ಸಂಪುಟ ಸಭೆಗೆ ಆನಂದ್ ಸಿಂಗ್ ಚಕ್ಕರ್!
ಬೆಂಗಳೂರು: ಬಿಜೆಪಿಯಲ್ಲಿ ಉಂಟಾಗಿರುವ ಖಾತೆ ಹಂಚಿಕೆ ಬಿಕ್ಕಟ್ಟಿನ ಕರಿನೆರಳು ಸಂಪುಟದ ಮೇಲೂ ಬಿದ್ದಿದೆ.
ಇಂದು ನಡೆದ ಕ್ಯಾಬಿನೆಟ್ ಸಭೆಗೆ ಸಚಿವ ಆನಂದ್ ಸಿಂಗ್ ಬರಲಿಲ್ಲ. ಇದರೊಂದಿಗೆ ಈ ತಿಕ್ಕಾಟ ಮತ್ತಷ್ಟು ಜಟಿಲವಾದಂತೆ ಕಾಣುತ್ತಿದೆ.
ಖಾತೆ ಹಂಚಿಕೆ ನಂತರ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಆನಂದ್ ಸಿಂಗ್ ಇಲ್ಲದಿರುವುದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಜುಗರ ಉಂಟು ಮಾಡಿದ್ದು, ಈ ಬಗ್ಗೆ ತಮ್ಮ ಆಪ್ತ ಸಚಿವರಲ್ಲಿ ಬೇಸರ ವ್ಯಕ್ತಪಡಿಸಿದರು ಎಂಬ ಮಾಹಿತಿ ಸಿಕ್ಕಿದೆ.
ನಿನ್ನೆ ದಿಲ್ಲಿಯಲ್ಲಿದ್ದ ಆನಂದ್ ಸಿಂಗ್ ಇವತ್ತು ಬೆಂಗಳೂರು ಕಡೆ ಮುಖ ಮಾಡಿಲ್ಲ. ಬಹುಶಃ ಅವರು ದಿಲ್ಲಿಯಲ್ಲೇ ಉಳಿದಿದ್ದಾರಾ? ಅಥವಾ ಹೊಸಪೇಟೆಗೆ ವಾಪಸ್ ಆಗಿದ್ದಾರಾ? ಎಂಬ ಮಾಹಿತಿ ಸಿಕ್ಕಿಲ್ಲ. ಇಂದು ಬೆಳಗ್ಗೆ ಅವರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮಗೆ ಹಂಚಿಕೆಯಾಗಿರುವ ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಖಾತೆಯ ಬಗ್ಗೆ ತೀವ್ರ ಅತೃಪ್ತಿ ಹೊಂದಿರುವ ಸಿಂಗ್, ತಮ್ಮ ಬೇಸರವನ್ನು ಬಹಿರಂಗವಾಗಿಯೇ ಹೊರಹಾಕಿದ್ದು, ಸಂಪಟ ಸಭೆಯಿಂದ ದೂರ ಉಳಿಯುವ ಮೂಲಕ ಮುಖ್ಯಮಂತ್ರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಕೇಳಿದ ಖಾತೆ ಕೊಡಲಿ ಇಲ್ಲವಾದರೆ ಸಚಿವ ಸ್ಥಾನವೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಂತಿರುವ ಆನಂದ್ ಸಿಂಗ್, ಈವರೆಗೆ ವಿಕಾಸಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕಚೇರಿಗೂ ಹೋಗಿಲ್ಲ ಹಾಗೂ ಇದುವರೆಗೂ ಅಧಿಕಾರವನ್ನು ವಹಿಸಿಕೊಂಡಿಲ್ಲ. ಖಾತೆ ಹಂಚಿಕೆಯಾಗಿ ಹೆಚ್ಚೂ ಕಮ್ಮಿ ೧೪ ದಿನಗಳೇ ಕಳೆದರೂ ಖಾತೆ ಹಂಚಿಕೆ ಸಿಕ್ಕು ಬಗೆಹರಿದಿಲ್ಲ.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಆನಂದ್ ಸಿಂಗ್ ಎರಡು ಸಲ ಮಾತುಕತೆ ನಡಸಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಸಂಧಾನ ಮಾಡಿದ್ದರು. ಆದರೆ,ಇದಾವುದು ಫಲ ನೀಡಿಲ್ಲ.