ಸ್ವಾತಂತ್ರ್ಯದಿನಾಚರಣೆಯ ಅಮೃತ ಮಹೋತ್ಸವದ ಮೇಲೆ ಸೋಂಕಿನ ಕರಿ ನೆರಳು
by GS Bharath Gudibande
ಗುಡಿಬಂಡೆ: ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಬಹದೊಡ್ಡ ಮೈಲುಗಲ್ಲಾಗಬೇಕಿದ್ದ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಮಂಕಾಗಿದೆ. ಮಕ್ಕಳ ಕಲರವದೊಂದಿಗೆ ಅಂಬರ ಮುಟ್ಟುವಂತೆ ಭಾರೀ ಸಂಭ್ರದಂತೆ ನಡೆಯಬೇಕಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನುಭಾವರ ಸ್ಮರಣೆ, ಅವರ ಹೋರಾಟದ ಕಥೆ, ದೇಶಭಕ್ತಿ ಗೀತೆ, ಸ್ವಾತಂತ್ರ್ಯದ ಸಂಭ್ರಮ ಚಿತ್ರಗಳು, ವೇಷಗಳು ಇತ್ಯಾದಿಗಳೆಲ್ಲ ಮೇಳೈಸಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಳೆಗಟ್ಟಬೇಕಾಗಿದ್ದ ಸ್ವಾತಂತ್ರೋತ್ಸವ ಮಾರಕ ವೈರಸ್‌ನಿಂದ ಕಳಾಹೀನಾವಾಗಿದ್ದು, ಸ್ವತಃ ಮಕ್ಕಳಿಗೂ ಬೇಸರ ಉಂಟು ಮಾಡಿದೆ.
ಪ್ರತೀ ವರ್ಷದ ಅಗಸ್ಟ್ 15 ಮಕ್ಕಳಿಗೆ ಮಾತ್ರವಲ್ಲ, ಇಡೀ ತಾಲೂಕಿನ ದೊಡ್ಡ ಹಬ್ಬವಾಗುತ್ತಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಮಕ್ಕಳಲ್ಲಿ ದೇಶಭಕ್ತಿ ತುಂಬಿಸಿ, ಭಾವುಟ-ಬ್ಯಾಂಡ್‌ಗಳೊಂದಿಗೆ ಪಟ್ಟಣದ ಏಕೈಕ ಮುಖ್ಯರಸ್ತೆಯಲ್ಲಿ, ವಿವಿಧ ಶಾಲೆಗಳ ಆವರಣಗಳಲ್ಲಿ ನಡೆಯುತ್ತಿದ್ದ ಭಾವಪೂರ್ಣ ಸಂಭ್ರಮ ಈ ವರ್ಷ ಇರುವುದಿಲ್ಲ. ಅದರಲ್ಲೂ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಪಥಸಂಚಲನ, ವಿದ್ಯಾರ್ಥಿಗಳಿ ಶಿಸ್ತಿನ ಹೆಜ್ಜೆಗಳ ಸಪ್ಪಳ, ಬ್ಯಾಂಡಿನ ಸದ್ದು, ಭಾರತ್ ಮಾತಾಕಿ ಜೈ ಎನ್ನುವ ಘೋಷಣೆ ಬಹುದೊಡ್ಡ ಆಕರ್ಷಣೆಯಾಗುತ್ತಿತ್ತು.
ಆದರೆ, ಈ ವರ್ಷದ 15ಕ್ಕೆ ಅಂಥ ಯಾವ ಸಂಭ್ರಮವೂ ಇರುವುದಿಲ್ಲ. ಕೋವಿಡ್ ಭಯದ ಕಾರಣ ಮಕ್ಕಳಿಲ್ಲದೆ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಸ್ವಾತಂತ್ರ್ಯೋತ್ಸವ ಸೀಮಿತಗೊಳ್ಳುತ್ತಿರುವುದು ಪುಟಾಣಿಗಳಿಗೆ ನಿರಾಶೆ ಉಂಟು ಮಾಡಿದೆ. ತಾಲೂಕು ಆಡಳಿತ ಆಯೋಜಿಸುವ ಕಾರ್ಯಕ್ರಮವು ಕೇವಲ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಪಾಲ್ಗೊಳ್ಳುವಿಕೆಯಿಂದ ನಡೆಯಲಿದೆ.
