ಹುಬ್ಬಳ್ಳಿ: ಪಕ್ಷದೊಳಗೆ ಯಾರೂ ನನ್ನನ್ನು ಚಿವುಟಿಲ್ಲ. ಯಾರಾದರೂ ಚಿವುಟಲು ಬಂದರೆ ಕಪಾಳಕ್ಕೆ ಹೊಡೆಯುವ ಮಗ ನಾನು. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರು. ಅವರಿಗೆ ವಿರುದ್ಧವಾಗಿದ್ದಕ್ಕೆ ನಾನು ಸಚಿವನಾಗಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ್ ಹೇಳಿದರು.
ಹುಬ್ಬಳ್ಳಿಯಲ್ಲಿ ಯತ್ನಾಳ್ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದರು. “ನನ್ನ ನಾಲಿಗೆ ಸರಿ ಇಲ್ಲ. ಅದಕ್ಕಾಗಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲವರು ಹೇಳುತ್ತಾರೆ. ನಾಲಿಗೆ ಸರಿ ಇದ್ದಿದ್ದಕ್ಕಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿವೆ” ಎಂದರು ಅವರು.
ಯಡಿಯೂರಪ್ಪ ಅವರ ಷರತ್ತು ಮತ್ತು ಒತ್ತಡವೇ ಬೊಮ್ಮಾಯಿ ಸಿಎಂ ಆಗಲು ಮಾನದಂಡ. ಹಾಗಂತ ಅವರು, ಬಿಎಸ್‌ವೈ ನೆರಳು ಎಂದು ನಿರ್ಣಯಿಸಲಾಗದು. ನಾಯಕ ವೈಯಕ್ತಿಕ ಛಾಪು ಇಟ್ಟುಕೊಳ್ಳಬೇಕು. ಬೊಮ್ಮಾಯಿ ಬದಲಾಗಲೇಬೇಕು. ಮೇಲಿನವರ ಮಾತು ಕೇಳಲೇಬೇಕು. ಅದರ ಭಾಗವಾಗಿಯೇ ಯಡಿಯೂರಪ್ಪ ಅವರು ಇದ್ದಾಗಿನ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಖಾತೆ ಬದಲಾಯಿಸಿ ಹಾಗೂ ನಮ್ಮವರನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬಾರದು. ರಾಜ್ಯದಲ್ಲಿ ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳಿವೆ. ಹಿಂದಿನ ಸಿಎಂ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಕೊಡುತ್ತೇನೆ ಎಂದು, ₹1 ಲಕ್ಷ ಕೊಟ್ಟು ಕೈ ತೊಳೆದುಕೊಂಡರು. ಇವುಗಳ ಹಿಂದಿರುವ ಸೂತ್ರದಾರರು ಮಗು ಚಿವುಟಿ, ತೊಟ್ಟಿಲನ್ನೂ ತೂಗುತ್ತಾರೆ. ಬಳಿಕ, ಅರವಿಂದ ಬೆಲ್ಲದ ಮತ್ತು ನನ್ನತ್ತ ಕೈ ತೋರಿಸುತ್ತಾರೆ. ರಮೇಶ ಜಾರಕಿಹೊಳಿ ಅವರನ್ನೂ ಹೀಗೆಯೇ ಸಿಲುಕಿಸಿದರು ಎಂದು ಪ್ರಶ್ನೆಯೊಂದಕ್ಕೆ ಯತ್ನಾಳ್ ಪ್ರತಿ ಕ್ರಿಯಿಸಿದರು.