ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ಬಿಚ್ಚಿಟ್ಟ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರು ಮತ್ತು ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಕನಸು ಬಿಚ್ಚಿಟ್ಟ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲೆಯ ಈವರೆಗಿನ ಅಭಿವೃದ್ಧಿಯ ಹಿನ್ನೋಟ-ಮುನ್ನೋಟವನ್ನು ಬಿಚ್ಚಿಟ್ಟರು.
ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಪಡಿಸುವುದರ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕೇಂದ್ರವನ್ನಾಗಿ ರೂಪಿಸಬೇಕೆಂಬ ಕನಸಿದ್ದು, ಅದರಂತೆ ಜಿಲ್ಲೆಯ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೫ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸಾಕಷ್ಟು ಅವಕಾಶಗಳಿವೆ. ಈ ದಿಸೆಯಲ್ಲಿ ಹಲವು ರೀತಿಯ ಕೈಗಾರಿಕಾಭಿವೃದ್ಧಿಗೆ ಉತ್ತೇಜನ ನೀಡಲು ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಇತ್ತೀಚಿಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ ಸುಮಾರು ೬೧೦ ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರದ ಅರೂರು ಬಳಿ ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಕಾಮಗಾರಿ ಶೇ.೬೦ರಷ್ಟು ಪೂರ್ಣಗೊಂಡಿದೆ. ಮುಂದಿನ ವರ್ಷದ ಅಗಸ್ಟ್ ೧೫ರೊಳಗೆ ಕಾಮಗಾರಿ ಮುಗಿದು ಕಾಲೇಜು ಸೇವೆಗೆ ಮುಕ್ತವಾಗಲಿದೆ ಎಂದರು ಅವರು.
ಶೀಡ್ಲಘಟ್ಟದ ಅಮರಾವತಿ ಬಳಿ ಉತ್ತರ ವಿಶ್ವವಿದ್ಯಾಲಯ ಸ್ಫಾಪನೆಗೆ ೧೭೫ ಎಕರೆ ಜಮೀನು ಗುರುತಿಸಲಾಗಿದ್ದು, ಇದರಲ್ಲಿ ೧೧೦ ಎಕರೆ ಜಮೀನನ್ನು ವಿವಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ. ಉಳಿದ ಜಮೀನು ರೈತರಿಂದ ಭೂಸ್ವಾದೀನ ಪ್ರಕ್ರಿಯೆ ನಡೆಸಿದ್ದು, ಈ ವಿವಿಯಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಇತರೆ ಜಿಲ್ಲೆಗಳ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಚಿಂತಾಮಣಿ ತಾಲೂಕು ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ೨ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ೪೧೪-೨೫ ಮತ್ತು ೩ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ೧೪೮೯ ಎಕರೆ ವಿಸ್ತೀರ್ಣದ ಜಮೀನನನ್ನು ಗುರುತಿಸಲಾಗಿದ್ದು, ಕೆಐಎಡಿಬಿ ವತಿಯಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಗೌರಿಬಿದನೂರು ತಾಲೂಕು ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ೩ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ೮೩೯ ಎಕರೆ ವಿಸ್ತೀರ್ಣದ ಜಮೀನನ್ನು ಗುರುತಿಸಿದ್ದು, ಕೆಐಎಡಿಬಿ ವತಿಯಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಕೇಂದ್ರವಾಗಿ ೧೪ ವರ್ಷ
ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ೧೪ ವರ್ಷ ಪೂರೈಸಿದೆ. ಇಬ್ಬರು ಭಾರತರತ್ನಗಳಾದ ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್ ರಾವ್ ಅವರು ಜಿಲ್ಲೆಯ ಕೀರ್ತಿಕಲಶವಾಗಿದ್ದು, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರು ಕೂಡ ನಮ್ಮ ಜಿಲ್ಲೆಯ ಹೆಮ್ಮೆ. ಅವರ ನೆನಪಿಗಾಗಿ ಗೌರಿಬಿದನೂರಿನ ಹೊಸೂರಿನಲ್ಲಿ ಸರಕಾರದಿಂದ ೧೦ ಕೋಟಿ ರೂ. ವೆಚ್ಚದಲ್ಲಿ ಅಂತಾರರಾಷ್ಟ್ರೀಯ ವಿಜ್ಣಾನ ಕೇಂದ್ರ ಅಂತರಾಷ್ಡ್ರೀಯ ವಿಜ್ಞಾನ ಕೇಂದ್ರವು ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಇಲ್ಲಿನ ವಿಧುರಾಶ್ವತ್ಥವು ಅತ್ಯಂತ ಮಹತ್ವದವಾದ ಕ್ಷೇತ್ರವಾಗಿದ್ದು, ಇಲ್ಲಿ ರಾಜ್ಯ ಮಟ್ಟದ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವಕ್ಕೆ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಈ ಹಿಂದಿನ ರಾಜ್ಯಪಾಲರಾದ ವಜುಬಾಯ್ ವಾಲಾ ಅವರು ಚಾಲನೆ ನೀಡಿದ್ದರು. ಇದು ಜಿಲ್ಲೆಗೆ ಮತ್ತೊಂದು ಗೌರವವಾಗಿದೆ ಎಂದರು ಅವರು.
