ಟೊಕಿಯೋ: ನಮ್ಮ ಹೆಮ್ಮೆಯ ಪಿ ವಿ ಸಿಂಧು ಅವರು ಟೊಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇಡೀ ಭಾರತೀಯರು ಕಣ್ಣರಳಿಸಿ ಖುಷಿಪಡುವ ಹಾಗೆ ಮಾಡಿದ್ದಾರೆ. ಅವರು ಗೆದ್ದ ಕಂಚು ಸಮಸ್ತ ಭಾರತೀಯರ ಕಂಗಳಲ್ಲಿ ಆನಂದಬಾಷ್ಪಕ್ಕೆ ಕಾರಣವಾಗಿದೆ.
ಒಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿ ಪದಕ ಗೆಲ್ಲುವ ಮೂಲಕ ಮಹತ್ವದ ಸಾಧನೆ ಮಾಡಿರುವ ಸಿಂಧು, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದರು. ಇದೀಗ ಕಂಚು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಮಹಿಳೆಯರ 49 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಭಾರತದ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದ ನಂತರ ನಮ್ಮ ದೇಶಕ್ಕೆ ಸಿಂಧು ಎರಡನೇ ಪದಕ ತಂದುಕೊಟ್ಟಿದ್ದಾರೆ.
ಸೆಮಿ ಫೈನಲ್‌ನಲ್ಲಿ ಸೋಲುಂಡಿದ್ದ ಪಿ.ವಿ.ಸಿಂಧು ಇಂದು ಕಂಚಿನ ಪದಕ ಗೆದ್ದಿದ್ದು, ಒಲಿಂಪಿಕ್ ಇತಿಹಾಸದಲ್ಲಿಯೇ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಚೀನಾದ ಹಿ ಬಿಂಗ್ಜಿಯೋ ಅವರನ್ನು ಸೋಲಿಸುವ ಮೂಲಕ ಸಿಂಧು ಈ ಸಾಧನೆಗೆ ಪಾತ್ರರಾದರು.
ಇಂದು ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಚೀನಾ ಆಟಗಾರ್ತಿ ಹಿ ಬಿಂಗ್ಜಿಯೋ ಅವರನ್ನು 21-13, 21-15 ನೇರ ಸೆಟ್ಗಳಿಂದ ಮಣಿಸಿದ ಸಿಂದು ಕಂಚಿನ ಪದಕವನ್ನು ಗೆದ್ದರು. ಅಂದಹಾಗೆ, ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ 2ನೇ ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 62ನೇ ಸ್ಥಾನಕ್ಕೇರಿದೆ.
ಇನ್ನು, ಸಿಂಧು ನಿನ್ನೆ ಸೆಮಿ ಫೈನಲ್ನಲ್ಲಿ ತೈವಾನಿನ ತೈ ವಿರುದ್ಧ ಸೋತಿದ್ದರು. ಹೀಗಾಗಿ ಚಿನ್ನದ ಪದಕ ಅವರ ಕೈ ತಪ್ಪಿತ್ತು.
Lead photo courtesy: https://olympics.com/