ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಜಿಂಕೆಗೆ ತಿಂಡಿ-ತಿನಿಸು ನೀಡಿದ ಮಾಧ್ಯಮ ವರದಿಗಾರನಿಗೆ ಅರಣ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ.
ನವದೆಹಲಿಯ ಎನ್ ಡಿ ಟಿವಿಯ ವರದಿಗಾರ ವಾಖ್ಹರ್ ಅಹಮದ್ ಎಂಬುವವರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ಇದೇ ಆ. 3ರಂದು ಬೆಳಗ್ಗೆ ಬಂಡೀಪುರದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬಂಡೀಪುರ ವಲಯ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಪ್ರವಾಸಿಗರೊಬ್ಬರು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಂಕೆಯೊಂದಕ್ಕೆ ತಿಂಡಿ-ತಿನಿಸುಗಳನ್ನು ಕೊಡುತ್ತಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಈ ಸಂಬಂಧ ಬಂಡೀಪುರ ವಲಯದ ಸಿಬ್ಬಂದಿಯು ವ್ಯಾಪಕ ತನಿಕೆ ನಡೆಸಿ ಆ ಪ್ರವಾಸಿಗರನ್ನು ಪತ್ತೆಹಚ್ಚಿ ವಿಚಾರಿಸಿದಾಗ ಅವರು ನವದೆಹಲಿಯ ಎನ್ ಡಿ ಟಿವಿಯ ಮಾಧ್ಯಮ ವರದಿಗಾರ ವಾಖ್ಹರ್ ಅಹಮದ್ ಎಂಬುದು ತಿಳಿದುಬಂದಿತು. ನಂತರ ಅವರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ವನ್ಯಜೀವಿಗಳಿಗೆ ಈ ರೀತಿ ಆಹಾರ ನೀಡುವುದು ಅಕ್ಷಮ್ಯ ಅಪರಾಧ ಆಗಿದ್ದು, ಯಾರೇ ಆದರೂ ಇಂಥ ಕೃತ್ಯಗಳನ್ನು ಎಸಗಬಾರದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.