ಆಟವೆಂದರೆ ಪ್ರೀತಿ, ಮಿತಭಾಷಿ, ನೇರ-ನುಡಿಯ ಸರಳಜೀವಿ
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್.ಆರ್.ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. 61 ವರ್ಷದ ಜ್ಯೂನಿಯರ್ ಬೊಮ್ಮಾಯಿ ಅವರು ಈಗ ಕರ್ನಾಟಕದ ೩0ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಸೇರಿದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್.ಆರ್.ಬೊಮ್ಮಾಯಿ) -ಗಂಗಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ (ಇಬ್ಬರು ಗಂಡು, ಇಬ್ಬರು ಹೆಣ್ಣು) ಹಿರಿಯ ಪುತ್ರರೇ ಬಸವರಾಜ ಬೊಮ್ಮಾಯಿ. ಅವರ ಧರ್ಮಪತ್ನಿ ಹೆಸರು ಚೆನ್ನಮ್ಮ ಹಾಗೂ ಮಕ್ಕಳು ಭರತ, ಆದಿತಿ.
ಬೊಮ್ಮಾಯಿ ಅವರ ಆರಂಭಿಕ ವಿದ್ಯಾಭ್ಯಾಸವು ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪಿಯುಸಿ ಕೂಡ ಹುಬ್ಬಳ್ಳಿಯಲ್ಲೇ ಆಗಿ ಬಿ.ವಿ.ಬೊಮ್ಮರೆಡ್ಡಿ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಪೂರೈಸಿದರು. ತದ ನಂತರ 1983ರಿಂದ 1985 ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷ ತಾಂತ್ರಿಕ ತರಬೇತಿ ಪಡೆದು ಉದ್ಯಮಿಯೂ ಆದರು. ಹಾಗೆ ನೋಡಿದರೆ ಅವರದ್ದು ಮೂಲತಃ ಕೃಷಿ ಕುಟುಂಬ.
ಆರಂಭದಿಂದಲೂ ರಾಜಕೀಯ ಸೆಳೆತ
ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಾಲೇಜು ವಿದ್ಯಾಭ್ಯಾಸ ಕಾಲದಿಂದಲೇ ರೂಢಿಸಿಕೊಂಡಿದ್ದ ಬೊಮ್ಮಾಯಿ ಅವರು, ಪಠ್ಯೇತರ ಚಟುವಟಿಕೆ ಹಾಗೂ ಸಂಘಟನೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅವರ ತಂದೆಯವರು ರಾಜಕಾರಣದಲ್ಲಿದ್ದ ಕಾರಣಕ್ಕೆ ಸಹಜವಾಗಿಯೇ ಅವರಿಗೆ ಅದರ ಸೆಳೆತ ಇದ್ದೇ ಇತ್ತು.
ಬೊಮ್ಮಾಯಿ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಜನತಾದಳದಿಂದ. 1993ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಯುವ ಜನತಾದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ ವಹಿಸಿದ್ದರು. 1995ರಲ್ಲಿ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರು. ಅಲ್ಲಿಂದ ಗಾಢವಾಗುತ್ತಾ ಹೋದ ಅವರ ರಾಜಕೀಯ ಹೆಜ್ಜೆಗಳು, 1995ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗುವ ತನಕ ಮುಂದುವರಿದವು.
ಹೀಗಿರಬೇಕಾದರೆ, 1997 ಹಾಗೂ 2003ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 2007ರಲ್ಲಿ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 232 ಕಿ.ಮೀ ದೂರ 21 ದಿನಗಳ ಕಾಲ ರೈತರೊಂದಿಗೆ ಬೃಹತ್ ಪಾದಯಾತ್ರೆ ಮಾಡಿ ಜನಮನ್ನಣೆ ಗಳಿಸಿದರು. ನಂತರ 2008ರಲ್ಲಿ ಸಂಯುಕ್ತ ಜನತಾದಳ ತೊರೆದು ಬಿಜೆಪಿ ಸೇರ್ಪಡೆಯಾಗಿ 2008ರ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.
ಇದಾದ ಮೇಲೆ ವಿರೋಧಪಕ್ಷದ ಉಪ ನಾಯಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯ ನಿರ್ವಹಣೆ, ಹಿಂದಿನ ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಸತತ ಐದು ವರ್ಷ ಜಲ ಸಂಪನ್ಮೂಲ ಸಚಿವರಾಗಿ ಅವರು ದಕ್ಷತೆಯಿಂದ ಕೆಲಸ ಮಾಡಿದ್ದರು. ಯಡಿಯೂರಪ್ಪ ಅವರ ಕಳೆದೆರಡು ವರ್ಷದ ಸಂಪುಟದಲ್ಲಿ ಗೃಹ, ಸಂಸದೀಯ ವ್ಯವಹಾರ, ಕಾನೂನು ಖಾತೆಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದರು.
ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲಿ ಭಾರತದಲ್ಲೇ ಮೊದಲ ಶೇ.100ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ಕಾವೇರಿ, ಇತರೆ ನದಿಗಳ ಅನ್ಯ ರಾಜ್ಯಗಳ ಜತೆಗಿನ ತಕರಾರು, ವ್ಯಾಜ್ಯಗಳ ಬಗ್ಗೆ, ಹೋರಾಟಗಳ ಬಗ್ಗೆ, ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದವರು ಬೊಮ್ಮಾಯಿ.
