ಜಾತಿ ಲೆಕ್ಕಾಚಾರ, ಕೊನೆಗೂ ಕ್ಯಾಬಿನೆಟ್ ಸಾಕಾರ: ಅಧಿಕಾರ ಗೌಪ್ಯತೆ ಪ್ರಮಾಣ ಬೋಧಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋತ್
ಚಿಕ್ಕಬಳ್ಳಾಪುರಕ್ಕೆ ಪ್ರಾತಿನಿಧ್ಯ; 20ನೆಯವರಾಗಿ ಪ್ರಮಾಣ ಸ್ವೀಕರಿಸಿದ ಸುಧಾಕರ್, 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ 29 ನೂತನ ಸಚಿವರು ಬುಧವಾರ ಪ್ರಮಾಣ ಸ್ವೀಕರಿಸಿದರು. ಇಪ್ಪತ್ತೊಂಬತ್ತು ಶಾಸಕರ ಸೇರ್ಪಡೆಯೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಂಪುಟ ಬಲ ಇಂದು ಮೂವತ್ತಕ್ಕೆ ಏರಿದೆ.
ಇದರೊಂದಿಗೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಪ್ರಮಾಣ ಸ್ವೀಕಾರ ಮಾಡಿದ 8 ದಿನಗಳ ನಂತರ ಅವರ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಹೊಸ ಸಚಿವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ಬೋಧಿಸಿದರು.
ಹಳಬರು, ಹೊಸಬರು ಹಾಗೂ ವಲಸಿಗರನ್ನು ಸಮತೋಲನ ಮಾಡಿಕೊಂಡಿರುವ ಈ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿಲ್ಲ. ಪ್ರಾದೇಶಿಕ, ಜಾತಿವಾರು ಲೆಕ್ಕದಲ್ಲಿ ಕ್ಯಾಬಿನೆಟ್ ಅನ್ನು ಬ್ಯಾಲೆನ್ಸ್ ಮಾಡಲಾಗಿದ್ದು; ಯಡಿಯೂರಪ್ಪ ಸಂಪುಟದಲ್ಲಿದ್ದ 23 ನಾಯಕರು ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಜಾತಿ ಲೆಕ್ಕದಲ್ಲಿ ನೋಡುವುದಾದರೆ; ಲಿಂಗಾಯಿತ-8, ಒಕ್ಕಲಿಗ-7, ಒಬಿಸಿ-7, ಪರಿಶಿಷ್ಟ ಜಾತಿ-3, ಪರಿಶಿಷ್ಟ ವರ್ಗ-1, ರೆಡ್ಡಿ-1, ಮಹಿಳೆ-1 ಹಾಗೂ ಬ್ರಾಹ್ಮಣ-2 ರಂತೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನು, ಬೆಂಗಳೂರು ನಗರಕ್ಕೆ ಸಂಬಂಧಿಸಿ ಒಟ್ಟು 7 ಶಾಸಕರು ಮಂತ್ರಿಗಳಾಗಿ ಪ್ರಮಾಣ ಮಾಡಿದರು.
ಎಂಟು ಹೊಸ ಸಚಿವರು
ಹೊಸಬರ ಕೋಟಾದಲ್ಲಿ ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ, ಯಲಬುರಗಿಯ ಹಾಲಪ್ಪ ಆಚಾರ್, ನವಲಗುಂದ ಕ್ಷೇತ್ರದ ಶಂಕರ ಮುನೇನಕೊಪ್ಪ, ತಿಪಟೂರು ಶಾಸಕ ಬಿ.ಸಿ.ನಾಗೇಶ್, ಕಾರ್ಕಳದ ಸುನೀಲ್ ಕುಮಾರ್, ರಾಜರಾಜೇಶ್ವರಿ ನಗರದ ಮುನಿರತ್ನ (ಇವರು ವಲಸಿಗರು) ಅವರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು.
9 ವಲಸಿಗರೂ ಸೇರಿ 23 ಹಳಬರ ಪ್ರಮಾಣ
ಯಡಿಯೂರಪ್ಪ ಸಂಪುಟದಲ್ಲಿದ್ದ ಶಿವಮೊಗ್ಗ ನಗರದ ಕೆ.ಎಸ್.ಈಶ್ವರಪ್ಪ, ಪದ್ಮನಾಭ ನಗರದ ಆರ್.ಅಶೋಕ್, ಹಿರೇಕೇರೂರಿನ ಬಿ.ಸಿ.ಪಾಟೀಲ್, ಮಲ್ಲೇಶ್ವರದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮೊಳಕಾಲ್ಮೂರು ಕ್ಷೇತ್ರದ ಬಿ.ಶ್ರೀರಾಮುಲು, ಹುಕ್ಕೇರಿಯ ಉಮೇಶ್ ಕತ್ತಿ, ಯಶವಂತಪುರದ ಎಸ್.ಟಿ.ಸೋಮಶೇಖರ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಕೆ.ಆರ್.ಪುರದ ಭೈರತಿ ಬಸವರಾಜ, ಬೀಳಗಿಯ ಮುರುಗೇಶ್ ನಿರಾಣಿ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ನಿಪ್ಪಾಣಿಯ ಶಶಿಕಲಾ ಜೊಲ್ಲೆ, ಕೆ.ಆರ್.ಪೇಟೆಯ ಕೆ.ಸಿ.ನಾರಾಯಣ ಗೌಡ, ಮುಧೋಳದ ಗೋವಿಂದ ಕಾರಜೋಳ, ಎಂಎಲ್‌ಸಿ ಆಗಿರುವ ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮಿಲೇಔಟ್ʼನ ಕೆ.ಗೋಪಾಲಯ್ಯ, ಚಿಕ್ಕನಾಯಕನಹಳ್ಳಿಯ ಜೆ.ಸಿ.ಮಾಧುಸ್ವಾಮಿ, ಎಂಎಲ್‌ಸಿ ಆಗಿರುವ ದಕ್ಷಿಣ ಕನ್ನಡದ ಕೋಟಾ ಶ್ರೀನಿವಾಸ ಪೂಜಾರಿ, ಔರಾದ್‌ನ ಪ್ರಭು ಚೌವ್ಹಾಣ್, ಗೋವಿಂದರಾಜನಗರದ ವಿ.ಸೋಮಣ್ಣ, ಸುಳ್ಯದ ಎಸ್.ಅಂಗಾರ, ವಿಜಯನಗರದ ಆನಂದ್ ಸಿಂಗ್, ನರಗುಂದದ ಸಿ.ಸಿ.ಪಾಟೀಲ್ ಅವರುಗಳು ರಾಜ್ಯಪಾಲರಿಂದ ಪ್ರಮಾಣ ಸ್ವೀಕಾರ ಮಾಡಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸುಮಾರು 75 ನಿಮಿಷಗಳ ಕಾಲ ನಡೆದ ಈ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಾ ಉಮೇಶ್ ಜಾಧವ್ ಒಳಗೊಂಡಂತೆ ಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ ಡಾ.ಕೆ.ಸುಧಾಕರ್.
ಇವರ ಜತೆಗೆ, ರಾಜರಾಜೇಶ್ವರ ನಗರದ ಶಾಸಕ ಮುನಿರತ್ನ ಅವರು ಕೂಡ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಕಳೆದ ಸಂಪುಟದಲ್ಲಿ ಹನ್ನೊಂದು ವಲಸಿಗರಿಗೆ ಅವಕಾಶ ಸಿಕ್ಕಿತ್ತು. ಈ ಬಾರಿ ಮುನಿರತ್ನ ಸೇರಿ ಹತ್ತು ವಲಸಿಗರಿಗೆ ಜಾಗ ಸಿಕ್ಕಿದೆ. ಶ್ರೀಮಂತ ಪಾಟೀಲ್, ಆರ್.ಶಂಕರ್ ಹಾಗೂ ಮಹೇಶ್ ಕುಮಟಳ್ಳಿ, ಎಚ್.ವಿಶ್ವನಾಥ್ ಅವರಿಗೆ ಚಾನ್ಸ್ ಸಿಕ್ಕಿಲ್ಲ.
