ಕೇಂದ್ರ ಸರಕಾರದ ಮುಂದೆ ಮಾಜಿ ಸಚಿವ ಡಾ.ಕೆ.ಸುಧಾಕರ್ ನಂತರ ಅದೇ ರೀತಿಯ ಹೊಣೆಗೇಡಿತನದ ಬೇಡಿಕೆ ಮಂಡಿಸಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ
ಹಳ್ಳ ಹಿಡಿಯಲಿದೆಯಾ ಮಳೆ ನೀರಿಗೇ ನೇರವಾಗಿ ಪಂಪ್ ಹಾಕಿರುವ ಜಗತ್ತಿನ ಮೊತ್ತ ಮೊದಲ, ಏಕೈಕ ಯೋಜನೆ?
#CkNewsNowExclusive
ಬೆಂಗಳೂರು: ಗುತ್ತಿಗೆದಾರರ ಪಾಲಿಗೆ ಹಣದ ‘ಅಕ್ಷಯಪಾತ್ರೆ’ ಆಗಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆʼಎಂದು ಘೋಷಿಸಬೇಕೆಂಬ ‘ಹೊಣೆಗೇಡಿತನದʼ ಬೇಡಿಕೆಯನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರಕಾರದ ಮುಂದೆ ಇಟ್ಟಿದ್ದಾರೆ.
ಮೂರು ವಾರಗಳ ಹಿಂದೆ, ಅಂದರೆ ಜುಲೈ 6ರಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರಿಗೆ ಇದೇ ಬೇಡಿಕೆ ಇಟ್ಟು ಮನವಿ ಸಲ್ಲಿಸಿ ಬಂದಿದ್ದ ಅಂದಿನ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ನಡೆ ಚಿಕ್ಕಬಳ್ಳಾಪುರ-ಕೋಲಾರ ಭಾಗದಲ್ಲಿ ನಗೆಪಾಟಲಿಗೀಡಾಗಿತ್ತು. ಅವರು ಅಂದು ಬೇರೆ ಬೇರೆ ಕಾರಣಗಳಿಗೆ ದಿಲ್ಲಿಯಾತ್ರೆ ಕೈಗೊಂಡಿದ್ದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜನರ ಕುಡಿಯುವ ನೀರಿನ ದಾಹ ತೀರಿತ್ತೇವೆ ಎಂದು ನಂಬಿಸಿ ಕೇಂದ್ರದಿಂದ ಪಡೆದುಕೊಳ್ಳಬೇಕಾಗಿದ್ದ ಪರಿಸರ ಪರಿಣಾಮಗಳ ಅಧ್ಯಯನ (EIA) ಮತ್ತು ಪರಿಸರ ಅನುಮತಿ (EC) ಯಿಂದ ವಿನಾಯಿತಿ ಪಡೆದು, ಹತ್ತು ವರ್ಷಗಳಿಂದ ತೆವಳುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆ ಅನೇಕ ಅನುಮಾಗಳಿಗೆ ಕಾರಣವಾಗಿರುವ ಬೆನ್ನಲ್ಲೇ. ಸ್ವತಃ ನೀರಾವರಿ ವಿಷಯಗಳಲ್ಲಿ ಆಳವಾಗಿ ಅರಿತವರೂ ಹಾಗೂ ಐದು ವರ್ಷ ಜಲಸಂಪನ್ಮೂಲ ಸಚಿವರೂ ಆಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆʼಎಂದು ಘೋಷಣೆ ಮಾಡುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡಿರುವುದು ಹೊಸದಾಗಿ ಇನ್ನಷ್ಟು ಗಂಭೀರ ಸಂಶಯಗಳಿಗೆ ಕಾರಣವಾಗಿದೆ.
ಕೇಂದ್ರ ಸರಕಾರವೇ ರೂಪಿಸಿರುವ ನಿಯಮಾವಳಿಗಳ ಅನ್ವಯ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು ಅನುಮಾನ. ಕಾರಣ; ಆ ಅರ್ಹತೆ ಯೋಜನೆಗೆ ಸಿಗದಂತೆ ಮಾಡುವಲ್ಲಿ 2012ರಿಂದ ಈವರೆಗೆ ರಾಜ್ಯವನ್ನು ಆಳಿದ ಎಲ್ಲ ಸರಕಾರಗಳೂ ಕಾರಣವಾಗಿವೆ. ಈಗ ನೋಡಿದರೆ ರಾಷ್ಟ್ರೀಯ ಯೋಜನೆಯ ಬೇಡಿಕೆ ಮುಂದೆ ಬಂದು ಇನ್ನಷ್ಟು ಹಣವನ್ನು ಕೊಳ್ಳೆ ಹೊಡೆಯಲು ಗುತ್ತಿಗೆದಾರರಿಗೆ ರಹದಾರಿ ಮಾಡಿಕೊಡುವ ಷಡ್ಯಂತ್ರಕ್ಕೆ ಸ್ವತಃ ನೀರಾವರಿ ಪರಿಣಿತಿ ಹೊಂದರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ರೂವಾರಿಗಳೂ ಆಗಿರುವ ಬೊಮ್ಮಾಯಿ ಅವರು ಅವಕಾಶ ಮಾಡಿಕೊಟ್ಟು ಬಿಡುತ್ತಾರಾ ಎಂಬ ಆತಂಕ ಬರಪೀಡಿತ ಜಿಲ್ಲೆಗಳ ಜನರನ್ನು ಕಾಡುತ್ತಿದೆ.
ಎತ್ತಿನಹೊಳೆಗೆ ರಾಷ್ಟ್ರೀಯ ಯೋಜನೆ ಸ್ಥಾನ ಸಂಶಯ! ಏಕೆ?
