ಕಂದಾಯ ಸಂಗ್ರಹವಾಗದ ನೆಪದಲ್ಲಿ 4-5 ತಿಂಗಳಿಂದ ಸಿಬ್ಬಂದಿಗೆ ವೇತನವೇ ಇಲ್ಲ; ಪೌರ ಕಾರ್ಮಿಕರ ವೇತನದಲ್ಲಿ ಕಡಿತವಾದ ವಿಮೆ ಹಣವೂ ದುರುಪಯೋಗ ಆರೋಪ
by GS Bharath Gudibande
ಗುಡಿಬಂಡೆ: ಪಟ್ಟಣದಲ್ಲಿ ನಿತ್ಯವೂ ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಪ್ರತೀ ಮನೆ ಬಾಗಿಲಿಗೇ ಬರುವ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರು ಕಸ ಸಂಗ್ರಹ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲೂ ಇವರೆಲ್ಲ ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಆದರೆ; ಹಿರಿಯ ಅಧಿಕಾರಿಗಳು, ಜನ ಪ್ರತಿನಿಧಿಗಳು ಕೇವಲ ಹೆಸರಿಷ್ಟೇ ಕೋವಿಡ್ ವಾರಿಯರ್ಸ್ ಪಟ್ಟ ನೀಡಿ ಭಜನೆ ಮಾಡುತ್ತಿದ್ದರೂ ಇವರಿಗೆ ಆಗುತ್ತಿರುವ ಅನ್ಯಾಯಕ್ಕೆ ಎಣೆಯೇ ಇಲ್ಲದಾಗಿದೆ.
ಸಭೆ ಸಮಾರಂಭಗಳಲ್ಲಿ ಪೌರ ಕಾರ್ಮಿಕರನ್ನು ಹೊಗಳುತ್ತಲೇ ಅವರಿಗೆ ಚಪ್ಪಾಳೆ ತಟ್ಟಿ ಹೊಟ್ಟೆ ತುಂಬಿಸುವ ಅಗ್ಗದ ತಂತ್ರಗಳನ್ನು ಅಧಿಕಾರಿಗಳು, ಜನ ಪ್ರತಿನಿಧಿಗಳು ಮಾಡುತ್ತಿದ್ದಾರೆ. ಅದರ ಹೊರತಾಗಿ ಅವರಿಗೆ ನಾಲ್ಕೈದು ತಿಂಗಳಿಂದ ಸಿಗದ ವೇತನದ ಬಗೆ ಇವರಾರೂ ಚಕಾರ ಎತ್ತುತ್ತಿಲ್ಲ.
‘ಕ್ಯಾಶ್ ಆ್ಯಂಡ್ ಕ್ಯಾರಿ’ ವ್ಯವಸ್ಥೆಯಲ್ಲಿ ತಿಂಗಳ ವೇತನ ತಡವಾದರೆ ಕುಟುಂಬ ನಡೆಸುವುದೇ ಕಷ್ಟ ಎನ್ನುವ ಸ್ಥಿತಿ ಈಗ ಪೌರ ಕಾರ್ಮಿಕರಿಗಿದೆ. ಅದರಲ್ಲೂ ಕೋವಿಡ್ʼನಿಂದ ಜೀವನ ನಡೆಸಲು ಕಷ್ಟವಾಗಿದ್ದು, 4-5 ತಿಂಗಳಿಂದ ವೇತನವನ್ನೇ ಕಂಡಿಲ್ಲ! ಆದರೂ, ಪೌರ ಕಾರ್ಮಿಕರು ಎಲ್ಲರ ಆರೋಗ್ಯದ ದೃಷ್ಟಿಯಿಂದ ಪ್ರತೀ ದಿನ ಪಟ್ಟಣದಲ್ಲಿ ಸ್ವಚ್ಚತೆ ಮಾಡುತ್ತಾ ಮಾನವೀಯತೆ ಮರೆದಿದ್ದಾರೆ.