ಜಿಲ್ಲೆಯಲ್ಲಿ ಅನೇಕ ಪುಣ್ಯಕ್ಷೇತ್ರಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳಿವೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳಲ್ಲಿ ಸರಿಸುಮಾರು ೧,೮೦೦ಕ್ಕೂ ಅಧಿಕ ಕೆರೆಗಳಿವೆ. ಎರಡೂ ಜಿಲ್ಲೆಗಳಲ್ಲಿ ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ಕೋಲಾರಕ್ಕೆ ಕೆ.ಸಿ.ವ್ಯಾಲಿ ಹಾಗೂ ಚಿಕ್ಕಬಳ್ಳಾಪುರಕ್ಕೆ ಎಚ್.ಎನ್.ವ್ಯಾಲಿ ಯೋಜನೆಗಳನ್ನು ರೂಪಿಸಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದಲ್ಲದೆ, ಹೊಸದಾಗಿ ವೃಷಭಾವತಿ ಯೋಜನೆ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸಲು ಚಿಂತನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಗೌರಿಬಿದನೂರು, ಮಂಚೇನಹಲ್ಲಿ ಮತ್ತು ಬಾಗೇಪಲ್ಲಿ ತಾಲೂಕಿಗಳಿಗೂ ನೀರು ಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ನಿವೇಶನ ರಹಿತರಿಗೆ ನಿವೇಶನ
ಜಿಲ್ಲೆಯಾದ್ಯಂತ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳು ಸೇರಿದಂತೆ ಒಟ್ಟು ೮೨೪.೨೭ ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಜಿಲ್ಲಾಡಳಿತವು ರಾಜ್ಯದಲ್ಲೇ ಅತಿ ಹೆಚ್ಚು ನಿವೇಶನ ಹಂಚಿಕೆಗೆ ಜಮೀನು ಮಂಜೂರು ಮಾಡಿದೆ. ೮೨೪.೨೭ ಎಕರೆ ಜಮೀನನ್ನು ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ೨೬೨.೧೦ ಎಕರೆ, ಗುಡಿಬಂಡೆ ತಾಲೂಕಿನಲ್ಲಿ ೮೧.೨೮ ಎಕರೆ, ಗೌರಿಬಿದನೂರು ತಾಲೂಕಿನಲ್ಲಿ ೧೪೨.೦೫ ಎಕರೆ, ಚಿಂತಾಮಣಿ ತಾಲೂಕಿನಲ್ಲಿ ೯೨.೩೮ ಎಕರೆ, ಶಿಡ್ಲಘಟ್ಟ ತಾಲೂಕಿನಲ್ಲಿ ೧೪೪.೦೨ ಎಕರೆ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ೧೦೩.೩೩ ಎಕರೆಗಳನ್ನು ಮಂಜೂರು ಮಾಡಲಾಗಿದೆ. ಮಂಜೂರಾದ ೮೨೪.೨೭ ಎಕರೆ ಜಮೀನಿನಲ್ಲಿ ೩೮,೦೯೧ ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಿ ಬಡಾವಣೆ ಅಭಿವೃದ್ಧಿ ಮತ್ತು ನೀಲನಕ್ಷೆ ಸಿದ್ಧತೆ ಸೇರಿದಂತೆ ನಾನಾ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ೧,೬೬೪ ಹಕ್ಕುಪತ್ರಗಳನ್ನು ರಾಜೀವ್ ಗಾಂಧಿ ವಸತಿ ಅಭಿವೃದ್ಧಿ ನಿಗಮದಿಂದ ಸ್ವೀಕರಿಸಲಾಗಿದೆ. ಈ ಪೈಕಿ ಹಲವು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸಹ ವಿತರಿಸಲಾಗಿದೆ. ಉಳಿದ ೩೬,೪೨೭ ಹಕ್ಕುಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.
ಎಕೋ ಥೀಮ್ ಪಾರ್ಕ್
ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಬಳಿ ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಕಂದವಾರ ‘ಎಕೋ ಥೀಮ್ ಪಾರ್ಕ್’ನ್ನು ೮.೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಸರಕಾರದ ಅನುಮತಿ ಪಡೆದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರ್ಥಿಕ ಬಿಡ್‌ನ್ನು ಸಹ ತೆರೆಯಲಾಗಿದೆ ಎಂದ ಸಚಿವರು, ಈ ಉದ್ಯಾನವನದಲ್ಲಿ ಸರಳ ಜಿಮ್, ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಆಟದ ಅನುಕೂಲಗಳು, ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳ, ಸಂಗೀತ ಕಾರಂಜಿ, ಬೋಟಿಂಗ್, ಕಲಾಗ್ರಾಮದ ಮಳಿಗೆಗಳು, ಪಾದಾಚಾರಿ ಸೇತುವೆ ವನೌಷಧಿ ಸಸ್ಯಗಳು ಇತ್ಯಾದಿ ವಿಶೇಷ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ಮುದ ನೀಡಲಿದೆ. ಇದಲ್ಲದೇ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಿವಕುಮಾರ್, ಡಿಎಚ್‌ಒ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.