ಕುಡಿಯುವ ನೀರಿನ ಉದ್ದೇಶವಿರುವ ಯಾವುದೇ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕಾದರೆ, ಅಂತಹ ಯೋಜನೆಗಳಿಗೆ ಕಡ್ಡಾಯವಾಗಿ ಕೇಂದ್ರಿಯ ಜಲ ಆಯೋಗ (CWC) ಅಧ್ಯಯನ ನಡೆಸಿ ಅನುಮತಿ ನೀಡಲೇಬೇಕು. ಆದರೆ ಎತ್ತಿನಹೊಳೆ ಯೋಜನೆಗೆ ಕೇಂದ್ರಿಯ ಜಲ ಆಯೋಗ ಅನುಮತಿ ನೀಡುವುದಿರಲಿ, ಇದೊಂದು ʼಅವೈಜ್ಞಾನಿಕ ಯೋಜನೆʼಎಂದು ಹೇಳಿ ೨೦೧೨ರಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆದು ಎಚ್ಚರಿಸಿತ್ತು.
ಆದರೆ, ರಾಜ್ಯ ಸರಕಾರಗಳೆಲ್ಲವೂ ಖಾಸಗಿ ಏಜೆನ್ಸಿಗಳಿಂದ ತನಗೆ ಬೇಕಾದ ಹಾಗೆ ಅಧ್ಯಯನ ವರದಿ ಪಡೆದುಕೊಂಡಿದ್ದು ಮಾತ್ರವಲ್ಲದೆ, ಸಮಗ್ರ ಯೋಜನಾ ವರದಿ ತಯಾರಿಸುವ ಕೆಲಸವನ್ನು ನುರಿತ, ಆಪಾರ ತಾಂತ್ರಿಕ ನೈಪುಣ್ಯ ಇರುವ ಸರಕಾರಿ ಸಂಸ್ಥೆ ಅಥವಾ ಏಜೆನ್ಸಿಗಳಿಗೆ ನೀಡದೇ ಖಾಸಗಿ ಏಜೆನ್ಸಿಗಳ ಮೂಲಕವೇ ತಯಾರು ಮಾಡಿಸಿಕೊಂಡಿವೆ. ಹೀಗಾಗಿ, ಈಗಾಗಲೇ ಸಾವಿರಾರು ಕೋಟಿ ರೂ. ನುಂಗಿರುವ ಈ ಯೋಜನೆಯು ‘ರಾಷ್ಟ್ರೀಯ ಯೋಜನೆʼಆಗುವ ಪ್ರಾಥಮಿಕ ಅರ್ಹತೆಯನ್ನೂ ಹೊಂದಿಲ್ಲ ಎಂಬ ಸತ್ಯವನ್ನು ದಾಖಲೆಗಳೇ ಹೇಳುತ್ತವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತೊಮ್ಮೆ ಯೋಚಿಸಬೇಕಾಗಿದೆ ಹಾಗೂ ಯೋಜನೆಯ ಆತ್ಮವಾದ ಜಲವಿಜ್ಞಾನವನ್ನು ಮರು ಪರಿಶೀಲನೆಗೆ ಆದೇಶ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ ಬಯಲುಸೀಮೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ.
ಕೇಂದ್ರಿಯ ಜಲ ಆಯೋಗ (CWC) ಏನು ಹೇಳಿತ್ತು?
ದಿನಾಂಕ 9-5-2012ರಂದು ರಾಜ್ಯ ಸರಕಾರಕ್ಕೆ ಎತ್ತಿನಹೊಳೆ ಯೋಜನೆ ಸಂಬಂಧ ಕೇಂದ್ರಿಯ ಜಲ ಆಯೋಗ ಮಹತ್ತ್ವದ ಪತ್ರ ಬರೆದಿತ್ತು. “ಯೋಜನೆಯಲ್ಲಿ ಅನೇಕ ಲೋಪದೋಷಗಳಿದ್ದು, ಪ್ರತಿಕೂಲಕರ ಫಲಿತಾಂಶ ಕಟ್ಟಿಟ್ಟ ಬುತ್ತಿ. ಕನಿಷ್ಠ ಒಂದು ಮಳೆ ವರ್ಷದಲ್ಲಾದರೂ ಯೋಜನಾ ಪ್ರದೇಶದ ಮಳೆಯ ಪ್ರಮಾಣದ ಅಧ್ಯಯನ, ಮಳೆ ನೀರಿನ ಇಳುವರಿ, ಸಂಗ್ರಹಗಾರಗಳ ಸಾಮರ್ಥ್ಯ, ಪಶ್ಚಿಮ ಇಳಿಜಾರಿನಿಂದ ಪೂರ್ವಕ್ಕೆ ಸಾಗಿಸಬಹುದಾದ ನೀರಿನ ಪ್ರಮಾಣದ ನಿಖರ ಅಧ್ಯಯನ ಮಾಡದೇ ಯೋಜನೆಯನ್ನು ಜಾರಿಗೆ ತರುವುದು ಸೂಕ್ತವಲ್ಲ. ಯೋಜನೆ ಹಾಗೂ ಯೋಜನೆಯ ಸಮಗ್ರ ಜಲವಿಜ್ಞಾನ (Hydrology)ದ ಮರು ಅಧ್ಯಯನ ಮಾಡಲೇಬೇಕು ಎಂಬ ಅಂಶಗಳನ್ನು ಆ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿತ್ತು.
ಕೇಂದ್ರಿಯ ಜಲ ಆಯೋಗದ ವರದಿ
ಕೇಂದ್ರಿಯ ಜಲ ಆಯೋಗದ ವರದಿ
ಅಲ್ಲದೆ, ರಾಜ್ಯ ಸರಕಾರ ಒಪ್ಪಿದರೆ ತಾನೇ ಇಡೀ ಯೋಜನೆಯ ಜಲವಿಜ್ಞಾನವನ್ನು ಅಧ್ಯಯನ ಮಾಡಿ ಎತ್ತಿನಹೊಳೆಯ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿಕೊಡುವುದಾಗಿ ಕೇಂದ್ರಿಯ ಜಲ ಆಯೋಗ ಮುಕ್ತ ಮನಸ್ಸಿನಿಂದ ಮುಂದೆ ಬಂದಿತ್ತು. ಆದರೆ, ರಾಜ್ಯ ಸರಕಾರ ಆಯೋಗದ ಸಲಹೆ ಮತ್ತು ಶಿಫಾರಸುಗಳನ್ನು ಸಂಪೂರ್ಣವಾಗಿ ಉಪೇಕ್ಷಿಸಿ ಖಾಸಗಿ ಗುತ್ತಿಗೆದಾರರ ಮರ್ಜಿಗೆ ಒಳಗಾಯಿತು. ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ನೂತನ ಮುಖ್ಯಮಂತ್ರಿಗಳು ಕಂಡುಕೊಂಡು ಈ ಯೋಜನೆ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಕ್ರಮ ವಹಿಸಬೇಕಿದೆ.
ಏಕೆಂದರೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಸ್ವರೂಪ ರೂಪಗೊಂಡು ಅದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದಾಗ ಬೊಮ್ಮಾಯಿ ಅವರು ಮೂಲತಃ ದಕ್ಷಿಣ ಕನ್ನಡದವರೇ ಆದ ಡಿ.ವಿ.ಸದಾನಂದ ಗೌಡರ ಕ್ಯಾಬಿನಟ್‌ನಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದರು. ಅವರು ಅಧಿಕಾರದಿಂದ ನಿರ್ಗಮಿಸಿದ ನಂತರ ಈ ಯೋಜನೆಯಲ್ಲಿ ಆಗಿರುವ ಎಲ್ಲ ವಿರೂಪ ಮತ್ತು ಅವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಬರಪೀಡಿತ ಜಿಲ್ಲೆಗಳ ನೀರಾವರಿ ಹೋರಾಟಗಾರರ ಒಕ್ಕೊರಲ ಒತ್ತಾಯವಾಗಿದೆ.
ಕೇಂದ್ರಿಯ ಜಲ ಆಯೋಗ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರದಿಂದ ಇನ್ನಷ್ಟು ಅಡೆತಡೆಗಳು ಎದುರಾದವು. ಮುಜುಗರಗೊಂಡ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ನೀರಾವರಿ ಹೋರಾಟಗಾರರ ಒತ್ತಡಕ್ಕೆ ಮಣಿದು, ಕೇಂದ್ರಿಯ ಜಲ ಆಯೋಗದ ಪತ್ರವನ್ನೇ ಉದ್ದೇಶಪೂರ್ವಕವಾಗಿ ಉಪೇಕ್ಷಿಸಿ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (NIH)ಯಿಂದ ವರದಿ ಕೇಳುವ ನಾಟಕವಾಡಿತು. ಮೋಸವೆಂದರೆ; ರೂರ್ಕಿಯಲ್ಲಿರುವ ಆ ಸಂಸ್ಥೆಯ ಕೇಂದ್ರ ಕಚೇರಿಯಿಂದ ವರದಿ ಪಡೆಯದೇ ಬೆಳಗಾವಿಯಲ್ಲಿದ್ದ ಅದೇ ಸಂಸ್ಥೆಯ ಶಾಖಾ ಕಚೇರಿಯಿಂದ ತನ್ನ ‘ಪ್ರಭಾವʼ ಬಳಸಿ ವರದಿ ಪಡೆಯುವ ದುಸ್ಸಾಹಸ ಮಾಡುವಲ್ಲಿ ಯಶಸ್ವಿಯಾಯಿತು.
ಆದರೂ, ಬೆಳಗಾವಿಯಲ್ಲಿರುವ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯು ರಾಜ್ಯ ಸರಕಾರ ಮತ್ತು ಗುತ್ತಿಗೆದಾರರಿಗೆ ಪೂರಕವಾಗಿ ವರದಿ ನೀಡಲಿಲ್ಲ. ಅದು ಕೂಡ ಕೆಲ ಆಕ್ಷೇಪಗಳನ್ನು ಎತ್ತಿತು. ದಿನಾಂಕ 12-3-2014ರಂದು ರಾಜ್ಯ ಸರಕಾರ ಬರೆದಿದ್ದ ಪತ್ರಕ್ಕೆ ದಿನಾಂಕ 2-4-2014ರಂದು, ಅಂದರೆ ಕೇವಲ ಇಪ್ಪತ್ತೇ ದಿನಗಳಲ್ಲಿ ತರಾತುರಿಯ ಉತ್ತರ ಬರೆದ ಆ ಶಾಖಾ ಸಂಸ್ಥೆ, ಎತ್ತಿನಹೊಳೆ ಯೋಜನೆಯನ್ನು ಮರು ಪರಿಶೀಲನೆ ಮಾಡುವಂತೆ ಸಲಹೆ ಮಾಡಿತ್ತು. ಅಲ್ಲದೆ, ಯೋಜನೆಯಲ್ಲಿ ಲಭ್ಯವಾಗಬಹುದಾದ ನೀರಿನಲ್ಲಿ ಕೇವಲ ಅರ್ಧಕ್ಕಿಂತ ಕಡಿಮೆ ಪ್ರಮಾಣದ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಬಹುದು ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ, ರೂರ್ಕಿಯಲ್ಲಿರುವ ಜಲವಿಜ್ಞಾನ ಸಂಸ್ಥೆಯ ಕೇಂದ್ರಿಯ ಕಚೇರಿಯಿಂದ ವರದಿ ಪಡೆಯಲು ರಾಜ್ಯ ಸರಕಾರ ಹಿಂದೇಟು ಹಾಕಿದ್ದೇಕೆ ಎಂಬುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದುರಂತವೆಂದರೆ, ಬೆಳಗಾವಿ ಶಾಖಾ ಸಂಸ್ಥೆಯು ಕೇಂದ್ರಿಯ ಜಲ ಆಯೋಗದ ಶಿಫಾರಸ್ಸಿನಂತೆ ಮಳೆ ವರ್ಷದ ಅಧ್ಯಯನ ನಡೆಸದೇ ಇಪ್ಪತ್ತು ದಿನಗಳಲ್ಲಿ ಅರೆಬರೆ ವರದಿ ಕೊಟ್ಟು ಕೈತೊಳೆದುಕೊಂಡಿತು.
