ಮೂರನೇ ಅಲೆ ನಿಯಂತ್ರಣಕ್ಕೆ ಗುಡಿಬಂಡೆ ಆರೋಗ್ಯ ಇಲಾಖೆ ಹರಸಾಹಸ
by GS Bharath Gudibande
ಗುಡಿಬಂಡೆ: ಕೋವಿಡ್ 3ನೇ ಅಲೆ, ಮತ್ತೆ ಲಾಕ್‌ಡೌನ್ ಭೀತಿ ಇದ್ದರೂ ತಾಲೂಕಿನ ಆರೋಗ್ಯ ಇಲಾಖೆ ಮತ್ತು ಮತ್ತಿತರೆ ಇಲಾಖೆಗಳ ಅಧಿಕಾರಿಗಳು ತಮ್ಮದೇ ಕಸರತ್ತು ಮಾಡುತ್ತಾ ತಾಲೂಕಿನಲ್ಲಿ ಮತ್ತೆ ಸೋಂಕು ಉಲ್ಬಣವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಎರಡನೇ ಅಲೆಯಲ್ಲಿ ರಾಜ್ಯವು ಇನ್ನಿಇಲ್ಲದೆ ತತ್ತರಿಸಿತ್ತಲ್ಲದೆ, ಸಾಕಷ್ಟು ಪ್ರಾಣಹಾನಿಯೂ ಆಗಿತ್ತು. ಅದೇ ರೀತಿ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನಲ್ಲಿಯೂ ಎರಡನೇ ಅಲೆ ಗಾಬರಿ ಉಂಟು ಮಾಡಿತ್ತು. ಮೂರನೇ ಅಲೆಯ ಬಗ್ಗೆಯೂ ಆತಂಕ ಇರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ.
ಇದರ ಭಾಗವಾಗಿ ಜನರಿಗೆ ಸೋಂಕಿನ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುತ್ತಾ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ. ಮನೆಮನೆಗೂ ತೆರಳಿ ಈವರೆಗೆ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಆರೋಗ್ಯ ಇಲಾಖೆಯ ಜತೆಗೆ ಕಂದಾಯ ಇಲಾಖೆ ಕೈಜೋಡಿಸಿದ್ದು ಪಿಡಿಓಗಳು ಶ್ರಮಿಸುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ತಿಳಿಸಿದರು.
ಸಿಕೆನ್ಯೂಸ್ ನೌ ಜತೆ ಈ ಬಗ್ಗೆ ಮಾತನಾಡಿದ ಡಾ.ನರಸಿಂಹಮೂರ್ತಿ, ತಾಲೂಕಿನಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಿದೆ. ಕೆಲವರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯುತ್ತಿದ್ದರೆ, ಇನ್ನು ಕೆಲವರು ಈವರೆಗೆ ಲಸಿಕೆ ಪಡೆದೇ ಇಲ್ಲ. ಅಂಥವರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದು ಕೊರೋನಾ ಕಟ್ಟಿಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಡ್ಡ ಪರಿಣಾಮ ಇಲ್ಲ
ಲಸಿಕೆ ಪಡೆದರೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ಅಪ್ಪಟ ಸುಳ್ಳು. ಈಗಾಗಲೇ ಸರಕಾರ ಹಾಗೂ ಆರೋಗ್ಯ ಇಲಾಖೆ ಹೇಳಿರುವಂತೆ ಕೊರೋನಾ ಲಸಿಕೆ ಪಡೆಯುವುದರಿಂದ ಯಾವ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ವೈರಸ್ ವಿರುದ್ಧ ಹೋರಾಡಲು ಅತ್ಯಗತ್ಯವಾಗಿ ಬೇಕಾದ ರೋಗ ನಿರೋಧಕ ಶಕ್ತಿ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಹಾಗಾಗಿ ಲಸಿಕೆ ಪಡೆಯಲು ತಡ ಮಾಡಲೇಬಾರದು. ಲಭ್ಯವಿರುವ ಕಡೆ ಹೋಗಿ ಕೂಡಲೇ ಲಸಿಕೆ ಪಡೆಯಬೇಕು ಎಂದು ಅವರು ತಿಳಿಸಿದರು.
ಕೋವಿಡ್ ವಿರುದ್ಧ ನಿರೋಧಕ ಶಕ್ತಿ ವೃದ್ಧಿಗೆ ಮಾಸ್ಕ್‌ಗಳು ಕೂಡ ಸಹಕಾರಿ. ಅಲ್ಲದೆ ಮಾಸ್ಕ್‌ನ್ನು ನಿತ್ಯ ತಪ್ಪದೇ ಧರಿಸುವುದರಿಂದ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ವೈರಾಣುವಿನ ಪ್ರಮಾಣ ದೇಹದಲ್ಲಿ ಹೊಕ್ಕಿರುವುದನ್ನು ಆಧರಿಸಿ ಸೋಂಕಿನ ಗಂಭೀರತೆ ಅಥವಾ ವೈರಸ್ ಲೋಡ್ ನಿರ್ಧರಿತವಾಗುತ್ತದೆ. ಹೀಗಾಗಿ ಸರಿಯಾಗಿ ಧರಿಸಿದ ಮಾಸ್ಕ್‌ಗಳು ವೈರಾಣುಗಳ ಪ್ರಮಾಣವನ್ನು ಸಾಕಷ್ಟು ತಡೆಯುವ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ ಮಾಸ್ಕ್‌ಗಳು ಕೂಡ ಕೊರೊನಾ ನಿಯಂತ್ರಕ ಲಸಿಕೆ ಇದ್ದಂತೆ ಎಂದು ಡಾ.ನರಸಿಂಹಮೂರ್ತಿ ಹೇಳಿದರು.
ತಾಲೂಕಿನ ಎಲ್ಲಾ ಪಂಚಾಯತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ನಮ್ಮ ತಂಡಗಳು ತೆರಳಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ತಾಲೂಕಿನ 60% ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಒಟ್ಟಾರೆಯಾಗಿ ದೈಹಿಕ ಅಂತರ ಹಾಗೂ ಕಡ್ಡಾಯ ಮಾಸ್ಕ್ ಧರಿಸಬೇಕು. ಇದು ಬಳ ಒಳ್ಳೆಯದು.
ಡಾ.ನರಸಿಂಹಮೂರ್ತಿ ತಾಲೂಕು ಆರೋಗ್ಯಾಧಿಕಾರಿ, ಗುಡಿಬಂಡೆ
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ಪರಿಸ್ಥಿತಿ ನೋಡಿದರೆ 3ನೇ ಅಲೆ ಆರಂಭವಾಗಿದೆ ಎಂಬ ಭೀತಿ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಎಲ್ಲರೂ ಅಗತ್ಯವಾಗಿ ಲಸಿಕೆ ಪಡೆದು ಸೋಂಕು ಹರಡದಂತೆ ತಡೆಯಲು ಸಹಕರಿಸಬೇಕು. ಇಲ್ಲವಾದರೆ ಕಷ್ಟವಾಗುತ್ತದೆ. ಒಮ್ಮೆ ಪರಿಸ್ಥಿತಿ ಕೈಮೀರಿದರೆ ನಿಯಂತ್ರಣಕ್ಕೆ ಬರುವುದು ಕಠಿಣ.
ಆದಿನಾರಾಯಣಪ್ಪ ಆರೋಗ್ಯ ರಕ್ಷಾ ಸಮಿತಿ ಸದಸ್ಯ