ನವದೆಹಲಿ: ಕೇರಳದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗಿ ಅಲ್ಲಿ ವೀಕೆಂಡ್ ಲಾಕ್‌ಡೌನ್ ಘೋಷಿಸಿರುವ ನಡುವೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಣು ದೆಹಲಿಗೆ ಬರುವ ಮುನ್ನವೇ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಗಡಿಭಾಗದಲ್ಲಿ ಕೊರೋನ ಪರೀಕ್ಷೆ ಹೆಚ್ಚಳ ಮಾಡುವುದು, ಜನರ ಓಡಾಟದ ಮೇಲೆ ನಿಗಾ ಇಟ್ಟು ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಕೊರೋನಾ ಪರೀಕ್ಷೆಯನ್ನು ವ್ಯಾಪಕ ಮಾಡಬೇಕು ಹಾಗೂ ಲಸಿಕೆಯನ್ನು ತ್ವರಿತವಾಗಿ ಕೊಡಬೇಕು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಕೋವಿಡ್ ವಿಷಯದಲ್ಲೇ ಏನೇ ಆದರೂ ಈ ಇಬ್ಬರು ಅಧಿಕಾರಿಗಳೇ ಹೊಣೆಗಾರರು. ಅಲ್ಲದೆ, ಮುಖ್ಯ ಕಾರ್ಯದರ್ಶಿ ಅವರೊಂದಿಗೂ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸಿಎಂ ಹೇಳಿದರು.
ನಾಳೆ ವಿಡಿಯೊ ಸಂವಾದ
ದೆಹಲಿಯಿಂದ ನಾನು ಬೆಂಗಳೂರಿಗೆ ವಾಪಸ್ ಹೋದ ಕೂಡಲೇ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಒಷ್ಠಾಧಿಕಾರಿ, ಆರೋಗ್ಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸುತ್ತೇನೆ. ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡುತ್ತೇನೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು.
ಮುಖ್ಯವಾಗಿ ಕೇರಳದ ಜತೆ ನೇರ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಈ ಜಿಲ್ಲೆಗಳಿಗೆ ಸಂಬಂಧಿಸಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು, ಕೋವಿಡ್ ಪರೀಕ್ಷೆ ವ್ಯಾಪಕಗೊಳಿಸುವುದು ಹಾಗೂ ಲಸಿಕೆಯನ್ನು ಕೋಡುವುದನ್ನು ತೀವ್ರಗೊಳಿಸಲಾಗುವುದು ಎಂದು ಸಿಎಂ ತಿಳಿಸಿದರು.