ್ದವು. ಫೈನಲ್ಲಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ಖಚಿತ ಮೂಲಗಳಿಂದ ಗೊತ್ತಾಗಿದೆ.
ಬೆಳಗ್ಗೆಯೆಲ್ಲ ಮಾಧ್ಯಮಗಳ ಜತೆ ಸ್ವತಃ ಮಾತನಾಡಿದ್ದ ಬೊಮ್ಮಾಯಿ, “ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಆಗಬಹುದು” ಎಂದು ಮಾರ್ಮಿಕವಾಗಿ ನುಡಿದಿದ್ದರು. ರೇಸಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಮುಗುಮ್ಮಾಗಿ ನಕ್ಕಿದ್ದು ಬಿಟ್ಟರೆ ಬೇರೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ತಾವೂ ಆಕಾಂಕ್ಷಿ ಎಂದಾಗಲಿ ಅಥವಾ ವೀರಶೈವ ಲಿಂಗಾಯತ ಕೋಟಾದಲ್ಲಿ ನನ್ನನ್ನೂ ಸಿಎಂ ಮಾಡಿ ಎಂದು ಅವರು ಎಲ್ಲೂ ಕ್ಲೈಮ್ ಮಾಡಲಿಲ್ಲ. ಆದರೆ, ಅಂತಿಮವಾಗಿ ಅವರ ಹೆಸರೇ ಘೋಷಣೆ ಆಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಯಾರ ಹೆಸರೂ ಸೂಚಿಸುವುದಿಲ್ಲ ಎಂದು ಹೇಳುತ್ತಲೇ ಯಡಿಯೂರಪ್ಪ ಅವರು ವರಿಷ್ಠರನ್ನು ಒಪ್ಪಿಸಿ ಬೊಮ್ಮಾಯಿ ಹೆಸರನ್ನೇ ಫೈನಲ್ ಮಾಡಿಸಿದರಾ ಎಂಬ ಅಂಶವೂ ಜೋರಾಗಿ ಚರ್ಚೆ ಆಗುತ್ತಿದೆ.
ಬೊಮ್ಮಾಯಿ ಪರಿಚಯ
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಶಾಸಕರು. ಹುಟ್ಟಿದ್ದು 28 ಜನವರಿ 1960ರಂದು. ಮೂಲತಃ ಮೆಕಾನಿಕಲ್ ಎಂಜಿನಿಯರ್ ಆಗಿರುವ ಅವರು ಜನತಾದಳ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. 1998 ಮತ್ತು 2004ರಲ್ಲಿ ಎರಡು ಅವಧಿಗಳಿಗೆ ಅವರು ಸಂಯುಕ್ತ ಜನತಾದಳದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿಯೂ ಅವರು ಕೆಲಸ ಮಾಡಿದ್ದರು. 2008ರಲ್ಲಿ ಬಿಜೆಪಿ ಸೇರಿದ ಅವರು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಜೆಪಿ ಸರಕಾರದಲ್ಲಿ ಜಲ ಸಂಪನ್ಮೂಲ ಹಾಗೂ ಸಹಕಾರ ಖಾತೆಗಳನ್ನು ನಿಭಾಯಿಸಿದ್ದರು. ಈವೆರೆಗೆ ಗೃಹ ಸಚಿವರಾಗಿದ್ದ ಅವರು ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದರು.
ಏಳು ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಇಂದು ಸಂಜೆ ಏಳೂವರೆ ಗಂಟೆಗೆ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ವೀಕ್ಷಕರಗಿ ಬರುತ್ತಿರುವ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಅವರು ಶಾಸಕರ ಅಭಿಪ್ರಾಯ ಆಲಿಸಲಿದ್ದಾರೆ.
ಎಲ್ಲ ಶಾಸಕರಿಗೂ ಬೆಂಗಳೂರಿನಲೇ ಇರುವಂತೆ ಪಕ್ಷದಿಂದ ಸೂಚನೆ ಹೋಗಿದ್ದು, ಎಲ್ಲ ಶಾಸಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ಹೋಗಿದೆ. ಬಿಜೆಪಿಯ ಬಹುತೇಕ ಶಾಸಕರು ಈಗ ಬೆಂಗಳೂರಿನಲ್ಲೇ ಇದ್ದು, ಹೊರಗಿರುವ ಶಾಸಕರು ಸಂಜೆ ವೇಳೆಗೆ ರಾಜಧಾನಿ ಸೇರಿಕೊಳ್ಳಲಿದ್ದಾರೆ.