ಗುಡಿಬಂಡೆಯಲ್ಲಿ ಮನೆ, ಅಂಗಡಿ ಕಳೆದುಕೊಂಡ 316 ಜನರ ಸ್ಥಿತಿ ಅಯೋಮಯ
by GS Bharath Gudibande
ಗುಡಿಬಂಡೆ: ಪಟ್ಟಣದ ಜೀವನಾಡಿಯಾಗಿದ್ದ ಮುಖ್ಯರಸ್ತೆಯ ಅಗಲೀಕರಣದಿಂದ ಜಾಗ, ಮನೆಗಳನ್ನು ಕಳೆದುಕೊಂಡ ಗುಡಿಬಂಡೆ ಜನರಿಗೆ ಆರು ವರ್ಷಗಳೇ ಕಳೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ.
2015ರಲ್ಲಿ ರಾಜ್ಯ ಹೆದ್ದಾರಿ 94ರ ಮುಖ್ಯರಸ್ತೆಯ ಅಗಲೀಕರಣ ಮಾಡಲಾಗಿತ್ತು. ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡದೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ತೋರುತ್ತಿರುವುದು ಪಟ್ಟಣವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ, ಪಟ್ಟಣದ ಜನಪ್ರತಿನಿಧಿಗಳು ಕೂಡ ಮೂಕ ಪ್ರೇಕ್ಷಕರಾಗಿದ್ದು, ಮನೆಗಳನ್ನು ಕಳೆದುಕೊಂಡವರ ಪಾಡು ಅವರ ಮುಂದೆ ಮೂಕ ರೋಧನವಾಗಿದೆ.
ಮನೆ ಕಳೆದುಕೊಂಡ ಸಂತ್ರಸ್ತರ ಪರ ಸ್ವತಃ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರೇ ಸದನದಲ್ಲಿ ಪ್ರಸ್ತಾಪ ಮಾಡಿ ಬೇಡಿಕೆ ಇಟ್ಟಿದ್ದರೂ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಶಾಸಕರ ಸೂಚನೆಗೂ ಕಿಮ್ಮತ್ತು ನೀಡದ ಅಧಿಕಾರಿಗಳು ಪರಿಹಾರ ನೀಡುವಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.
ರಾಜ್ಯದಲ್ಲೇ ತೀರಾ ತಾಲೂಕು ಆಗಿರುವ ಗುಡಿಬಂಡೆ ಪಟ್ಟಣದಲ್ಲಿ ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ವಿಪರೀತ ಎನ್ನುವಷ್ಟು ಇದ್ದು, ಈಗ ಕೋವಿಡ್ ಕೂಡ ಸೇರಿಕೊಂಡು ಜನರ ಬವಣೆಯ ಮೇಲೆ ಬಿಸಿತುಪ್ಪ ಸುರಿದಂತೆ ಆಗಿದೆ. ರಸ್ತೆ ಅಗಲೀಕರಣದಿಂದ ಮನೆಗಳನ್ನು ಕಳೆದುಕೊಂಡವರಿಗೆ ಬದಲಿ ನಿವೇಶನ ನೀಡುತ್ತೇವೆ ಎಂದು ಹೇಳಿದ್ದವರು ಈಗ ಪತ್ತೆ ಇಲ್ಲ. ಇಷ್ಟು ದಿನವಾದರೂ ಕನಿಷ್ಠ ಪರಿಹಾರವನ್ನೂ ನೀಡಿಲ್ಲ ಎಂದು ಸಂತ್ರಸ್ತರು ನೋವು ವ್ಯಕ್ತಪಡಿಸಿದ್ದಾರೆ.
ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಹಿಡಿಶಾಪ
2015ರಲ್ಲಿ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 94ರ ಮುಖ್ಯರಸ್ತೆ ಅಗಲೀಕರಣ ಮಾಡಲಾಯಿತು. ಈ ಸಂದರ್ಭದಲ್ಲಿ 316 ಅಂಗಡಿ ಮತ್ತು ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಯಿತು. ಇಡೀ ಪಟ್ಟಣವಷ್ಟೇ ಅಲ್ಲದೆ, ಪೂರ ತಾಲೂಕಿಗೇ ಪ್ರಮುಖ, ಏಕೈಕ ವಾಣಿಜ್ಯ ಜಾಗವೂ ಆಗಿತ್ತಲ್ಲದೆ ಅನೇಕರಿಗೆ ಸಂಪಾದನೆಯ ಮಾರ್ಗವಾಗಿ ಬದುಕಿನ ಜೀವನಾಡಿಯೂ ಆಗಿತ್ತು. ಈಗ ಅಷ್ಟೂ ಜನರು ಇದ್ದ ಮನೆ, ಅಂಗಡಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಸ್ತೆ ಅಗಲೀಕರಣ ಮಾಡುವ ತನಕ ಕಾಲಮಿತಿಯೊಳಗೆ ಪರಿಹಾರ ನೀಡಿ ಬದಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದ ಜಿಲ್ಲಾಡಳಿತ, ಅಗಲೀಕರಣದ ಕಾಮಗಾರಿ ಮುಗಿಯುತ್ತಿದ್ದಂತೆ ವಿಷಯವನ್ನೇ ಮರೆತುಹೋಗಿದೆ. ಇನ್ನು ತಾಲೂಕು ಆಡಳಿತ ಜಿಲ್ಲಾಡಳಿತದತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಉಳಿದಂತೆ ಪಟ್ಟಣ ಪಂಚಾಯತಿ ಆಡಳಿತವಾಗಲಿ ಇಲ್ಲವೇ ಅಲ್ಲಿನ ಜನಪ್ರತಿನಿಧಿಗಳಾಗಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸುತ್ತಿಲ್ಲ. ಆರು ವರ್ಷಗಳಾದರೂ ಈ ಬಗ್ಗೆ ಕ್ರಮ ಕೈಗೊಳ್ಳಲದ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಮುಖ್ಯರಸ್ತೆ ಅಗಲೀಕರಣಕ್ಕಾಗಿ 2016ರಲ್ಲಿ ಕಟ್ಟಡ ತೆರವುಮಾಡಿದ ದೃಶ್ಯ. / ಸಂಗ್ರಹ ಚಿತ್ರ
ವಿಧಾನಸಭೆಯಲ್ಲೂ ಪ್ರಸ್ತಾವ
ರಸ್ತೆ ಅಗಲೀಕರಣದ ವೇಳೆ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ನೀಡಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗಂಭೀರ ಪ್ರಯತ್ನ ಮಾಡಿದ್ದರು. ಕೂಡಲೇ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಬದಲಿ ನಿವೇಶನ ನೀಡಬೇಕ ಹಾಗೂ ಈ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಸರಕಾರವನ್ನು ಒತ್ತಾಯ ಮಾಡಿದ್ದರು. ಅವರ ಒತ್ತಾಯಕ್ಕೂ ಸರಕಾರವಾಗಲಿ, ಜಿಲ್ಲಾಡಳಿತವಾಗಲಿ ಮಣಿದಿಲ್ಲ.
ಕಟ್ಟಡ ತೆರವುಗೊಳಿಸಲು ನೀಡಲಾಗಿದ್ದ ನೊಟೀಸ್.
ವಾಬಸಂದ್ರ, ಬ್ರಾಹ್ಮಣರಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಸ್ಥಳಗಳಲ್ಲಿ ಬದಲಿ ನಿವೇಶನಗಳನ್ನು ಗುರುತಿಸಿದ್ದರು ಶಾಸಕರು. ಆದರೆ, ಕೆಲ ಕಾರಣಗಳನ್ನು ಮುಂದಿಟ್ಟು ಆ ಪ್ರಸ್ತಾವನೆಗೂ ಜಿಲ್ಲಾಡಳಿತ ಎಳ್ಳೂನೀರು ಬಿಟ್ಟಿತ್ತು.
ಯಾರು ಏನಂತಾರೆ?
ರಸ್ತೆ ಅಗಲೀಕರಣದ ವೇಳೆ ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡವರಿಗೆ ನಿವೇಶ ನೀಡಲು ಶಾಸಕರ ಸೂಚನೆಯ ಮೆರೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿ ಸ್ಥಳ ಗುರುತಿಸಲಾಗಿದೆ. ಹಕ್ಕು ಪತ್ರಗಳು ಸಿದ್ದವಾದ ತಕ್ಷಣ ವಿತರಿಸಲಾಗುವುದು.
ರಾಜಶೇಖರ್, ಮುಖ್ಯಾಧಿಕಾರಿ, ಗುಡಿಬಂಡೆ ಪಟ್ಟಣ ಪಂಚಾಯಿತಿ
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣ ಮಾಡಿ 6 ವರ್ಷಗಳೇ ಕಳೆದಿವೆ. ಇದುವರೆಗೂ ಪರಿಹಾರವೂ ಇಲ್ಲ, ನಿವೇಶನವೂ ಇಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇನ್ನಾದರೂ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ಜಿ.ವಿ.ಗೋಪಿ, ಗುಡಿಬಂಡೆ ನಿವಾಸಿ
ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಮ್ಮ ಮನೆಗಳನ್ನು ತೆರವುಗೊಳಿಸಿದ್ದಾರೆ. ನಂತರ ನಮಗೆ ನಿವೇಶನ ನೀಡುತ್ತೇವೆಂದು ಹೇಳಿದ್ದರು. 6 ವರ್ಷಗಳಿಂದ ನಾವು ಬಾಡಿಗೆ ಮನೆಯಲ್ಲಿದ್ದೇವೆ. ರಸ್ತೆ ಅಗಲೀಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ದಾಖಲೆಗಳು ಇಲ್ಲ. ನಮಗೆ ಸೂಕ್ತ ಪರಿಹಾರ ಕುಡಲು ಶಾಸಕರು ಕ್ರಮ ವಹಿಸಬೇಕು.
ಪಣೀಂದ್ರ ಶೆಟ್ಟಿ, ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡ ವ್ಯಕ್ತಿ