ಈ ವರದಿಯನ್ನೇ ಮಹಾಪ್ರಸಾದ ಎಂದು ಸ್ವೀಕರಿಸಿದ ಸಿದ್ದರಾಮಯ್ಯ ಸರಕಾರ, ತಕ್ಷಣವೇ ಜಾಗತಿಕ ಟೆಂಡರ್ 13,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ಕುಡಿಯುವ ನೀರಿನ ಯೋಜನೆ ಆಂದ್ರ ಪ್ರದೇಶದ ಗುತ್ತಿಗೆದಾರರಿಗೆ ಧಾರೆಯೆರೆದುಕೊಟ್ಟಿತು. ಅದಕ್ಕೆ ಕಾರಣ, 2014ರ ಲೋಕಸಭೆ ಚುನಾವಣೆ ಘೋಷಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಇತ್ತು. ಆಮೇಲೆ ಯೋಜನೆಯಲ್ಲಿ ಹರಿದದ್ದೆಲ್ಲ ಹಣದ ಹೊಳೆಯೇ.
ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ವರದಿ
ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ವರದಿ
ಮೇಲೆ ತಿಳಿಸಿದ ಎರಡೂ ಕಾರಣಗಳಿಂದ ರಾಷ್ಟ್ರೀಯ ಯೋಜನೆಯಾಗಿ ರೂಪುಗೊಳ್ಳಬಹುದಾದ ಅರ್ಹತೆಯನ್ನೂ ಎತ್ತಿನಹೊಳೆ ಕಳೆದುಕೊಂಡಿದೆ. ಮಾತ್ರವಲ್ಲ, ಒಂದು ವೇಳೆ ಆ ಸ್ಥಾನಮಾನ ಸಿಗಬೇಕು ಎಂದಾದರೆ, ಕೇಂದ್ರಿಯ ಜಲ ಆಯೋಗ (CWC)ದಿಂದ ಅನುಮತಿ ಪಡೆಯುವುದು ಕಡ್ಡಾಯ. ಮಾತ್ರವಲ್ಲದೆ, ಕುಡಿಯುವ ನೀರಿನ ಯೋಜನೆಗಳ ಕುರಿತಾದ ರಾಷ್ಟ್ರದ ಸರ್ವೋಚ್ಛ ಸ್ಥಾನದಲ್ಲಿರುವ ಈ ಸಂಸ್ಥೆಯೇ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕು. ಈಗಾಗಲೇ 9003.86 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನುಂಗಿರುವ ಈ ಯೋಜನೆ ವಿಷಯದಲ್ಲಿ ಅದು ಸಾಧ್ಯವೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಆದರೆ, ರಾಷ್ಟ್ರೀಯ ಸ್ಥಾನಮಾನ ಬೇಕು ಎಂದಾದರೆ ಕೇಂದ್ರಿಯ ಜಲ ಆಯೋಗದ ಮೊರೆ ಹೋಗದೇ ಬೇರೆ ದಾರಿ ಇಲ್ಲ.
ಒಂದು ವೇಳೆ ಸರಕಾರ ಈ ಕೆಲಸ ಮಾಡುತ್ತದೆ ಎಂದು ಭಾವಿಸುವುದಾದರೆ, ಮುಖ್ಯವಾಗಿ ಇಡೀ ಯೋಜನೆಯ ಹೃದಯಭಾಗ ಎನ್ನುಬಹುದಾದ ‘ಜಲವಿಜ್ಞಾನʼ(Hydrology)ದ ಬಗ್ಗೆ ಕಡ್ಡಾಯವಾಗಿ ಮರು ಅಧ್ಯಯನ ಮಾಡಲೇಬೇಕಾಗುತ್ತದೆ. ನೀರಿನ ಲಭ್ಯತೆ, ಬಳಸಲಾಗುವ ಜಲವಿಜ್ಞಾನ, ಚಿಕ್ಕಬಳ್ಳಾಪುರ-ಕೋಲಾರ, ಆಮೇಲೆ ರಾಜಕೀಯ ಕಾರಣಗಳಿಂದ ಸೇರಿಕೊಂಡ ಇತರೆ ಜಿಲ್ಲೆಗಳಿಗೆ ಹರಿಸಲಾಗುವ ನೀರಿನ ಕುರಿತ ತಂತ್ರಜ್ಞಾನ ಮುಂತಾದವುಗಳ ಬಗ್ಗೆ ‘ಪೂರ್ವ ಯೋಜಿತʼವಾಗಿ ಹೂಡಲಾದ ಷಡ್ಯಂತ್ರಗಳು, ರಾಜಕಾರಣಿಗಳು-ಗುತ್ತಿಗೆದಾರರು ಹಾಗೂ ಅಧಿಕಾರಿಗಳ ‘ಅಪವಿತ್ರ ಮೈತ್ರಿʼ ಬೆತ್ತಲಾಗಲಿದೆ. ಅಷ್ಟು ಮಾತ್ರವಲ್ಲದೆ, ಎತ್ತಿಹೊಳೆಯನ್ನು ರಾಷ್ಟ್ರೀಯ ಯೋಜನೆ ಮಾಡಬೇಕೆಂದು ಹೇಳುತ್ತಾ ಜನರ ಮೂತಿಗೆ ತುಪ್ಪ ಸವರುತ್ತಿರುವ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ‘ಕೆಲʼ ರಾಜಕಾರಣಿಗಳ ಮುಖವಾಡವೂ ಕಳಚಿಬೀಳಲಿದೆ.
ಜಾಗತಿಕ ಟೆಂಡರ್ ಕರೆಯಲೇ ಇಲ್ಲ!?
