by Ra Na Gopala Reddy Bagepalli
ಬಾಗೇಪಲ್ಲಿ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಗ್ರಾಮದಲ್ಲಿ ಸೋಮವಾರ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಹಾಗೂ ಬೀಜೋಪಚಾರ, ಗೊಬ್ಬರ ಬಳಿಕೆ ತರಬೇತಿ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಗೇಪಲ್ಲಿ ತಾಲೂಕಿನಾದ್ಯಂತ ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರೈತರೊಂದಿಗೆ, ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಪೈಕಿ ಬಹುತೇಕ ರೈತರ ಸಮಸ್ಯೆ ಎಂದರೆ, ಯುವ ಪೀಳಿಗೆ ಕೃಷಿಯೇತರ ಕಸುಬಿನತ್ತ ಮುಖ ಮಾಡುತ್ತಿರುವುದರಿಂದ, ಕೃಷಿ ಕೂಲಿ ಕಾರ್ಮಿಕರ ಕೊರತೆಯಾಗುತ್ತಿದ್ದು, ಲಭ್ಯವಿರುವ ಕೂಲಿ ಕಾರ್ಮಿಕರ ವೆಚ್ಚ ಅಧಿಕವಾಗುತ್ತಿದ್ದು, ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದ್ದು ಆದ್ದರಿಂದ ಅತ್ಯಂತ ಕಡಿಮೆ ದರದಲ್ಲಿ ಎಲ್ಲ ರೈತರಿಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಸೇವೆ ನೀಡುವಂತಹ ಕೃಷಿ ಯಂತ್ರಧಾರೆ ಯೋಜನೆ ರೈತರಿಗೆ ವರಧಾನವಾಗಲಿದೆ ಎಂದರು.
ರೈತರು ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಬಂಡವಾಳ ಹಾಕಿ, ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು, ಸರಕಾರವೇ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ, ಅತ್ಯಲ್ಪ ದರದಲ್ಲಿ ಅಂದರೆ ಮಾರುಕಟ್ಟೆ ದರಕ್ಕಿಂತಲೂ ಶೇ.30ರಷ್ಟು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಲು ಈ ಯೋಜನೆ ಜಾರಿಗೊಳಿಸಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಕೃಷಿ ಇಲಾಖೆ ಕೃಷಿ ನಿರ್ದೇಶಕ ಕೆ .ಸಿ.ಮಂಜುನಾಥ, ತೋಟಗಾರಿಕೆ ಇಲಾಖೆ ನಿರ್ದೇಶಕ ಈಶ್ವರಪ್ಪ, ರೇಷ್ಮೆ ಇಲಾಖೆಯ ಚಿನ್ನ ಕೈವಾರಮಯ್ಯ, ಕೃಷಿ ಇಲಾಖೆಯ ರವಿಚಂದ್ರರೆಡ್ಡಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕ ಬಾಬು ಹಾಗೂ ಗೂಳೂರು ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ನರಸಿಂಹಪ್ಪ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.