ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿವೆ ರೆಸಿಡೆನ್ಸಿಯಲ್ ಟೌನ್‌ಶಿಪ್
ಬೆಂಗಳೂರು: ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (ರೆಸಿಡೆನ್ಸಿಯಲ್ ಟೌನ್‍ಶಿಪ್)ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ ಈ ವಿಷಯ ತಿಳಿಸಿದ್ದಾರೆ.
ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯ ನಿರ್ವಹಣಾಕಾರಿ (ಸಿಇಒ) ಎನ್.ಶಿವಶಂಕರ ಮತ್ತಿತರೆ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕೋಲಾರ ಜಿಲ್ಲೆಯ ವೇಮಗಲ್ 2ನೇ ಹಂತದ 511 ಎಕರೆಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲು ಸರಕಾರ ಉದ್ದೇಶಿಸಿದ್ದು, ಈ ಜಾಗದಲ್ಲಿ ಜಾಗದಲ್ಲಿ ಶಾಲೆ-ಕಾಲೇಜು, ಆರೋಗ್ಯ ಕೇಂದ್ರ, ವಾಣಿಜ್ಯ ಸಂಕೀರ್ಣ, ಉದ್ಯಾನವನ ಸೇರಿ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಲಾಗವುದು.
ವೇಮಗಲ್ ಮಾತ್ರವಲ್ಲದೆ ರಾಜ್ಯದ ಇನ್ನೂ ಹಲವಾರು ಕಡೆ ಇಂಥ ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ನಿರಾಣಿ ಹೇಳಿದ್ದಾರೆ.
ಸಮಗ್ರ ಕೈಗಾರಿಕಾ ನಿವಾಸಿಗಳ ನಗರ (ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ರೆಸಿಡೆನ್ಸಿಯಲ್ ಟೌನ್‍ಶಿಪ್) ಪರಿಕಲ್ಪನೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಜಾಗವನ್ನು ಶೇ.10ರಿಂದ 15ರಷ್ಟು ವಸತಿ ಬಡಾವಣೆಯ ಉದ್ದೇಶಕ್ಕಾಗಿ ಕಾಯ್ದಿರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಾಕ್-ಟು-ವರ್ಕ್ ಎಂಬ ಪರಿಕಲ್ಪನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಯೋಜನೆ ಇದಾಗಿದ್ದು, ಅದೇ ದಿಕ್ಕಿನಲ್ಲೇ ಟೌನ್‌ಶಿಪ್‌ಗಳು ನಿರ್ಮಾಣ ಆಗಲಿವೆ.
ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಾವು ವಾಸಿಸುವ ಪ್ರದೇಶದಿಂದ ಬಂದು ಹೋಗಲು ಸಂಚಾರ ದಟ್ಟಣೆ, ವಾಹನಗಳ ಸಮಸ್ಯೆ, ಸಮಯದ ಅಭಾವ.. ಹೀಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ.
ಬೆಂಗಳೂರಿನಲ್ಲಿ ಕೈಗಾರಿಕೆಗಳಿದ್ದರೆ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸೇರಿ ದೂರದಿಂದ ಬರಲು ಸಿಬ್ಬಂದಿಗೆ ಅನಾನುಕೂಲವಾಗಲಿದೆ. ಕೈಗಾರಿಕಾ ಪ್ರದೇಶದಲ್ಲೇ ವಸತಿಗಳನ್ನು ನಿರ್ಮಿಸಿಕೊಟ್ಟರೆ ಸಮಯದ ಉಳಿತಾಯ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಸರಕಾರದ್ದು.
ಈ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ವಸತಿ ಸಮ್ಮುಚ್ಚಯಗಳು, ಆಸ್ಪತ್ರೆ, ಮಾಲ್‍ಗಳು, ಶಾಲಾ-ಕಾಲೇಜುಗಳು, ನೀರಿನ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳೂ ಒಂದೇ ಸೂರಿನಲ್ಲಿ ಲಭ್ಯವಾಗಲಿವೆ. ಈ ಬಗ್ಗೆ ವಿಸ್ತೃತವಾಗಿ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಕೈಗಾರಿಕಾ ಸಚಿವರು ತಿಳಿಸಿದರು.
“ಶೀಘ್ರದಲ್ಲೇ ಉನ್ನತ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಾಗುವುದು. ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ವಿಷಯಗಳ ಬಗ್ಗೆ ಚರ್ಚಿಸುಲಾಗುವುದು. ಕೈಗಾರಿಕಾ ವಲಯ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣದಲ್ಲಿ ರಾಜ್ಯವನ್ನು ಮುಂಚೂಣಿಯ ಸ್ಥಾನದಲ್ಲಿ ಕಾಯ್ದುಕೊಳ್ಳುವಲ್ಲಿ ಸರಕಾರ ಬದ್ದವಾಗಿದೆ” ಎಂದು ಅವರು ಹೇಳಿದರು.
ಸಈ ಸಭೆಯಲ್ಲಿ ಬಾಷ್ ಕಂಪನಿಯ ವ್ಯವಸ್ಥಾಪಕ ನಿದೇರ್ಶಕ ಹಾಗೂ ಭಾರತದ ಬಾಷ್ ಸಮೂಹ ಸಂಸ್ಥೆ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹಾಗೂ ಬ್ರಿಗೇಡ್ ಎಂಟಪ್ರೈಸಸ್‌ನ ವ್ಯವಸ್ಥಾಪಕ ನಿದೇರ್ಶಕ ಮತ್ತು ಅಧ್ಯಕ್ಷ ಎಂ.ಆರ್.ಜೈ ಶಂಕರ್, ಬಿಸಿಐಸಿ ಅಧ್ಯಕ್ಷ ಟಿ.ಆರ್.ಪರಶುರಾಮನ್ ಉಪಸ್ಥಿತರಿದ್ದರು.
ಕೈಗಾರಿಕೆಗಳ ಉದ್ದೇಶಕ್ಕಾಗಿ ರಾಜ್ಯಾದ್ಯಂತ ಒಟ್ಟು 82 ಸಾವಿರಕ್ಕೂ ಅಧಿಕ ಎಕರೆ ಜಮೀನು ಇದೆ. ಇದರಲ್ಲಿ 188 ಕೈಗಾರಿಕಾ ಘಟಕಗಳಿದ್ದು, 20 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ 2ರಿಂದ 3 ವರ್ಷಗಳಲ್ಲಿ 9 ಸಾವಿರ ಎಕರೆ ಜಮೀನನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವಿವರ
ಒಟ್ಟು ಕೈಗಾರಿಕಾ ಪ್ರದೇಶಗಳು: 188
ಒಟ್ಟು ಎಕರೆ: 81,864
ಘಟಕಗಳು: 20,972
ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಭೂಮಿಯ ವಿವರ
ಒಟ್ಟು ಭೂಮಿ: 9010 ಎಕರೆ
ಕೋಲಾರ: ವೇಮಗಲ್ 2ನೇ ಹಂತದಲ್ಲಿ 511 ಎಕರೆ
ರಾಮನಗರ: ಹಾರೋಹಳ್ಳಿ 5ನೇ ಹಂತದಲ್ಲಿ 912 ಎಕರೆ
ಹಾವೇರಿ: ಗಣಚೂರುನಲ್ಲಿ 407 ಎಕರೆ
ಮಂಡ್ಯ: ಕುದುರುಗುಂಡೆಯಲ್ಲಿ 109 ಎಕರೆ
ವಿಜಯಪುರ: ಮುಲವಾಡದಲ್ಲಿ 2500 ಎಕರೆ
ತುಮಕೂರು: ಶಿರಾದ 2ನೇ ಹಂತದಲ್ಲಿ 1200