ಮೈಸೂರು: ಕೋವಿಡ್ ಸೋಂಕು ಹೆಚ್ಚಾಗಿರುವ ರಾಜ್ಯದ ಎಲ್ಲಾ ಗಡಿ ಜಿಲ್ಲೆಗಳಿಗೆ ವಾರದೊಳಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು; ಸೋಂಕು ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಇವತ್ತು ಮೈಸೂರಿನಲ್ಲಿ ಸಭೆ ನಡೆಸುತ್ತಿದ್ದೇನೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ಈಗಾಗಲೇ ನೀಡಿದ್ದೇನೆ. ಸಾಧ್ಯವಾದರೆ, ಇನ್ನಷ್ಟು ಬಿಗಿ ಕ್ರಮ ವಹಿಸುವಂತೆ ಸೂಚಿಸುವೆ ಎಂದರು.
ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಿದ್ದೇವೆ. ಅಷ್ಟಕ್ಕೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ. ಅದರಲ್ಲಿ ಯಾವುದೇ ರಾಜಿ ಇಲ್ಲ. ಬೆಂಗಳೂರು ಸೇರಿದಂತೆ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಮೇಲೆ ತೀವ್ರ ನಿಗಾ ಇರಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಗಡಿ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸೂಚಿಸಿದ್ದೇನೆ. ಕೇರಳದಿಂದ ರಾಜ್ಯವನ್ನು ಸಂಪರ್ಕಿಸುವ ಪ್ರತಿ ರಸ್ತೆಯ ಮೇಲೂ ನೀಗಾ ಇಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ, ಈಗಾಗಲೇ ಆ ಕೆಲಸ ನಡೆಯುತ್ತಿದೆ. ಜನರು ಕೂಡ ಸರಕಾರ ಜಾರಿ ಮಾಡಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವರು ಹೇಳಿದರು.
ಕೇರಳ ಗಡಿ ಜಿಲ್ಲೆಗಳು ಮಾತ್ರವಲ್ಲದೆ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಗಳ ಚೆಕ್‌ಪೋಸ್ಟುಗಳಲ್ಲೂ ಬಿಗಿ ತಪಾಸಣೆ ಮಾಡಲಾಗುತ್ತಿದೆ. ಎಲ್ಲೂ ಮೈಮರೆಯುವ ಪ್ರಶ್ನೆ ಇಲ್ಲ ಎಂದರು ಅವರು.
ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಉಸ್ತುವಾರಿ ಸಚಿವರು ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಉತ್ತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತೀವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಮಾಡುವಂತೆ ಸೂಚಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿಯೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ. ಚಿಕಿತ್ಸಾ ಸೌಲಭ್ಯದಲ್ಲಿ, ಆಮ್ಲಜನಕ, ಔಷಧ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಲ್ಲ ಜಿಲ್ಲೆಗಳಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.