2012 ಜುಲೈ 11ರಂದು ಮುಖ್ಯಮಂತ್ರಿ ಕುರ್ಚಿಯಿಂದ ಡಿ.ವಿ.ಸದಾನಂದ ಗೌಡರು ನಿರ್ಗಮಿಸುವುದಕ್ಕೆ ಮುನ್ನವೇ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಎಂ.ಬಿ.ಪಾಟೀಲ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆಗೆ ಜಾಗತಿಕ ಟೆಂಡರ್ ಕರೆಯದೇ ಟರ್ನ್ ಕೀ (ತುರ್ತು ಸಂದರ್ಭ) ಆಧಾರದ ನೆಪವೊಡ್ಡಿ ನೆರೆಯ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ ಇಡೀ ಯೋಜನೆಯನ್ನು ಸಮರ್ಪಣೆ ಮಾಡಲಾಯಿತು. ಮೂರು ವರ್ಷಗಳಲ್ಲಿ, ಅಂದರೆ; 2017ರೊಳಗೆ ಯೋಜನೆಯನ್ನು ಮುಗಿಸಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಯೋಜನೆ ಕಾಮಗಾರಿ ಆರಂಭವಾಗಿ ಬರೋಬ್ಬರಿ ಏಳು ವರ್ಷಗಳೇ (ಯೋಜನೆ ಕಲ್ಪನೆ ಮೂಡಿ ಹತ್ತು ವರ್ಷವಾಗಿದೆ) ಮೀರಿವೆಯಾದರೂ ಈವರೆಗೆ ಒಂದು ತೊಟ್ಟು ಹನಿ ನೀರನ್ನೂ ಪೂರ್ವಕ್ಕೆ ತಿರುಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ವಿಶ್ವೇಶ್ವರಯ್ಯ ಜಲನಿಗಮ (VJNL)ದ ಸಾರಥ್ಯದಲ್ಲಿ ಯೋಜನೆ ತೆವಳುತ್ತಿದೆಯಲ್ಲದೆ, ಈ ತೆವಳುವಿಕೆಗೆ ದಶಮಾನೋತ್ಸವವೂ ಇನ್ನೇನು ಹತ್ತಿರದಲ್ಲೇ ಇದೆ.
ಈವರೆಗೆ 9003.86 ಕೋಟಿ ರೂ. ವೆಚ್ಚ!!
ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾಲಿಗೆ ʼಹಣದ ಅಕ್ಷಯಪಾತ್ರೆʼ ಆಗಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಕೇವಲ ಆಂಧ್ರದಿಂದ ಬಂದ ಗುತ್ತಿಗೆದಾರರ ಉದ್ಧಾರಕ್ಕೆ ರೂಪಿಸಿದ ಯೋಜನೆಯಂತಾಗಿದೆಯಲ್ಲದೆ, ಈವರೆಗೂ 9003.86 ಕೋಟಿ ರೂ. ವೆಚ್ಚವಾಗಿದೆ. ಈ ವಿಷಯವನ್ನು ಕಳೆದ ಜುಲೈ 1ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅಧಿಕೃತ ಸಭೆಯೊಂದರಲ್ಲಿ ಹೇಳಿದ್ದರು! ಅಲ್ಲಲ್ಲಿ ನಡೆದಿರುವ ಸಿವಿಲ್ ಕಾಮಗಾರಿಗಳು, ಪೈಪ್ಲೈನುಗಳು ಜನರ ಕಣ್ಣಿಗೆ ಕಾಣುತ್ತಿವೆಯಾದರೂ ಆ ಪೈಪುಗಳಲ್ಲಿ ಹರಿಯುತ್ತದೆ ಎಂದು ‘ನಂಬಿಸಲಾಗಿರುವʼ ಹನಿ ನೀರೂ ಪತ್ತೆ ಇಲ್ಲ. ಅದನ್ನು ಸಮರ್ಥನೆ ಮಾಡಿಕೊಳ್ಳುವ ದಾಖಲೆಗಳು ಸರಕಾರದ ಬಳಿ ಇಲ್ಲ. ಜಲವಿಜ್ಞಾನದ ಸೊಲ್ಲಂತೂ ಇಲ್ಲವೇ ಇಲ್ಲ. ಈ ಅಂಶಗಳ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡಲೇ ಗಮನ ಹರಿಸಿ ಜಲವಿಜ್ಞಾನದ ಮರು ಅಧ್ಯಯನ ಮಾಡಿಸಿ ಯೋಜನೆಯಲ್ಲಿ ಮುಂದೆ ಆಗಬಹುದಾದ ಲೂಟಿಯನ್ನು ತಪ್ಪಿಸಬೇಕಾಗಿದೆ.
ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಒಪ್ಪಿದ್ದರು..
ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟಗಾರರು ಸುಮಾರು 65 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ-ಸತ್ಯಾಗ್ರಹ ನಡೆಸಿದ ಫಲವಾಗಿ 2012ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಸಾಕ್ಷಿಯಾಗಿ ನೀರಾವರಿ ಹೋರಾಟಗಾರರು ಮತ್ತು ಜನಪ್ರತಿನಿಧಿಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಜಲವಿಜ್ಞಾನದ ಮರು ಅಧ್ಯಯನ ನಡೆಸಲು ಆದೇಶಿಸಿದ್ದರು. ಆ ಸಭೆಯಲ್ಲಿ ಈಗಿನ ಮುಖ್ಯಮಂತ್ರಿ, ಅಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೂ ಇದ್ದರು. ಶೆಟ್ಟರ್ ಮತ್ತು ಬೊಮ್ಮಾಯಿ ಅವರಿಬ್ಬರಿಗೂ ಎತ್ತಿನಹೊಳೆಯಲ್ಲಿ ಆಗುತ್ತಿರುವ ‘ಎತ್ತುವಳಿʼ ಬಗ್ಗೆ ಸೂಕ್ಷ್ಮವಾಗಿ ಗೊತ್ತಾಗಿತ್ತೋ ಏನೋ, ಅವರು ಇಡೀ ಯೋಜನೆಯ ಬಗ್ಗೆ ಮರು ಪರಿಶೀಲನೆ ನಡೆಸಿಲು ಸಿದ್ಧರಾಗಿದ್ದರು. ಅಷ್ಟರಲ್ಲಿ ಅವರು ಅಧಿಕಾರದಿಂದ ನಿರ್ಗಮಿಸಿದ ಪರಿಣಾಮ ನಂತರ ಬಂದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರಕಾರಕ್ಕೆ ಎತ್ತಿನಹೊಳೆಯೆಂಬ ಅಕ್ಷಯಪಾತ್ರೆ ಸುಗ್ಗಿ ತಂದ ಸೌಭಾಗ್ಯವಾಯಿತು ಎಂಬುದು ಇಡೀ ಬಯಲುಸೀಮೆಯಲ್ಲಿ ಪ್ರಚಲಿತವಾಗಿರುವ ಮಾತು.
ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ
ಇನ್ನೊಂದು ಮುಖ್ಯ ಸಂಗತಿ ಎಂದರೆ; ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಕೂಡ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಜಲವಿಜ್ಞಾನ ಅಧ್ಯಯನಕ್ಕೆ ಆದೇಶ ಹೊರಡಿಸಿದ್ದರು. 2015ರ ಸೆಪ್ಟೆಂಬರ್ 21ರಿಂದ 2016ರ ಮಾರ್ಚ್ 3ರವರೆಗೆ 165 ದಿನಗಳ ಕಾಲ ನಡೆದ ಹೋರಾಟಗಾರರು, ರೈತರ ಧರಣಿ ನಡೆಸಿದರೂ ಸಿದ್ದರಾಮಯ್ಯ ಸರಕಾರ ಮೊಂಡುತನ ಬಿಟ್ಟಿರಲಿಲ್ಲ. ಕೊನೆಗೆ ರಾಜಧಾನಿ ಬೆಂಗಳೂರಿಗೆ ಇವೆರೆಲ್ಲರೂ ಟ್ರಾಕ್ಟರ್‌ಗಳ ಮೂಲಕ ಮುತ್ತಿಗೆ ಹಾಕಿದರು. ಪೋಲೀಸರು ಲಾಠಿ ಪ್ರಹಾರ ಮತ್ತಿತರೆ ಹೋರಾಟ ಭಂಗ ಕ್ರಮಗಳನ್ನು ಕೈಗೊಂಡ ಪರಿಣಾಮ ಹೋರಾಟಗಾರರು-ರೈತರ ನೆತ್ತರು ಚಿಮ್ಮುವಂತಾಯಿತು. ಇದರಿಂದ ಕೊಂಚ ಮೆತ್ತಗಾದ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಜಲ ವಿಜ್ಞಾನ ಅಧ್ಯಯನಕ್ಕೆ ಆದೇಶ ನೀಡಿದ್ದರು, ಜತೆಗೆ, ಡಾ.ಜಿ.ಪರಮಶಿವಯ್ಯ ಅವರು ನೀಡಿದ್ದ ವರದಿ ಹಾಗೂ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಅಧ್ಯಯನ-ಪರಿಶೀಲನೆ ನಡೆಸುವಂತೆ ಆದೇಶ ಮಾಡಿದ್ದರು.
DPR ಎಂಬ ದೊಡ್ಡ ದಂಧೆ
ಎತ್ತಿನಹೊಳೆ ಯೋಜನೆಯ ಪ್ರತಿಹೆಜ್ಜೆಯೂ ಅನುಮಾನಾಸ್ಪದ. ಮೂಲ ಯೋಜನಾ ಸಮಗ್ರ ವರದಿಯಲ್ಲಿ 9.5 ಟಿಎಂಸಿ ನೀರು ಲಭ್ಯವಿದೆ ಎಂದು ತೋರಿಸಿ 8,300 ಕೋಟಿ ರೂ.ಗಳನ್ನು ಯೋಜನಾ ವೆಚ್ಚವೆಂದು ನಿಗದಿ ಮಾಡಿ ಅನುಮೋದನೆ ಪಡೆಯಲಾಗಿತ್ತು. ಅದಾಗಿ ಆರೇ ತಿಂಗಳಲ್ಲಿ ಪುನಾ ಪರಿಷ್ಕೃತ DPR ಮಾಡಿ ಲಭ್ಯ ನೀರಿನ ಪ್ರಮಾಣವನ್ನು 24 ಟಿಎಂಸಿ (!!) ಎಂದು ತೋರಿಸಿ 13,000 ಕೋಟಿ ರೂ. ವೆಚ್ಚವೆಂದು ನಮೂದು ಮಾಡಿ ಮರು ಆಡಳಿತಾತ್ಮಕ ಅನುಮೋದನೆ ಪಡೆಯಲಾಯಿತು. ಈಗ ನೋಡಿದರೆ ಭೂ ಸ್ವಾಧೀನ, ಕಚ್ಛಾ ಸಾಮಗ್ರಿಗಳ ವೆಚ್ಚ, ಕೋವಿಡ್ ನೆಪಗಳನ್ನು ಮುಂದೆ ಮಾಡಿ 20,000 ಕೋಟಿ ರೂ.ಗಳ ಇನ್ನೊಂದು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲು ಸರಕಾರ ಮುಂದಾಗಿರುವ ಆಘಾತಕಾರಿ ಸಂಗತಿಯನ್ನು ಸಿಕೆನ್ಯೂಸ್ ನೌ ಗೆ ಪತ್ತೆ ಹಚ್ಚಿದೆ.
