ಬೆಂಗಳೂರು/ಬಾಗಲಕೋಟೆ: 2020-21ನೇ ಸಾಲಿನ sslc ಪರೀಕ್ಷೆಯಲ್ಲಿ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲಿನ ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಈ ಸುದ್ದಿ ತಮಗೆ ಗೊತ್ತಾಗುತ್ತಿದ್ದಂತೆ ಸಂತಸಗೊಂಡು ಆ ವಿದ್ಯಾರ್ಥಿಯನ್ನು ಅಭಿನಂದಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಸದ ಬೆನ್ನಲ್ಲೇ ತೀವ್ರ ಬೇಸರಕ್ಕೆ ಗುರಿಯಾದ ಪ್ರಸಂಗವೂ ನಡೆಯಿತು.
ಕಾರಣ ಇಷ್ಟೇ; ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆಗೆ ಗರಿ ಮೂಡಿಸಿದ ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವುದು ಮಾಧ್ಯಮ ಪ್ರತಿನಿಧಿಯೊಬ್ಬರ ಮೂಲಕ ತಿಳಿದು ತೀವ್ರ ದಿಗ್ಭ್ರಮೆಗೊಂಡ ಸಚಿವರು, ಕೂಡಲೇ ಬಾಲಕಿಯ ನೆರವಿಗೆ ಧಾವಿಸಿದ್ದಾರೆ.
ಅವರ ಪೋಷಕರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ಕಾರಜೋಳರು, ಬಾಲಕಿಗೆ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ ಇರುವುದನ್ನು ಧೃಡಪಡಿಸಿಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದರು. ತಕ್ಷಣವೇ ಬಾಲಕಿಯನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ತಡ ಮಾಡದೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಾಲಕಿಯ ಪೋಷಕರ ಜತೆ ಮಾತನಾಡಿದ ಕಾರಜೋಳರು, “ನಿಮ್ಮ ಮಗಳು ಬುದ್ಧಿವಂತೆ ಇದಾಳ. ಆಕೆ 625ಕ್ಕೆ 625 ಅಂಕ ಪಡೆದದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಆಕೆಯ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಡಿ. ನಾವಿದ್ದೇವೆ. ನಾನು ಈಗಾಗಲೇ ಡಿಎಚ್‌ಓ ಜತೆ ಮಾತನಾಡಿದ್ದೇನೆ. ಅವರು ನಾಳೆ ಬೆಳಗ್ಗೆ ನಿಮ್ಮ ಮನೆಗೆ ಬರಲಿದ್ದಾರೆ, ಅಥವಾ ಹಿಂದೆ ಚಿಕಿತ್ಸೆ ಕೊಡಿಸಿದ ಕಾಗದ ಪತ್ರಗಳನ್ನು ತೆಗೆದುಕೊಂಡು ನೀವೆ ನಾಳೆಯೇ ಜಿಲ್ಲಾಸ್ಪತ್ರೆಗೆ ಹೋಗಿ ಡಿಎಚ್‌ಓ ಅವರನ್ನು ಭೇಟಿ ಮಾಡಿ. ಅಲ್ಲಿ ತಪಾಸಣೆ ಮಾಡುವವರಿದ್ದಾರೆ. ನಂತರ ಬೆಂಗಳೂರಿನಲ್ಲಿ ಒಳ್ಳೆಯ ಚಿಕಿತ್ಸೆ ಮಾಡಿಸೋಣ” ಎಂದು ಹೇಳಿದ್ದಾರೆ.
ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರ ಜತೆ ಮಾತನಾಡಿ ನಿಮ್ಮ ಮಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸುವುದಾಗಿ ಅವರು ಪೋಷಕರಿಗೆ ತಿಳಿಸಿದ್ದಾರೆ.
ಬಳಿಕ, ಬಾಲಕಿ ಗಂಗಮ್ಮ ಜತೆಯೂ ಮಾತನಾಡಿದ ಸಚಿವರು, “ಒಳ್ಳೆಯ ಅಂಕ ತೆಗೆದು ಸಾಧನೆ ಮಾಡಿದ್ದು ಸಂತೋಷ ಉಂಟು ಮಾಡಿದೆ ಎಂದರಲ್ಲದೆ, ಮುಂದೇನು ಓದಬೇಕೂಂತ ಇದ್ದಿ ಅಂತ ಕೇಳಿದಾಗ ಆ ಬಾಲಕಿ ಕಾಮರ್ಸ್ ಓದುವೆ ಎಂದು ಉತ್ತರಿಸಿದ್ದಾಳೆ. ಸಚಿವರು ಬಹಳ ಸಂತಸಪಟ್ಟರಲ್ಲದೆ, ವಿದ್ಯಾಭ್ಯಾಸಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದರು.