ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ & ಕೋಲಾರದಲ್ಲಿ ಮುನಿರತ್ನ ಅವರಿಂದ ಧ್ವಜಾರೋಹಣ
ಬೆಂಗಳೂರು: ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಉದ್ದೇಶದಿಂದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿರುವುದು ಸರಿಯಷ್ಟೇ.
ಈ ಸಚಿವರೇ ಎಲ್ಲ ಜಿಲ್ಲೆಗಳಲ್ಲೂ ಅಗಸ್ಟ್ 15ರಂದು ನಡೆಯಲಿರುವ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ಮಾಡಲಿದ್ದಾರೆ. ಅದಕ್ಕೆ ಸಂಬಂಧಪಟ್ಟ ಆದೇಶವನ್ನು ಸರಕಾರ ಮಂಗಳವಾರ ಹೊರಡಿಸಿದೆ.
ಆದರೆ, ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ನೇರ ಉಸ್ತುವಾರಿ ಸಚಿವರಿಲ್ಲ. ಎಸ್.ಟಿ.ಸೋಮಶೇಖರ್ ಅವರಿಗೆ ಹೆಚ್ಚುವರಿಯಾಗಿ ಚಾಮರಾಜನಗರ ಜಿಲ್ಲೆಯನ್ನು ಹಾಗೂ ಆನಂದ್ ಸಿಂಗ್ ಅವರಿಗೆ ವಿಜಯನಗರದ ಜತೆ ಬಳ್ಳಾರಿ ಜಿಲ್ಲೆಯನ್ನು ಹೆಚ್ಚುವರಿಯಾಗಿ ಉಸ್ತುವಾರಿ ಕೊಡಲಾಗಿದೆ. ಇವರಿಬ್ಬರು ಕ್ರಮವಾಗಿ ಮೈಸೂರು, ವಿಜಯನಗರದಲ್ಲೇ ಧ್ವಜಾರೋಹಣ ಮಾಡಲಿದ್ದಾರೆ.
ಈಗ ಬಳ್ಳಾರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರೇ ಇಲ್ಲ. ನಿಯೋಜನೆ ಮಾಡಲು ಹೆಚ್ಚುವರಿ ಸಚಿವರೂ ಇಲ್ಲ. ಹೀಗಾಗಿ ಆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು, ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಬಳ್ಳಾರಿಯ ಶ್ರೀರಾಮುಲು ಅವರು ಪಕ್ಕದ ಜಿಲ್ಲೆ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಗೆದಿದ್ದು, ತಾಂತ್ರಿಕವಾಗಿ ಅವರು ಚಿತ್ರದುರ್ಗ ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡಲಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರವನ್ನು ಪ್ರತಿನಿಧಿಸುವ ತೋಟಗಾರಿಕೆ, ಯೋಜನೆ & ಸಾಂಖಿಕ ಖಾತೆ ಸಚಿವ ಮುನಿರತ್ನ ಅವರು ಧ್ವಜಾರೋಹಣ ನೆರೆವೇರಿಸಲಿದ್ದಾರೆ.
13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೋಲಾರ ಸೇರಿದಂತೆ ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಯಾದಗಿರಿ, ಚಿಕ್ಕಮಗಳೂರು 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಆ ಜಿಲ್ಲೆಗಳಿಗೆ ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.