ಗಮನಾರ್ಹ ಅಂಶಗಳು
ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ಅಂಗ ವಸ್ತ್ರವನ್ನು ತೊಟ್ಟಿದ್ದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಪ್ರಭು ಚವ್ಹಾಣ್ ಅವರು ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು. ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಏಕೈಕ ಮಹಿಳಾ ಸದಸ್ಯೆಯಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಎಲ್ಲಾ ಸಚಿವರೂ ಕನ್ನಡ ಭಾಷೆಯಲ್ಲಿಯೇ ಹಾಗೂ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಿಶೇಷವಾದರೆ ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನ ಕೊಪ್ಪ ಅವರು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು.
ಅರೆಬೈಲ್ ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಜೊತೆಗೆ ಕ್ಷೇತ್ರದ ಜನರ ಹೆಸರಲ್ಲೂ ಪ್ರಮಾಣ ಮಾಡಿದರು. ಆನಂದ್ ಸಿಂಗ್ ಅವರು ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ.ಸಿ. ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಭು ಚೌವ್ಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಚಿವರಿಗೂ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಹೂ-ಗುಚ್ಛ ನೀಡಿ ಖುದ್ದು ಅಭಿನಂದಿಸಿ ಶುಭ ಹಾರೈಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.
13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ
ಕೋಲಾರ ಸೇರಿದಂತೆ ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಬೊಮ್ಮಾಯಿ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ರೆಬೆಲ್ ಲೀಡರುಗಳಿಗೆ ಸಿಗದ ಚಾನ್ಸ್; ಆರು ಮಾಜಿಗಳು ಸೇರಿ ವಿಜಯೇಂದ್ರಗೂ ಅವಕಾಶ ಇಲ್ಲ
ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ, ಹಾಗೂ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವ ಅವಕಾಶ ತಪ್ಪಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದ ಸಿ.ಪಿ.ಯೋಗೇಶ್ವರ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಇವರ ಜತೆ, ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದ, ಇನ್ನೇನು ಮುಖ್ಯಮಂತ್ರಿ ಆಗಿಯೇ ಬಿಟ್ಟರು ಎನ್ನಲಾಗಿದ್ದ ಧಾರವಾಡ ದಕ್ಷಿಣ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಮಂತ್ರಿಯಾಗಿಲ್ಲ.
ಇವರ ಜತೆ ರೆಬೆಲ್ ಲೀಡರ್ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಸಚಿವ ಸ್ಥಾನ ನಿರಾಕರಿಸಲಾಗಿದೆ. ಇವರೊಂದಿಗೆ, ಮಂತ್ರಿಯಾಗುತ್ತಾರೆ ಎನ್ನಲಾಗಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೂ ಮಂತ್ರಿಯಾಗುವ ಚಾನ್ಸ್ ದೊರೆತಿಲ್ಲ.
ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೇ ಎಲ್ಲರಿಗೂ ಶಾಕ್ ನೀಡಿದೆ. ಮತ್ತೊಂದೆಡೆ, ಬಂಡಾಯ ಮತ್ತೆ ಭುಗಿಲೇಳುತ್ತಾ ಎನ್ನುವ ಆತಂಕವೂ ಉಂಟಾಗಿದೆ. ಬೆಳಗ್ಗೆ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಪಸ್ ಬಂದ ಯೋಗೇಶ್ವರ ಅವರ ಮುಖದಲ್ಲಿ ಅತೃಪ್ತಿಯ ಬೇಗುದಿ ಕಂಡುಬಂದಿತು.
ನೂತನ ಸಚಿವರು
1.ಗೋವಿಂದ ಕಾರಜೋಳ: ಮುದೋಳ
2.ಕೆ.ಎಸ್.ಈಶ್ವರಪ್ಪ: ಶಿವಮೊಗ್ಗ ನಗರ
3.ಆರ್.ಅಶೋಕ: ಪದ್ಮನಾಭ ನಗರ
4.ಬಿ.ಶ್ರೀರಾಮುಲು: ತೀರ್ಥಹಳ್ಳಿ
5.ವಿ.ಸೋಮಣ್ಣ: ಗೋವಿಂದರಾಜ ನಗರ
6.ಉಮೇಶ್ ಕತ್ತಿ: ಹುಕ್ಕೇರಿ
7.ಎಸ್.ಅಂಗಾರ: ಸುಳ್ಯ
8.ಜೆ.ಸಿ.ಮಾಧುಸ್ವಾಮಿ: ಚಿಕ್ಕನಾಯಕನಹಳ್ಳಿ
9.ಅರಗ ಜ್ಞಾನೇಂದ್ರ: ತೀರ್ಥಹಳ್ಳಿ
10.ಡಾ.ಸಿ.ಎನ್.ಅಶ್ವತ್ಥನಾರಾಯಣ: ಮಲ್ಲೇಶ್ವರ
11.ಸಿ.ಸಿ.ಪಾಟೀಲ್: ನರಗುಂದ
12.ಆನಂದ್ ಸಿಂಗ್: ಹೊಸಪೇಟೆ
13.ಕೋಟಾ ಶ್ರೀನಿವಾಸ ಪೂಜಾರಿ: ವಿಧಾನ ಪರಿಷತ್ ಸದಸ್ಯ
14.ಪ್ರಭು ಚೌಹಾಣ್: ಔರಾದ್
15.ಮುರುಗೇಶ್ ನಿರಾಣಿ: ಬೀಳಗಿ
16.ಶಿವರಾಮ್ ಹೆಬ್ಬಾರ್: ಯಲ್ಲಾಪುರ
17.ಎಸ್.ಟಿ.ಸೋಮಶೇಖರ್: ಯಶವಂತಪುರ
18.ಬಿ.ಸಿ.ಪಾಟೀಲ್: ಹಿರೇಕೇರೂರು
19.ಭೈರತಿ ಬಸವರಾಜ: ಕೆಆರ್ ಪುರ
20.ಡಾ.ಕೆ.ಸುಧಾಕರ್: ಚಿಕ್ಕಬಳ್ಳಾಪುರ
21.ಕೆ.ಗೋಪಾಲಯ್ಯ: ಮಹಾಲಕ್ಷ್ಮೀ ಲೇಔಟ್
22.ಶಶಿಕಲಾ ಜೊಲ್ಲೆಅಣ್ಣಾ ಸಾಹೇಬ್
23.ಎಂಟಿಬಿ ನಾಗರಾಜ್: ವಿಧಾನ ಪರಿಷತ್ ಸದಸ್ಯ
24.ಡಾ.ಕೆ.ಸಿ.ನಾರಾಯಣ ಗೌಡ: ಕೆ.ಆರ್.ಪೇಟೆ
25.ಬಿ.ಸಿ.ನಾಗೇಶ್: ತಿಪಟೂರು
26.ಸುನೀಲ್ ಕುಮಾರ್: ಕಾರ್ಕಳ
27.ಹಾಲಪ್ಪ ಆಚಾರ್: ಯಲಬುರ್ಗಾ
28.ಶಂಕರ ಪಾಟೀಲ್ ಮುನೇನಕೊಪ್ಪ: ನವಲಗುಂದ
29.ಮುನಿರತ್ನ: ರಾಜರಾಜೇಶ್ವರಿ ನಗರ