ಬೆಂಗಳೂರು: ಭಾರತೀಯ ಸೇನೆಯ ಆಯ್ಕೆ ಮಂಡಳಿಯು 26 ವರ್ಷ ಸೇವೆ ಪೂರೈಸಿದ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಸೇವಾವಧಿ ಆಧರಿತ–ಟೈಮ್ ಸ್ಕೇಲ್) ಶ್ರೇಣಿಗೆ ಬಡ್ತಿ ನೀಡಲು ಹಾದಿಯನ್ನು ಮುಕ್ತಗೊಳಿಸಿದೆ.
ಕಾರ್ಪ್ಸ್ ಆಫ್ ಸಿಗ್ನಲ್ಸ್, ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಸ್ (ಇಎಂಇ) ಹಾಗೂ ಕಾರ್ಪ್ಸ್ ಆಫ್ ಎಂಜಿನಿಯರ್ಸ್ನೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಗೆ ಕರ್ನಲ್ ಶ್ರೇಣಿಗೆ ಬಡ್ತಿ ಪಡೆಯಲು ಅನುಮೋದಿಸಿರುವುದು ಇದೇ ಮೊದಲು.
ಈ ಹಿಂದೆ, ಸೇನಾ ವೈದ್ಯಕೀಯ ಪಡೆ (ಎಎಂಸಿ), ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಜೆಎಜಿ) ಮತ್ತು ಸೇನಾ ಶಿಕ್ಷಣ ಪಡೆ (ಎಇಸಿ) ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್ ಹುದ್ದೆಗೆ ಬಡ್ತಿ ಅನ್ವಯವಾಗಿಗುತ್ತಿತ್ತು.
ಭಾರತೀಯ ಸೇನೆಯ ಹೆಚ್ಚಿನ ಶಾಖೆಗಳಿಗೆ ಬಡ್ತಿ ಮಾರ್ಗಗಳ ವಿಸ್ತರಣೆಯು ಮಹಿಳಾ ಅಧಿಕಾರಿಗಳಿಗೆ ವೃತ್ತಿ ಅವಕಾಶಗಳು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಈಗಾಗಲೇ ಭಾರತೀಯ ಸೇನೆಯ ಬಹುಪಾಲು ಶಾಖೆಗಳ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವಾವಧಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರೊಂದಿಗೆ, ಈಗಿನ ಕ್ರಮವು ಭಾರತೀಯ ಸೇನೆಯ ಲಿಂಗ-ತಟಸ್ಥ ನಿಲುವನ್ನು ವ್ಯಾಖ್ಯಾನಿಸುತ್ತದೆ.
ಸೇವಾವಧಿ ಆಧರಿತವಾಗಿ ಕರ್ನಲ್ ಶ್ರೇಣಿಗೆ ಆಯ್ಕೆಯಾದ ಐದು ಮಹಿಳಾ ಅಧಿಕಾರಿಗಳಗಳೆಂದರೆ ಕಾರ್ಪ್ಸ್ ಆಫ್ ಸಿಗ್ನಲ್ಸ್ ನ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದಾನ, ಇಎಂಇ ಕಾರ್ಪ್ಸ್ನ ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್ ಮತ್ತು ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್ ಮತ್ತು ಕಾರ್ಪ್ಸ್ ಆಫ್ ಎಂಜಿನಿಯರ್ಸ್ನ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಹಾಗೂ ಲೆಫ್ಟಿನೆಂಟ್ ಕರ್ನಲ್ ರಿಚಾ ಸಾಗರ.