ಜತೆಗೆ, ಅವರಿಗೆ ಕ್ರೀಡೆ ಎಂದರೂ ಬಹಳ ಒಲವು. ಈ ಹಿಂದೆ ಧಾರವಾಡದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಅವರಾಗಿದ್ದರು. ಕ್ರಿಕೆಟ್, ಗಾಲ್ಫ್ ಎಂದರೆ ಬೊಮ್ಮಾಯಿ ಅವರಿಗೆ ಬಹಳ ಆಸಕ್ತಿ. ಮಿತಭಾಷಿ, ನೇರ ನುಡಿಯ ಸರಳ ವ್ಯಕ್ತಿತ್ವದವರು ಅವರು. ಅಷ್ಟೇ ಅಲ್ಲ ಅಂತಃಕರಣವುಳ್ಳ ವ್ಯಕ್ತಿ. ಕೆಲ ದಿನಗಳ ಹಿಂದೆ ಅವರ ಸಾಕು ನಾಯಿ ತೀರಿಕೊಂಡಾಗ ಕಣ್ಣಿರಿಟ್ಟ ಸಹೃದಯಿ. ಪ್ರಾಣಿಗಳನ್ನು ಮಕ್ಕಳಂತೆ ಪ್ರೀತಿಸುವ ಮಮತಾಮಯಿ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಅಪ್ಪ-ಮಗ ಇಬ್ಬರೂ ಮುಖ್ಯಮಂತ್ರಿಗಳಾದ ಆದ ಎರಡನೇ ಜೋಡಿ ಎಂಬ ಹೆಗ್ಗಳಿಗೂ ಬಸವರಾಜ ಬೊಮ್ಮಾಯಿ ಪಾತ್ರರಾಗಿದ್ದಾರೆ.
ಯಡಿಯೂರಪ್ಪ ಅವರು ವರಿಷ್ಠರ ಮಾತಿನಂತೆ ರಾಜೀನಾಮೆ ನೀಡಿ ತಮ್ಮ ಅಪ್ತರಾದ ಬೊಮ್ಮಾಯಿ ಅವರಿಗೆ ಸಿಎಂ ಗಾದಿಗೆ ಸಿಗುವಂತೆ ಮತ್ತೂ ಮುಂದೆ ಆಡಳಿತ ನಡೆಸುವ ಸರಕಾರದ ಹಿಡಿತ ತಮ್ಮ ಕೈಯಲ್ಲೇ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಒಂದು ಅರ್ಥದಲ್ಲಿ ಇದರ ಪರಿಣಾಮಗಳಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಾಕ್ಷಿಯಾಗಲಿದ್ದಾರೆ. ಒಂದು ವೇಳೆ ತಮ್ಮ ರಾಜಕೀಯ ಗುರು ಯಡಿಯೂರಪ್ಪ ಅವರ ಹಸ್ತಕ್ಷೇಪವನ್ನು ಒಪ್ಪಿಕೊಂಡು ಅವರು ಆಡಳಿತ ನಡೆಸುವರೋ ಅಥವಾ ತಮ್ಮದೇ ಸ್ವಯಂ ಶಕ್ತಿಯ ಬಳಸಿ ಸುಸೂತ್ರವಾಗಿ ಸರಕಾರ ನಡೆಸುವರೋ ಕಾದು ನೋಡಬೇಕಿದೆ.
ಈಗಾಗಲೇ ರಾಜ್ಯದ ಜನರು ಕೋವಿಡ್ ಕಾರಣಕ್ಕೆ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲ ವರ್ಷಗಳ ರಾಜಕೀಯ ಅಸ್ಥಿರತೆ, ಸ್ಥಿತ್ಯಂತರದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಮಳೆ ಪ್ರವಾಹದಿಂದ ಜನ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪರಿಹಾರ ನೀಡುವ ಕಾರ್ಯ, ಮೇಕೆದಾಟು ಯೋಜನೆ ಆರಂಭ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಬೆಳಗಾವಿಯಲ್ಲಿ ಗಡಿ ತಕರಾರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹಳಿಗೆ ತರುವುದು, ಪಕ್ಷದ ಅಂತರಿಕ ಕಚ್ಚಾಟ, ಭಿನ್ನಮತೀಯ ಚಟುವಟಿಕೆ ತಡೆದು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ ಆಡಳಿತ ನಡೆಸುವ ಮತ್ತು ವಿರೋಧ ಪಕ್ಷಗಳ ಸವಾಲುಗಳನ್ನು ಸದನದಲ್ಲಿ ಸಮರ್ಥವಾಗಿ ಎದುರಿಸಬೇಕಾದ ಅನೇಕ ಸವಾಲುಗಳು ಬೊಮ್ಮಾಯಿ ಅವರ ಮುಂದಿವೆ.
ಇಂತಹ ಕಾಲಘಟ್ಟದಲ್ಲಿ ಹಲವು ವರ್ಷದ ನಂತರ ಉತ್ತರ ಕರ್ನಾಟಕದವರಾದ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪಾರದರ್ಶಕ ಜನಪರ ಆಡಳಿತ ನೀಡಲಿ, ಯಾರಿಗೂ ರಬ್ಬರ್ ಸ್ಟ್ಯಾಂಪ್ ಆಗದೇ ಅತ್ಯುತ್ತಮ ಆಡಳಿತ ನೀಡಲಿ ಎಂಬುದೇ ಎಲ್ಲರ ಆಶಯ.
ಡಾ.ಗುರುಪ್ರಸಾದ ಹವಲ್ದಾರ್