by GS Bharath Gudibande
ಚಿಕ್ಕಬಳ್ಳಾಪುರ: ಶೈಕ್ಷಣಿಕ ನಿರಂತರವಾಗಿ ವೈಫಲ್ಯಗಳನ್ನು ಕಾಣುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಪುಟಿದೆದ್ದಿದ್ದು, ಇಡೀ ರಾಜ್ಯವನ್ನೇ ಬೆರಗುಗೊಳಿಸುವ ಸಾಧನೆ ಮಾಡಿ ಮತ್ತೊಮ್ಮೆ ಮಿಂಚಿದೆ.
ಕಳೆದ ಜುಲೈ 19 ಮತ್ತು 22ರಂದು ನಡೆದ 2020-21ನೇ ಸಾಲಿನ SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ರಾಜ್ಯದ 157 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆಯವರೇ ಆಗಿದ್ದಾರೆ.
ಈ ಅತ್ಯುನ್ನತ ಶ್ರೇಯಾಂಕ ಗಳಿಸಿದ 30 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯಿಂದ ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜನರು ಹೆಮ್ಮೆಪಡುವಂತಾಗಿದೆ.
ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಜಿಲ್ಲೆ ಐತಿಹಾಸಿಕ ದಾಖಲೆ ಮಾಡಿತ್ತು. ಈ ವರ್ಷವೂ 625ಕ್ಕೆ 625 ಅಂಕ ಸ್ಕೋರ್ ಮಾಡಿದ ಹೆಚ್ಚು ವಿದ್ಯಾರ್ಥಿಗಳ ಜಿಲ್ಲೆಯಾಗಿ ಹೊರಹೊಮ್ಮಿದೆ. ಇನ್ನು, ನಮ್ಮ ನೆರೆಯ ಜಿಲ್ಲೆ ಕೋಲಾರವು ೨೦ನೇ ಸ್ಥಾನದಲ್ಲಿದ್ದು ಅಲ್ಲಿ ಇಬ್ಬರು ಮಕ್ಕಳು ಮಾತ್ರ 625ಕ್ಕೆ 625 ಅಂಕ ಗಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಪಾಸ್
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 15,848 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ರಾಜ್ಯದಲ್ಲಿ ಉತ್ತೀರ್ಣರಾದವರ ಪೈಕಿ 625ಕ್ಕೆ 625 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಯಾಂಕ ಗಳಿಸಿದ 157 ವಿದ್ಯಾರ್ಥಿಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 30 ವಿದ್ಯಾರ್ಥಿಗಳು ಅತಿಹೆಚ್ಚು ಸ್ಥಾನ ಕಾಯ್ದುಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಶೇ.19.10ರಷ್ಟು ವಿದ್ಯಾರ್ಥಿಗಳು ನಮ್ಮ ಜಿಲ್ಲೆಯವರೇ ಆಗಿರುವುದು ಸಂತಸ ತಂದಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಉತ್ತರ, ಉಡುಪಿ, ಮಂಗಳೂರು, ಹಾಸನ ಜಿಲ್ಲೆಗಳು ಕ್ರಮವಾಗಿ ಟಾಪ್ ೫ ಸ್ಥಾನಗಳನ್ನು ಹೊಂದಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಒಟ್ಟಾರೆ ಫಲಿತಾಂಶದ ಗ್ರೇಡ್ ಪಟ್ಟಿ
ಇನ್ನು ಒಟ್ಟಾರೆ ಫಲಿತಾಂಶದಲ್ಲಿ ಜಿಲ್ಲೆ ʼಎʼಗ್ರೇಡ್ ಬಂದಿದ್ದು, ರಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿವೆ.
ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ
ಕಳೆದ ಎರಡು ವರ್ಷಗಳಿಂದ SSLC ಫಲಿತಾಂಶದಲ್ಲಿ ಮಹತ್ತರ ಬದಲಾವಣೆ, ಪ್ರಗತಿ ಆಗಿರುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜನ ಪ್ರತಿನಿದಿನಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಗ್ಗೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಜಿಲ್ಲಾಧಿಕಾರಿ ಆರ್.ಲತಾ ಅವರು ಫಲಿತಾಂಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಶುಭ ಹಾರೈಸಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