ವಿಪರ್ಯಾಸವೆಂದರೆ, ಜಗತ್ತಿನ ಸರ್ವಶ್ರೇಷ್ಠ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC) ಕೂಡ ಎತ್ತಿನಹೊಳೆಯಿಂದ ಗುತ್ತಿಗೆದಾರರು ಹೇಳುವಷ್ಟು ನೀರು ಲಭ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ತನ್ನ ಅಧ್ಯಯನ ವರದಿಯಲ್ಲಿ ʼWhere is 24 TMC to divert?’ ಎಂದು ಪ್ತಶ್ನಿಸಿದೆ. ಈ ಸಂಸ್ಥೆ ವರದಿ ಪ್ರಕಾರ ಎತ್ತಿಹೊಳೆಯಲ್ಲಿ ಸಿಗಬಹುದಾದ ನೀರಿನ ಪ್ರಮಾಣ ಕೇವಲ 9.55 ಟಿಎಂಸಿ ಮಾತ್ರ. ಜತೆಗೆ, ಪ್ರಖ್ಯಾತ ಜಲವಿಜ್ಞಾನಿ ಡಾ.ಯದುಪತಿ ಪುಟ್ಟಿ ಅವರ ಅಧ್ಯಯನದಲ್ಲೂ 9.55 ಟಿಎಂಸಿ ಲಭ್ಯ ಎಂದು ಹೇಳಲಾಗಿದೆ. ಹೀಗಿದ್ದರೂ ನೀರಿನ ಲಭ್ಯತೆಯ ಬಗ್ಗೆ ರಾಜ್ಯ ಸರಕಾರ ಮರು ಅಧ್ಯಯನಕ್ಕೆ ಮುಂದಾಗುತ್ತಿಲ್ಲ. ಇದು ಅನೇಕ ಗಂಭೀರ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ದೇಶದ ಘನತೆ ಹೆಚ್ಚಿಸುವ ಯೋಜನೆ
ಮಳೆ ನೀರಿಗೆ ನೇರವಾಗಿ ಪಂಪ್ ಹಾಕಿದ ಜಗತ್ತಿನ ಮೊತ್ತ ಮೊದಲ, ಏಕೈಕ ಯೋಜನೆ ಇದಾಗಿದೆ. ಅತ್ಯಂತ ವೈಜ್ಞಾನಿಕವಾಗಿ, ಶ್ರೇಷ್ಠ ತಂತ್ರಜ್ಞಾನ ಬಳಸಿ ಕಾರ್ಯಗತ ಮಾಡಿದರೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶದ ಕುಡಿಯುವ ನೀರಿನ ಯೋಜನೆಗಳಿಗೇ ಮುಂಬೆಳಕಾಗಿ ನಿಲ್ಲಬಲ್ಲ ಪ್ರಾಜೆಕ್ಟ್. ನಮ್ಮ ದೇಶದ ಶ್ರೇಷ್ಠ ಮಿದುಳುಗಳು ಇಲ್ಲಿ ಕೆಲಸ ಮಾಡಬೇಕಿದೆ. ಆದರೆ, ಯೋಜನೆಯ ತುಂಬಾ ಎಂಥವರು ತುಂಬಿಹೋಗಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಅದೇಕೋ, ನೀರಾವರಿ ಇಲಾಖೆಗಳಲ್ಲಿ ಝಾಂಡಾ ಹೂಡಿರುವ ಅಧಿಕಾರಿಗಳು ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರುಗಳೇ ಬದಲಾದರೂ ಇವರು ಬದಲಾಗುವುದಿಲ್ಲ. ಕರ್ನಾಟಕದಲ್ಲಿ ಇದೊಂದು ಆಡಳಿತಾತ್ಮಕ ವಿಸ್ಮಯ!!
ಭ್ರಷ್ಟರ ಪಾಲಿನ ಕಾಮಧೇನುವಾಗಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಈಗ ರಾಷ್ಟ್ರೀಯ ಯೋಜನೆ ಸ್ಥಾನಮಾನದ ನೆಪದಲ್ಲಿ ಇನ್ನಷ್ಟು ಎತ್ತುವಳಿಗೆ ರಹದಾರಿಯಾಗುವ ಹಾಗೆ ಕಾಣುತ್ತಿದೆ. ಮಾತ್ರವಲ್ಲ, ಇಡೀ ಯೋಜನೆ ಮೂಲಪುರುಷರೇ ಇದೀಗ ರಾಷ್ಟ್ರೀಯ ಯೋಜನೆಯ ಜಪ ಮಾಡುತ್ತಿರುವುದು ನೂರಾರು ಅನುಮಾನಗಳಿಗೂ ಕಾರಣವಾಗಿದೆ. ರಾಜ್ಯ ಸರಕಾರಗಳು ಮಾಡಿರುವ ಈ ಪಾಪದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಎಳೆದುತಂದು ಮಸಿ ಬಳಿಯುವ ಕೆಲಸ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.
ವೇದಾವತಿಯಲ್ಲಿ ಮುಳುಗಿಸುವ ಹುನ್ನಾರ
ನೀರಿಲ್ಲದೆ ‘ಸುಳ್ಳಿನಹೂಳುʼ ತುಂಬಿದ ಎತ್ತಿನಹೊಳೆಯನ್ನು, ಯೋಜನೆಯಲ್ಲೇ ಇಲ್ಲದ ವೇದಾವತಿ ವ್ಯಾಲಿಯತ್ತ ತಿರುಗಿಸಲು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಜುಲೈ ತಿಂಗಳ ಡೆಡ್ಲೈನ್ ವಿಧಿಸಿ ಹೋಗಿದ್ದಾರೆ! ಅದಕ್ಕೂ ಹಿಂದೆ ಜಲ ಸಂಪನ್ಮೂಲ ಮಂತ್ರಿಯಾಗಿದ್ದ ಎಂ.ಬಿ.ಪಾಟೀಲರೂ ಇದೇ ಕೃತ್ಯಕ್ಕೆ ಕೈಹಾಕಿದ್ದರು. ಇದರ ಬಗ್ಗೆಯೂ ಅನೇಕ ಅನುಮಾನಗಳು ಇವೆ.
- ಏನದು ವೇದಾವತಿ ಎಂಬ ಮಾಯೆ..? ವಿವರಕ್ಕೆ ಕೆಳಗಿನ ಸುದ್ದಿಯ ಲಿಂಕ್ ಕ್ಲಿಕ್ ಮಾಡಿ..
ಹೋರಾಟಗಾರರು ಏನಂತಾರೆ?
