ಬೆಂಗಳೂರು: ಮಾಲೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎಂ.ಕವಿತಾ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಕವಿತಾ ಅವರು ಪ್ರೊ.ಎಲ್.ಪಿ.ರಾಜು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಹಿಸ್ಟಾರಿಕಲ್ ಅಂಡ್ ಕಲ್ಚರಲ್ ಸ್ಟಡಿ ಆಫ್ ಮೊರಸು ಒಕ್ಕಲಿಗಾಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು (ಸೌತ್-ಈಸ್ಟರ್ನ್ ಕರ್ನಾಟಕ ರೀಜನ್)” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ತುಮಕೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ.
ರಾಜ್ಯದ ವಕ್ಕಲಿಗ ಸಮುದಾಯದ ವಿವಿಧ ಪಂಗಡಗಳ ಪೈಕಿ ಮೊರಸು ವಕ್ಕಲಿಗರ ಪಂಗಡವು ಬಹಳ ಮುಖ್ಯವಾದ ಪಂಗಡವಾಗಿದ್ದು, ಸಾಂಸ್ಕೃತಿಕವಾಗಿ ಸುದೀರ್ಘ ಇತಿಹಾಸ ಹೊಂದಿದೆ. ಅಲ್ಲದೆ, ಕೃಷಿಯನ್ನೇ ನಂಬಿಕೊಂಡಿರುವ ಈ ವಕ್ಕಲಿಗರು ಹೆಚ್ಚಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಡೀ ಮೊರಸು ವಕ್ಕಲಿಗರ ಕಸುಬು, ಬೆಳವಣಿಗೆ, ಸಾಂಪ್ರದಾಯ, ಸಾಂಸ್ಕೃತಿಕ ಹಿನ್ನೆಲೆ ಇತ್ಯಾದಿಗಳ ಮೇಲೆ ಕೆ.ಎಂ.ಕವಿತಾ ಅವರು ತಮ್ಮ ಮಹಾ ಪ್ರಬಂಧದಲ್ಲಿ ಬೆಳಕು ಚೆಲ್ಲಿದ್ದಾರೆ.