ಕಾಣದಂತೆ ಮಾಯವಾದ ಸಂಭ್ರಮ
ರಾಷ್ಟ್ರೀಯ ಹಬ್ಬಗಳು ಅಂದರೆ ಮಕ್ಕಳಿಗೆ ಇನ್ನಿಲ್ಲದ ಸಂಭ್ರಮ. ಅಗಸ್ಟ್ 15 ಇನ್ನೂ ಒಂದು ವಾರವಿದೆ ಎನ್ನುವಷ್ಟರಲ್ಲಿ ತಮ್ಮ ಪೋಷಕರೊಂದಿಗೆ ಪಟ್ಟಣದ ಮುಖ್ಯರಸ್ತೆಯ ಅಂಗಡಿಗಳಿಗೆ ಲಗ್ಗೆ ಹಾಕುತ್ತಿದ್ದ ಚಿಣ್ಣರು ತಿರಂಗ, ಬಾವುಟದ ಬ್ಯಾಡ್ಜ್, ಮೂರು ಬಣ್ಣಗಳ ಕೈ ರಿಬ್ಬನ್, ಜಡೆ ರಿಬ್ಬನ್, ಕ್ಯಾಪ್ ಇತ್ಯಾದಿಗಳನ್ನು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಅಂಥ ಯಾವ ದೃಶ್ಯವೂ ಕಂಡು ಬರುತ್ತಿಲ್ಲ. ಸೋಂಕಿನ ಭಯಕ್ಕೆ ಮಕ್ಕಳೂ ಬಜಾರಿನ ಕಡೆ ಮುಖ ಹಾಕುತ್ತಿಲ್ಲ, ಶಾಪಿಂಗ್ ಕಳಾಹೀನವಾಗಿದ್ದು, ಅಂಗಡಿಗಳ ಮಾಲೀಕರು ದಿಕ್ಕುತೋಚದಂತಾಗಿದ್ದಾರೆ.
ಕೋವಿಡ್ʼನಿಂದ ಈ ವರ್ಷ ಶಾಲೆ-ಕಾಲೇಜುಗಳು ಆರಂಭವಾಗಿಲ್ಲ. ಈ ತಿಂಗಳ 23ಕ್ಕೆ ಆರಂಭವಾಗುತ್ತವೆ ಎಂದು ಮುಖ್ಯಮಂತ್ರಿ ಹೇಳಿದ್ದಾರಾದರೂ, ಅದರ ಬಗ್ಗೆ ಇನ್ನೂ ಖಾತರಿ ಇಲ್ಲ. ಪ್ರತೀ ವರ್ಷ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಆಚರಿಸಲಾಗುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಆಯಾ ಶಾಲಾ-ಕಾಲೇಜುಗಳಲ್ಲಿ ಸಿಬ್ಬಂದಿ ತಿರಂಗ ಹಾರಿಸಿ, ರಾಷ್ಟ್ರಗೀತೆ ಹಾಡುವುದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗಾಗಲೇ ಸರಕಾರ ಎಲ್ಲ ಜಿಲ್ಲೆಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಯಾವುದೇ ಕಾರಣಕ್ಕೂ ಕೊವಿಡ್ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಶಿಕ್ಷಣ ಸಂಸ್ಥೆಗಳಿಗೆ, ತಾಲೂಕು ಮತ್ತು ಜಿಲ್ಲಾಡಳಿತಗಳಿಗೆ ತಾಕೀತು ಮಾಡಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ, ತಾಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ದರಿಸಿದ್ದು, ಪಟ್ಟಣದ ಪ್ರೌಢಶಾಲೆ ಆವರಣದ ಕೊಠಡಿಯಲ್ಲಿ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ʼಗೆ ಸನ್ಮಾನ ಸೇರಿ ಇತರೆ ಕೆಲ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ ಅವರು ತಿಳಿಸಿದರು.
ಶಾಲೆಗಳು ಇನ್ನು ಆರಂಭವಾಗದ ಕಾರಣ, ಸ್ನೇಹಿತರೆಲ್ಲ ಒಂದು ಕಡೆ ಸೇರಿ ಕಾರ್ಯಕ್ರಮ ವೀಕ್ಷಣೆ, ಬಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇತರೆ ಟೀವಿಯಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡುತ್ತೇವೆ. ಈ ವರ್ಷ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾವೆಲ್ಲ ಪಾಲ್ಗೊಳ್ಳದೇ ಇರುವುದಕ್ಕೆ ಬೇಸರವಾಗಿದೆ.
ಸಾಯಿ ವಿವೇಕ್, ವಿದ್ಯಾರ್ಥಿ ಗುಡಿಬಂಡೆ
ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಬರುತ್ತದೆ ಅಂದರೆ ಕಾರ್ಯಕ್ರಗಳಿಗೆ ಮಕ್ಕಳ ತಯಾರಿ, ತ್ರಿವರ್ಣ ಧ್ವಜ, ಟೋಪಿ, ಬ್ಯಾಂಡ್ ಹೀಗೆ ವ್ಯಾಪಾರವನ್ನು ಭರ್ಜರಿಯಾಗಿ ಮಾಡುತ್ತಿದ್ದರು, ಆದರೆ, ಈ ಭಾರಿ ಮಕ್ಕಳಿಲ್ಲದೆ ಕಾರ್ಯಕ್ರಮಕ್ಕೆ ಮೆರುಗು ಇಲ್ಲದಂತಾಗಿದೆ. ಕೋವಿಡ್‌ನಿಂದ ರಾಷ್ಟ್ರ ಹಬ್ಬದ ಸಡಗರಕ್ಕೂ ಅಡ್ಡಿಯಾಗಿದ್ದರೆ, ವ್ಯಾಪಾರಿಗಳ ಬದುಕಿಗೂ ಹೊಡೆತ ಬಿದ್ದಿದೆ.
ವೆಂಕಟೇಶ್, ಧರಣಿ ಸ್ಟೋರ್ಸ್ ಮಾಲೀಕ, ಗುಡಿಬಂಡೆ