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ದಶಕಗಳಿಂದ ಹೋರಾಟ ನಡೆಸುತ್ತಿರುವ ಆರ್.ಆಂಜನೇಯ ರೆಡ್ಡಿ ಅವರು, ರಾಷ್ಟ್ರೀಯ ಸ್ಥಾನಮಾನದ ನೆಪದಲ್ಲಿ ಎತ್ತಿನಹೊಳೆ ಮೇಲೆ ಮುಗಿಬಿದ್ದಿರುವ ‘ಧನದಾಹಿʼಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್. ಆಂಜನೇಯ ರೆಡ್ಡಿ
ಎತ್ತಿನಹೊಳೆ ಯೋಜನೆ ಆರಂಭವಾದಾಗಿನಿಂದ, ಅಂದರೆ; 2010ರಿಂದ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಮುಂತಾದವರಿಗೆ ಶಾಶ್ವತ ನೀರಾವರಿ ಹೋರಾಟಗಾರರೆಲ್ಲರೂ ಪಕ್ಷಾತೀತವಾಗಿ ಮನವಿ ಮಾಡಿದ್ದೇವೆ. ಯೋಜನೆಯ ಕಟ್ಟಕಡೆಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೇಂದ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಗಳ ಪತ್ರಗಳ ವಿವರ, ದಾಖಲೆಗಳು, ಭಾರತೀಯ ವಿಜ್ಞಾನ ಸಂಸ್ಥೆಯ ಅಭಿಪ್ರಾಯವನ್ನೂ ತಿಳಿಸಿದ್ದೇವೆ. ಬೊಮ್ಮಾಯಿ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಯಾರೂ ನಮ್ಮ ಅಭಿಪ್ರಾಯಕ್ಕೆ ಬೆಲೆ ನೀಡಲಿಲ್ಲ. ಉಳಿದವರು ಭಾರೀ ಉಪೇಕ್ಷೆ ತೋರಿದರು. ಸರಕಾರಿ ಸ್ವಾಮ್ಯದ ಶ್ರೇಷ್ಠ ವೈಜ್ಞಾನಿಕ ಸಂಸ್ಥೆಗಳ ಅಭಿಪ್ರಾಯ ಕಡೆಗಣಿಸಿ, ಕೇವಲ ಖಾಸಗಿ ಗುತ್ತಿಗೆದಾರರ ಮಾತು ನಂಬಿ ಸಾವಿರಾರು ಕೋಟಿ ಜನರ ತೆರಿಗೆ ಹಣವನ್ನು ಸುರಿಯಲಾಗಿದೆ. ಆದರೆ, ನಮ್ಮ ಜಿಲ್ಲೆಗಳಿಗೆ ನೀರು ಹರಿದು ಬರುವ ಖಾತರಿ ಇಲ್ಲ. ಈಗಲಾದರೂ ಜಗದೀಶ್ ಶೆಟ್ಟರ್ ಅವರ ಸರಕಾರ ಕೈಗೊಂಡ ನಿರ್ಧಾರದಂತೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಸಮಗ್ರ ಜಲವಿಜ್ಞಾನ (Hydrology)ದ ಮರು ಅಧ್ಯಯನ ಆಗಲಿ. ಕೇಂದ್ರಿಯ ಜಲ ಆಯೋಗದಿಂದ ಅಧ್ಯಯನ ಮಾಡಿಸಲಿ. ಆಗ ಈ ಯೋಜನೆಯ ನೈಜ ಸಾಧಕ-ಬಾಧಕ ಏನು ಎಂಬುದು ಗೊತ್ತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎತ್ತಿನಹೊಳೆ ಮತ್ತು ಮತ ಫಸಲು
ಮುಖ್ಯವಾಗಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಎತ್ತಿನಹೊಳೆ ಹೆಸರು ಹೇಳಿಕೊಂಡೇ ರಾಜಕಾರಣಿಗಳು ಭರ್ಜರಿ ಮತ ಫಸಲು ತೆಗೆದದ್ದು ಸುಳ್ಳಲ್ಲ. ಈಗ ಹೊಸದಾಗಿ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ರಾಷ್ಟ್ರೀಯ ಯೋಜನೆ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ನೈಜ ದಾಖಲೆಗಳನ್ನು ಮರೆಮಾಚಿ ಸುಳ್ಳುಗಳನ್ನೇ ಹೇಳಿಕೊಂಡು ರಾಜಕಾರಣಿಗಳು ಎರಡೂ ಜಿಲ್ಲೆಗಳ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಆಂಜನೇಯ ರೆಡ್ಡಿ ದೂರುತ್ತಾರೆ.
ಬಹಳ ಮುಖ್ಯವಾಗಿ ಚಿಕ್ಕಬಳ್ಳಾಪುರವನ್ನು ಎರಡು ಅವಧಿಗೆ ಲೋಕಸಭೆಯಲ್ಲಿ ಪ್ರತಿನಿಧಿಸಿ ಕೇಂದ್ರದಲ್ಲಿಯೂ ಸಚಿವರಾಗಿದ್ದ ವೀರಪ್ಪ ಮೊಯಿಲಿ ಅವರ ‘ಪಾತ್ರʼ ಹಾಗೂ ಬೆಳಗಾವಿಯ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ಅರೆಬೆಂದ ವರದಿಯಿಂದಾಗಿ ಹಳ್ಳಹಿಡಿದ ಎತ್ತಿನಹೊಳೆಯ ಕಟುಸತ್ಯಗಳು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದ ತಪ್ಪುಗಳು, ಪ್ರಭಾವಕ್ಕೆ ಸಿಲುಕಿ ಆಂಧ್ರದ ಗುತ್ತಿಗೆದಾರರಿಗೆ ಯೋಜನೆಯನ್ನು ಧಾರೆ ಎರೆದದ್ದು ಸೇರಿ ಎಲ್ಲ ಗುಟ್ಟುಗಳು ಈಗ ರಟ್ಟಾಗುತ್ತಿವೆ. ಸ್ವತಃ ನೀರಾವರಿ ಯೋಜನೆಗಳ ಬಗ್ಗೆ ನೈಪುಣ್ಯತೆ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಕೂಡ ಎತ್ತಿನಹೊಳೆ ಯೋಜನೆಯಲ್ಲಿ ಅಡಗಿರುವ ಎತ್ತುವಳಿಗಳ ಮೇಲೆ ಬೆಳಕು ಚೆಲ್ಲಬೇಕಿದೆ.
Lead photo courtesy: VJNL
Good story
ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ನಿರೂಪಣೆ ಹಾಗೂ ವೇದಾವತಿ ವ್ಯಾಲಿ ಬಗೆಗಿನ ಪೂರಕ ಮಾಹಿತಿಯ ಲಿಂಕ್—ಅತ್ಯುತ್ತಮ, ಅಭಿನಂದನೆಗಳು ಟೀಂ CK news 😊