ಪೌರ ಕಾರ್ಮಿಕರ ಬದುಕು ಅತಂತ್ರ
ವಾಟರ್ ಪಂಪ್ ಆಪರೇಟರ್, ಕಂಪ್ಯೂಟರ್ ಆಪರೇಟರ್, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್, ಹೆಲ್ಪರ್, ಸ್ಚಚ್ಛತಾ ಕಾರ್ಮಿಕರು, ವಾಹನ ಚಾಲಕರಿಗೆ ವೇತನ ಸಿಕ್ಕಿಲ್ಲ. ವೇತನ ಮತ್ತು ಸೇವಾ ಭದ್ರತೆ ಇಲ್ಲದೆ ಇವರೆಲ್ಲರೂ ಅತಂತ್ರಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಪಪಂ ಅಧಿಕಾರಿಗಳು ಕೂಡಲೇ ವೇತನ ನೀಡಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಆಶಾ ಜಯಪ್ಪ ಒತ್ತಾಯ ಮಾಡಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಆಶಾ ಜಯಪ್ಪ; “ಪೌರ ಕಾರ್ಮಿಕರಿಗೆ ವೇತನ ನೀಡದಿರುವುದು ನಿಜಕ್ಕೂ ಅಕ್ಷಮ್ಯ. ಕಂದಾಯ ವಸೂಲಿ ಆಗಲಿಲ್ಲ ಎಂದು ಸಂಬಳ ಕೊಡದಿದ್ದರೆ ಹೇಗೆ? ಕಂದಾಯ ವಸೂಲಿ ಆಗಲಿಲ್ಲ ಎಂದರೆ ಪಟ್ಟಣದ ಸ್ವಚ್ಛತೆ ಮಾಡದಿರಲು ಸಾಧ್ಯವೇ?” ಎಂದು ಪ್ರಶ್ನಿಸುತ್ತಾರೆ.
ಸಮಸ್ಯೆಗೆ ಕಾರಣ ಏನು?
ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ವೇತನವನ್ನು ಪಪಂ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಂದಾಯದಿಂದ ನೀಡಲಾಗುತ್ತಿತ್ತು. ಆದರೆ ಈ ವರ್ಷ ಸರಿಯಾಗಿ ಕಂದಾಯ ಸಂಗ್ರಹವಾಗದ ಕಾರಣ ಸರಿಯಾದ ಸಮಯಕ್ಕೆ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ಪಪಂ ಮುಖ್ಯಾಧಿಕಾರಿ ರಾಜಶೇಖರ್ ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದರು.
ಕೊರೋನಾ ಸಂದರ್ಭದಲ್ಲಿ ಪಟ್ಟಣದ ಜನರ ಆರೋಗ್ಯ ದೃಷ್ಟಿಯಿಂದ ಪೌರ ಕಾರ್ಮಿಕರು ಜೀವಭಯ ತೊರೆದು ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಆದರೆ, ಅವರಿಗೆ ನಾಲ್ಕೈದು ತಿಂಗಳಿಂದ ವೇತನ ನೀಡದೇ ಅವರ ಕುಟುಬಗಳನ್ನು ಬೀದಿ ಪಾಲು ಮಾಡಿ ಅವರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ, ಪೌರ ಕಾರ್ಮಿಕರಿಂದ ಎಲ್.ಐ.ಸಿ ಗೆ ಅಂತ ಹಣ ಸಂಗ್ರಹಿಸಿದ್ದು, ಆ ಹಣದಲ್ಲಾದರೂ ವೇತನ ನೀಡಬೇಕು.
ಆಶಾ ಜಯಪ್ಪ, ಪಪಂ ಮಾಜಿ ಸದಸ್ಯೆ, ಗುಡಿಬಂಡೆ
ಈ ಹಿಂದೆ ಎಸ್.ಎಫ್.ಸಿ ಯಿಂದ ಸರಕಾರ ವೇತನ ಪಾವತಿ ಮಾಡುತ್ತಿದ್ದು, ಪ್ರಸ್ತುತ ಅದನ್ನು ಸರಕಾರ ನಿಲ್ಲಿಸಿದೆ. ಪಪಂ ವ್ಯಾಪ್ತಿಯಲ್ಲಿ ಸರಿಯಾಗಿ ಕಂದಾಯ ಸಂಗ್ರವಾಗದ ಕಾರಣ ಪೌರ ಕಾರ್ಮಿಕರಿಗೆ ವೇತನ ನೀಡಲು ವಿಳಂಬವಾಗಿದೆ, ನಾಲ್ಕೈದು ದಿನಗಳಲ್ಲಿ ಅವರ ಸಂಬಳವನ್ನು ನೀಡುತ್ತೇವೆ.
ರಾಜಶೇಖರ್. ಮುಖ್ಯಾಧಿಕಾರಿ, ಗುಡಿಬಂಡೆ ಪಟ್ಟಣ ಪಂಚಾಯಿತಿ
Comments 1