by GS Bharath Gudibande
ಗುಡಿಬಂಡೆ: ಕೊರೋನಾ 2ನೇ ಅಲೆ ನಿಯಂತ್ರಿಸಲು ಅಧಿಕಾರಿಗಳು ಹಾಗೂ ಸರಕಾರ ಹರಸಾಹಸ ಪಟ್ಟಿದ್ದರೂ ಮತ್ತೆ ಕೋವಿಡ್ ಅಬ್ಬರಿಸುವ ಹಾಗೆ ಕಾಣುತ್ತಿದೆ. ಮೂರನೇ ಅಲೆಯ ಭೀತಿ ತೀವ್ರವಾಗಿದ್ದರೂ ಜನರು ಜನ ಮಾಸ್ಕ್ ಮತ್ತು ದೈಹಿಕ ಅಂತರ ಮರೆತು ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ.
ಇದರಿಂದ ತಾಲೂಕಿನಲ್ಲಿ ಶೂನ್ಯಕ್ಕೆ ಬಂದಿದ್ದ ಸೋಂಕು ಮತ್ತೆ ಕಾಣಿಸಿಕೊಂಡೀತು ಎನ್ನುವ ಆತಂಕದಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಲು ರಸ್ತೆಗೆ ಇಳಿದಿದ್ದು, ಕೋವಿಡ್ ಶಿಷ್ಟಾಚಾರ ಪಾಲಿಸದ ಜನರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ತಹಸೀಲ್ದಾರ್ ಸಿಗ್ಬತ್ ವುಲ್ಲಾ, ಪೊಲೀಸ್ ಸರ್ಕಲ್ ಇನಸ್ಪೆಕ್ಟರ್ ಲಿಂಗರಾಜು ಮುಂತಾದ ಅಧಿಕಾರಿಗಳು ಜನರಿಗೆ ಕೋಂಚ ಬಿಸಿ ಮುಟ್ಟಿಸಿದರು.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ 3ನೇ ಅಲೆ ಭೀತಿ ಆರಂಭವಾಗಿದ್ದು, ರಾಜ್ಯದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜನರಿಗೆ, ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಕೊರೋನಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಮಾಸ್ಕ್ ಮರೆಯದಂತೆ ಅರಿವು
ಕೊರೋನಾ ವೈರಸ್ ಸಂಪೂರ್ಣ ಚಿಕಿತ್ಸೆ ಲಭ್ಯವಾಗುವ ತನಕ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಲು ಸರಕಾರ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆದರೂ ತಾಲೂಕಿನ ಜನತೆ ಸಂಪೂರ್ಣ ನಿರ್ಲಕ್ಷ್ಯದಿಂದ ಮಾಸ್ಕ್ ಮತ್ತು ದೈಹಿಕ ಅಂತರ ಪಾಲಿಸದೇ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಲು ಮಾಸ್ಕ್ ಒಂದು ಅಸ್ತ್ರವಾಗಿದೆ ಎಂದು ಅಧಿಕಾರಿಗಳು ಜನರಿಗೆ ಅರಿವು ಮೂಡಿಸಿದರು.
ತಾಲೂಕಿನಲ್ಲಿ ಕೋವಿಡ್-19 ಸೋಂಕಿತರಿಗಿಂತ ಮಾಸ್ಕ್ ಹಾಕದೆ ದಂಡ ಕಟ್ಟಿದವರ ಸಂಖ್ಯೆಯೇ ಹೆಚ್ಚಾಗಿದೆ! ಕಳೆದ ಒಂದು ತಿಂಗಳಿಂದ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಲಕ್ಷಣಗಳಿವೆ. ಸಂಪೂರ್ಣವಾಗಿ ಕೊರೋನಾ ಮುಕ್ತ ತಾಲೂಕು ಮಾಡಲು ಸಾರ್ವಜನಿಕರ ಸಹಕಾರ ಎನ್ನುತ್ತಿದ್ದಾರೆ ಅಧಿಕಾರಿಗಳು.
ತಾಲೂಕಿನ ಸೋಂಕಿತರ ಅಂಕಿ-ಅಂಶ
ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ 2,700 ಪಾಸಿಟಿವ್ ಪ್ರಕರಣಗಳು, 2680 ಜನ ಸೋಂಕಿನಿಂದ ಗುಣಮುಖರಾದವರು, ಪ್ರಸ್ತುತ ಐದು ಸಕ್ರಿಯ ಪ್ರಕರಣಗಳಿದ್ದು, ಸೋಂಕಿನ ತೀವ್ರತೆಗೆ 15 ಜನರು ಮರಣ ಹೊಂದಿದ್ದಾರೆ. ಮೂರನೇ ಅಲೆ ಇನ್ನೇನು ಹೊಚಿ ಹಾಕಿ ಕೂತಿರುವುದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆ ವಹಿಸಿದ್ದಾರೆ.