ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 13 ಯೋಜನೆಗಳ ಘೋಷಣೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಹಲವು ಹೊಸ ಜನಪರ ಯೋಜನೆಗಳನ್ನು ಘೋಷಿಸಿದರು. ಅವೆಲ್ಲವೂ ʼಅಮೃತʼಮಯವೇ ಆಗಿವೆ.
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ‘ಅಮೃತ’ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ರೈತರು, ಬಡವರು, ಮಹಿಳೆಯರು, ಉದ್ಯಮ ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕಕೊಂಡು ಹೊಸ ಯೋಜನೆಗಳನ್ನು ಘೋಷಿಸಿದರು.
ಹೊಸ ಯೋಜನೆಗಳ ವಿವರ
- ಅಮೃತ ಗ್ರಾಮ ಪಂಚಾಯತಿಗಳು
ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ - ಅಮೃತ ಗ್ರಾಮೀಣ ವಸತಿ ಯೋಜನೆ
ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ವಸತಿ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ - ಅಮೃತ ರೈತ ಉತ್ಪಾದಕ ಸಂಸ್ಥೆಗಳು
ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ. ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ. - ಅಮೃತ ನಿರ್ಮಲ ನಗರ
ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ. ನೆರವು. - ಅಮೃತ ಶಾಲಾ ಸೌಲಭ್ಯ ಯೋಜನೆ
ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ. - ಅಮೃತ ಅಂಗನವಾಡಿ ಕೇಂದ್ರಗಳು
ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು. - ಅಮೃತ ನಗರೋತ್ಥಾನ
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ ಪ್ರಾರಂಭ; ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ 75 ಕೊಳೆಗೇರಿ ಅಭಿವೃದ್ಧಿ; 75 ಕೆರೆ/ ಉದ್ಯಾನಗಳ ಅಭಿವೃದ್ಧಿ. ನಗರದ ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈ ಓವರ್, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮ. - ಅಮೃತ ಸ್ವಸಹಾಯ ಕಿರು ಉದ್ದಿಮೆಗಳು
ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ (Micro Enterprises) ರೂಪಿಸಲು ತಲಾ 1 ಲಕ್ಷ ರಂತೆ 75 ಕೋಟಿ ರೂ. ಬೀಜ ಧನ ಸೌಲಭ್ಯ. - ಅಮೃತ ಸಮುದಾಯ ಅಭಿವೃದ್ಧಿ ಯೋಜನೆ
ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ. - ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ
ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ. - ಅಮೃತ ಕೌಶಲ್ಯ ತರಬೇತಿ ಯೋಜನೆ
ರಾಜ್ಯದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಗೆ 112 ಕೋಟಿ ರೂ. ವೆಚ್ಚ. - ಸ್ಟಾರ್ಟಪ್ ಉತ್ತೇಜನ ಯೋಜನೆ
ಈ ಯೋಜನೆಯಡಿ 75 ಸ್ಟಾರ್ಟಪ್ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ. - ಅಮೃತ ಕ್ರೀಡಾ ದತ್ತು ಯೋಜನೆ
ಮುಂದಿನ ಪ್ಯಾರೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಹಾಗೂ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನ.