ಗುಡಿಬಂಡೆಯಲ್ಲಿ ಏಕೈಕ ಖಾಸಗಿ ನೊಂದಾಯಿತ ಅಭ್ಯರ್ಥಿಗೆ ಮಾತ್ರ ಪರೀಕ್ಷೆ
by GS Bharath Gudibande
ಗುಡಿಬಂಡೆ: ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಇಂದು ನಡೆದ ಪಿಯುಸಿ ಪರೀಕ್ಷೆಗೆ ಏಕೈಕ ಖಾಸಗೀ ವಿದ್ಯಾರ್ಥಿನಿ ಹಾಜರಾಗಿದ್ದರು. ಇವರಿಗಾಗಿ ಬರೋಬ್ಬರಿ 14 ಸಿಬ್ಬಂದಿ ಪರೀಕ್ಷೆಯ ಕರ್ತವ್ಯ ನಿರ್ವಹಿಸಿದ ಅಪರೂಪದ ಪ್ರಸಂಗ ನಡೆಯಿತು.
ಪಿಯುಸಿ ಪರೀಕ್ಷೆಯು ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಕೋವಿಡ್ ನಿಯಮಗಳೊಂದಿಗೆ ಸೂಕ್ತ ಭದ್ರತೆಯನ್ನು ಆಯೋಜಿಸಿ ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು.
ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ವಿದ್ಯಾರ್ಥಿನಿ ವನಿತಾ ಅವರು ಇಂದು ಕನ್ನಡ ಪರೀಕ್ಷೆ ಬರೆದಿದ್ದಾರೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅವರು ಖಾಸಗಿಯಾಗಿ ವಿದ್ಯಾರ್ಥಿನಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಕೇವಲ ಒಬ್ಬ ವಿದ್ಯಾರ್ಥಿನಿಗೆ ಮಾತ್ರ ಪರೀಕ್ಷೆ ಬರೆಯಲು ಇಷ್ಟೊಂದು ಕ್ರಮಬದ್ಧವಾಗಿ ವ್ಯವಸ್ಥೆ ಮಾಡಿದ್ದ ಶಿಕ್ಷಣ ಇಲಾಖೆಯ ಬದ್ಧತೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿರಳ ಪರೀಕ್ಷಾ ಪ್ರಸಂಗ ಎಲ್ಲರಿಗೂ ಅಚ್ಚರಿ ಉಂಟು ಮಾಡಿತು. ಈ ವಿದ್ಯಾರ್ಥಿನಿಗೆ ಉತ್ತಮ ಫಲಿತಾಂಶ ಸಿಗಲಿ ಎಂದು ಜನ ಹಾರೈಸಿದ್ದಾರೆ.
ವಯೋಮಿತಿ ಆಧಾರದ ಮೇಲೆ 18 ವರ್ಷ ಮೇಲ್ಪಟ್ಟವರು ಸರಕಾರದ ಸೂಚನೆಯಂತೆ ಖಾಸಗೀ ನೊಂದಾಯಿತ ಅಭ್ಯರ್ಥಿ ಎಂದು ಪರೀಕ್ಷೆಗೆ ಶುಲ್ಕ ಪಾವತಿಸಿಕೊಂಡು ಅಂತಹವರಿಗೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡುತ್ತದೆ. ಈ ವರ್ಷ ಗುಡಿಬಂಡೆ ತಾಲೂಕಿನಲ್ಲಿ ಒಬ್ಬ ವಿದ್ಯಾರ್ಥಿನಿ ಮಾತ್ರ ಖಾಸಗೀ ವಿದ್ಯಾರ್ಥಿಯಾಗಿ ನೊಂದಣಿಯಾಗಿದ್ದು, ಅವರು ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪಿಯುಸಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಅವರು ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದರು.
ಫ್ರೆಶರ್ಸ್, ಪುನರಾವರ್ತಿತ ವಿದ್ಯಾರ್ಥಿಗಳು ಪಾಸ್
ಗುಡಿಬಂಡೆ ತಾಲೂಕಿನಲ್ಲಿ ಒಂದೇ ಒಂದು ಪದವಿ ಪೂರ್ವ ಕಾಲೇಜು ಇದ್ದು, ಕೋವಿಡ್ ಕಾರಣ ಪಿಯುಸಿ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಫ್ರೆಶರ್ಸ್ ಮತ್ತು ಪುನರಾವರ್ತಿತರೂ ಸೇರಿ 90 ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಸರಕಾರ ಪಾಸ್ ಮಾಡಿದೆ. ಒಬ್ಬರು ಮಾತ್ರ ಖಾಸಗೀ ನೊಂದಾಯಿತ ವಿದ್ಯಾರ್ಥಿ ಇದ್ದು, ಅವರಿಗೆ ಇಂದು ಪರೀಕ್ಷೆ ನಡೆಸಲಾಯಿತು.
ಪರೀಕ್ಷಾ ಮುಖ್ಯ ಅಧೀಕ್ಷ, ಉಪ ಅಧೀಕ್ಷಕ, ಉತ್ತರ ಪತ್ರಿಕೆ ಪಾಲಕ, ಜಾಗೃತ ದಳ ಹಾಗೂ ಕೊಠಡಿ ಮೇಲ್ವಿಚಾರಕರು, ಕಚೇರಿ ಸಿಬ್ಬಂದಿ ಸೇರಿ ಒಟ್ಟು 8ರಿಂದ 10 ಜನ ಸಿಬ್ಬಂದಿ ಈ ವಿದ್ಯಾರ್ಥಿನಿಗಾಗಿ ಕೆಲಸ ಮಾಡಿದರು. ತನ್ನೊಬ್ಬಳಿಗೆ ಇಷ್ಟೆಲ್ಲ ಸಿಬ್ಬಂದಿ ಕೆಲಸ ಮಾಡಿದ್ದಕ್ಕಾಗಿ ಖುಷಿಗೊಂಡ ಆ ವಿದ್ಯಾರ್ಥಿನಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯ ಸರಕಾರದ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ, ಖಾಸಗಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಎಲ್ಲಾ ಸೌಲಭ್ಯಗಳನ್ನು ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದರು. ತಹಶೀಲ್ದಾರ್ ಅವರ ಜತೆ ನಾವು ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿಂದ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಸುರಕ್ಷಿತವಾಗಿ ತಂದು ಪರೀಕ್ಷಾ ಮೇಲ್ವಿಚಾರಕರಿಗೆ ಹಸ್ತಾಂತರ ಮಾಡಿ ತಮ್ಮ ಜವಾಬ್ದಾರಿ ನಿರ್ವಹಿಸಿದೇವೆ.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