ಬೆಂಗಳೂರು: ಕೇಂದ್ರ ಸರಕಾರವು ಪಿಎಂ-ಕಿಸಾನ್ ಯೋಜನೆಯ 9ನೇ ಕಂತಿನ 19,500 ಕೋಟಿ ರೂ.ಗಳಷ್ಟು ಹಣವನ್ನು ದೇಶದ 12 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ.
ಇದರ ಬೆನ್ನಲ್ಲಿಯೇ ರಾಜ್ಯ ಸರಕಾರವೂ ಪ್ರಸಕ್ತ ಸಾಲಿನ ಕಿಸಾನ್ ಸಮ್ಮಾನ್ ಯೋಜನೆಯಡಿ ಸೋಮವಾರ ಎರಡನೇ ಕಂತಿನಲ್ಲಿ 1,023 ಕೋಟಿ ರೂ.ಗಳನ್ನು ರಾಜ್ಯದ 51.19 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಿದೆ.
ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019 ಫೆಬ್ರವರಿ 1ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ಕೇಂದ್ರವು ವಾರ್ಷಿಕವಾಗಿ 6 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಈ ಅನುದಾನವನ್ನು 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ.
ಈವರೆಗೆ 55.06 ಲಕ್ಷ ರೈತ ಕುಟುಂಬಗಳು 1 ಕಂತು ಪಡೆಯುವ ಮೂಲಕ ಯೋಜನೆಯ ಲಾಭ ಪಡೆದಿದ್ದು, 2019ರ ಮಾರ್ಚ್ʼನಿಂದ ಜುಲೈ 2021 ರವರೆಗೆ ಕೇಂದ್ರದಿಂದ ಒಟ್ಟು 6940.07 ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ. 2021 ಪ್ರಸಕ್ತ ವರ್ಷದ ಎರಡನೇ ಕಂತಿನಲ್ಲಿ 51.19 ಲಕ್ಷ ರೈತರಿಗೆ 1023 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಅನುಮೋದಿಸಲ್ಪಟ್ಟ ರೈತರಿಗೆ ಎರಡು ಕಂತುಗಳಲ್ಲಿ ವರ್ಷಕ್ಕೆ 4 ಸಾವಿರ ರೂ.ನಂತೆ ಆರ್ಥಿಕ ನೆರವು ವರ್ಗಾವಣೆಗೆ ಆದೇಶ ಹೊರಡಿಸಲಾಗಿದ್ದು, ಇಲ್ಲಿಯವರೆಗೆ 2849.16 ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ.
ಆಧಾರ್ ಆಧಾರಿತ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತಿದ್ದು, ದೇಶದಲ್ಲಿ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರಿಂದ 2020-21 ರಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿಯೂ ದೊರೆತಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.